ರಾಜು ತಾಳಿಕೋಟೆ ಅವರದ್ದು ಜವಾರಿ ಭಾಷೆಯ ಸಹಜ ಅಭಿನಯ-ಸಾಹಿತಿ ಸತೀಶ ಕುಲಕರ್ಣಿ

| Published : Oct 17 2025, 01:03 AM IST

ರಾಜು ತಾಳಿಕೋಟೆ ಅವರದ್ದು ಜವಾರಿ ಭಾಷೆಯ ಸಹಜ ಅಭಿನಯ-ಸಾಹಿತಿ ಸತೀಶ ಕುಲಕರ್ಣಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜು ತಾಳಿಕೋಟೆ ಅವರು ತಮ್ಮ ಜವಾರಿ ಭಾಷೆಯ ಸಹಜ ಅಭಿನಯದಿಂದಾಗಿ ಜನ ಸಾಮನ್ಯರಿಗೆ ಆಕರ್ಷಣೀಯ ಕೇಂದ್ರವಾಗಿದ್ದರು ಎಂದು ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಹೇಳಿದರು.

ಹಾವೇರಿ: ರಾಜು ತಾಳಿಕೋಟೆ ಅವರು ತಮ್ಮ ಜವಾರಿ ಭಾಷೆಯ ಸಹಜ ಅಭಿನಯದಿಂದಾಗಿ ಜನ ಸಾಮನ್ಯರಿಗೆ ಆಕರ್ಷಣೀಯ ಕೇಂದ್ರವಾಗಿದ್ದರು ಎಂದು ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಡಿವೈಎಫ್, ಎಸ್‌ಎಫ್‌ಐ, ಅಲೆಮಾರಿ ಸಮುದಾಯ ಸಂಘಟನೆ, ಡಿಎಸ್‌ಎಸ್ ಹಾಗೂ ಸಾಹಿತಿ ಕಲಾವಿದರ ಬಳಗ ಸೇರಿದಂತೆ ಸಮಾನ ಮನಸ್ಕ ಪ್ರಗತಿಪರ ಸಂಘಟನೆಗಳು ಆಯೋಜಿಸಿದ್ದ ರಾಜು ತಾಳಿಕೋಟೆ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನಮ್ಮ ನಾಡಿನಲ್ಲಿ ಕಂಪೆನಿ ನಾಟಕಗಳಿಂದ ಅನೇಕ ಕಲಾವಿದರು ಸಿನಿಮಾ ರಂಗಕ್ಕೆ ಹೋಗಿದ್ದಾರೆ. ಅಪ್ರತಿಮ ಪ್ರತಿಭೆಯಿಂದಾಗಿ ಸಿನಿಮಾ ರಂಗವು ಅವರನ್ನು ತೊಡಗಿಸಿಕೊಳ್ಳುವಂತಹ ಹಾಸ್ಯ ಕಲೆ ರಾಜು ತಾಳಿಕೋಟೆ ಅವರಲ್ಲಿತ್ತು ಎಂದು ಹೇಳಿದರು.

ನಾಟಕ ಕಂಪೆನಿಗಳು ಸಂಕಷ್ಟಕ್ಕೆ ಸಿಲುಕಿದಾಗೆಲ್ಲ ಆ ಕಂಪನಿಗಳು ಪುನಶ್ಚೇತನಗೊಳ್ಳಲು ರಾಜು ತಾಳಿಕೋಟೆ ಸದಾ ಶ್ರಮಿಸುತ್ತಿದ್ದರು. ಧಾರವಾಡ ರಂಗಾಯಣಕ್ಕೆ ನಿರ್ದೇಶಕರಾಗಿ ಆಯ್ಕೆಯಾಗಿ ಬಂದ ಮೇಲೆ ಒಳ್ಳೆಯ ರಂಗ ಚಟುವಟಿಕೆ ಆಯೋಜಿಸಿದ್ದರಲ್ಲದೇ, ಉತ್ತಮ ಕಾರ್ಯಯೋಜನೆಗಳನ್ನು ಹಾಕಿಕೊಂಡಿದ್ದರು ಎಂದರು.

ಡಿಎಸ್‌ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಉಡಚಪ್ಪ ಮಾಳಗಿ ಮಾತನಾಡಿ, ರಂಗಭೂಮಿಯಲ್ಲಿ ಸದಾ ಸಕ್ರಿಯವಾಗಿರುತ್ತಿದ್ದ ರಾಜು ತಾಳಿಕೋಟೆ ಅವರು ತಮ್ಮ ನಾಟಕಗಳ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುತ್ತಿದ್ದರು ಎಂದರು.

ಡಿವೈಎಫ್ ಜಿಲ್ಲಾ ಮುಖಂಡರಾದ ವಕೀಲ ನಾರಾಯಣ ಕಾಳೆ ಮಾತನಾಡಿ, ಸಮಾಜದಲ್ಲಿರುವ ಬಡ ಜನ ವಿರೋಧಿ ರಾಜಕಾರಣವನ್ನು ತಮ್ಮ ನಾಟಕಗಳ ಮೂಲಕ ಜನತೆಗೆ ತಲುಪಿಸುತ್ತಿದ್ದರು. ಹಿರಿಯ ಕಲಾವಿದರು ಇನ್ನಷ್ಟು ಕಾಲ ಇರಬೇಕಿತ್ತು ಎಂದರು.

ರಾಜ್ಯ ಅಲ್ಪಸಂಖ್ಯಾತರ ಆಯೋಗದ ಸದಸ್ಯೆ ಪರಿಮಳಾ ಜೈನ ಮಾತನಾಡಿ, ತಾಳಿಕೋಟೆ ಅವರು ರಂಗಭೂಮಿಯ ಗಟ್ಟಿಧ್ವನಿಯಾಗಿದ್ದರು. ಜನರ ಬದುಕಿನ ಪ್ರಶ್ನೆಗಳನ್ನು ವಿಡಂಬನೆಯ ಮೂಲಕ ಸ್ಪಷ್ಟವಾದ ಭಾಷೆಯಲ್ಲಿ ಹೇಳುತ್ತಿದ್ದರು ಎಂದರು.

ಅಧ್ಯಕ್ಷತೆ ವಹಿಸಿದ್ದ ಡಿವೈಎಫ್ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ರಾಜು ತಾಳಿಕೋಟೆ ಅವರು ಈ ನೆಲದ ಭಾವೈಕ್ಯತೆಯನ್ನು ತಮ್ಮ ಬದುಕಿನುದ್ದಕ್ಕೂ ಸಹಜವಾಗಿ ಉಸಿರಿಕೊಂಡು ಬಾಳಿದ ಅದ್ಭುತ ಕಲಾವಿದರು ಎಂದರು.

ಅಲೆಮಾರಿ ಸಮುದಾಯ ಸಂಘಟನೆಯ ಜಿಲ್ಲಾಧ್ಯಕ್ಷ ಶೆಟ್ಟಿ ವಿಭೂತಿ ನಾಯಕ, ಅಹಿಂದ ಮುಖಂಡರಾದ ವಕೀಲ ಬಸವರಾಜ ಹಾದಿಮನಿ, ರೈತ ಸಂಘಟನೆಯ ಜಿಲ್ಲಾ ಮುಖಂಡರಾದ ಸುರೇಶ ಛಲವಾದಿ, ರಾಜೇಂದ್ರ ಹೆಗಡೆ ಮಾತನಾಡಿದರು.

ಸಭೆಯಲ್ಲಿ ಅಗಲಿದ ರಾಜು ತಾಳಿಕೋಟೆ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪ್ರಾಸ್ತಾವಿಕವಾಗಿ ರಮೇಶ ತಳವಾರ ಮಾತನಾಡಿದರು. ಬಸವರಾಜ ಎಸ್. ಸ್ವಾಗತಿಸಿದರು. ವಿವಿಧ ಸಂಘಟನೆಗಳ ಮುಖಂಡರಾದ ಖಲಂದರ್ ಅಲ್ಲಿಗೌಡ್ರ, ರೇಣುಕಾ ಕಹಾರ, ರಾಜಶೇಖರ ಮಾಳವಾಡ, ನಿಂಗರಾಜ ಪೂಜಾರ, ಉಮೇಶ ಮಹಾಂತ, ಧನುಷ್ ದೊಡ್ಮನಿ, ತೇಜಸ್ ದೊಡ್ಮನಿ, ಅನ್ವಿಕಾ ಆರ್.ಬಿ, ನಕ್ಷತ್ರ ಕಾಳೆ ಇದ್ದರು.