ಕೊಡಗಿನ ಕೋದಂಡ ಪಿ. ಕಾರ್ಯಪ್ಪಗೆ ರಾಜ್ಯೋತ್ಸವ ಪ್ರಶಸ್ತಿ
KannadaprabhaNewsNetwork | Published : Nov 01 2023, 01:00 AM IST
ಕೊಡಗಿನ ಕೋದಂಡ ಪಿ. ಕಾರ್ಯಪ್ಪಗೆ ರಾಜ್ಯೋತ್ಸವ ಪ್ರಶಸ್ತಿ
ಸಾರಾಂಶ
ಸೋಮವಾರಪೇಟೆ ತಾಲೂಕಿನ ಮಾದಾಪುರದ ಕೋದಂಡ ಕುಟುಂಬಕ್ಕೆ ಸೇರಿದ ಲೆ.ಜ. ಕೋದಂಡ ಪೂವಯ್ಯ ಅವರು, ಭಾರತೀಯ ಸೇನೆಯ ತಮ್ಮ ಕರ್ತವ್ಯದಿಂದ ನಿವೃತ್ತರಾದ ಬಳಿಕ ಮುಂಬೈನಲ್ಲಿ ನೆಲೆಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಡಿಕೇರಿ ಭಾರತೀಯ ಸೇನೆಯಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿ ನಿವೃತ್ತರಾಗಿರುವ ಕೊಡಗಿನ ಲೆಫ್ಟಿನೆಂಟ್ ಜನರಲ್ ಕೋದಂಡ ಪೂವಯ್ಯ ಕಾರ್ಯಪ್ಪ ಪಿವಿಎಸ್‌ಎಂ, ಎವಿಎಸ್‌ಎಂ, ವಿಎಸ್‌ಎಂ, ಎಸ್‌ಎಂ ಅವರು ಕರ್ನಾಟಕ ರಾಜ್ಯ ಸರ್ಕಾರದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಕೊಡಗಿನ ಸೋಮವಾರಪೇಟೆ ತಾಲೂಕಿನ ಮಾದಾಪುರದ ಕೋದಂಡ ಕುಟುಂಬಕ್ಕೆ ಸೇರಿದ ಲೆ.ಜ. ಕೋದಂಡ ಪೂವಯ್ಯ ಅವರು, ಭಾರತೀಯ ಸೇನೆಯ ತಮ್ಮ ಕರ್ತವ್ಯದಿಂದ ನಿವೃತ್ತರಾದ ಬಳಿಕ ಮುಂಬೈನಲ್ಲಿ ನೆಲೆಸಿದ್ದಾರೆ. ಲೆಫ್ಟಿನೆಂಟ್ ಜನರಲ್ ಕೋದಂಡ ಪೂವಯ್ಯ ಕಾರ್ಯಪ್ಪ ಅವರು ಭಾರತದ ರಾಷ್ಟ್ರಪತಿ ಕಾರ್ಯದರ್ಶಿಯ ಗೌರವಾನ್ವಿತ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದಲ್ಲದೆ, ಸೇನೆಯಲ್ಲಿ ನೂತನವಾಗಿ ಸೃಷ್ಟಿಸಲಾದ ‘ಮಾಸ್ಟರ್ ಜನರಲ್ ಸಸ್ಟೆನನ್ಸ್’ ಹುದ್ದೆಯನ್ನು ನಿರ್ವಹಿಸಿದ ಮೊದಲ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆಯನ್ನು ಹೊಂದಿರುವುದು ವಿಶೇಷ. ಸೇನಾ ಹಿನ್ನೆಲೆಯನ್ನು ಹೊಂದಿದ ಜಿಲ್ಲೆಯ ನಾಲ್ಕನೆಯವರಾಗಿ ರಾಜ್ಯ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಲೆ.ಜ. ಕೋದಂಡ ಪೂವಯ್ಯ ಪಾತ್ರರಾಗಿದ್ದಾರೆ. ಈ ಹಿಂದೆ ಲೆಫ್ಟಿನೆಂಟ್ ಜನರಲ್ ಬಿ.ಸಿ. ನಂದ, ಲೆಫ್ಟಿನೆಂಟ್ ಜನರಲ್ ಬಿ.ಎನ್.ಬಿ. ಮಹಾವೀರ ಪ್ರಸಾದ್ ಮತ್ತು ಸೇನಾಧಿಕಾರಿ ಹಾಗೂ ಬಾಕ್ಸಿಂಗ್ ತರಬೇತುದಾರ ಚೇನಂಡ ಕುಟ್ಟಪ್ಪ ಅವರು ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದುದನ್ನು ಇಲ್ಲಿ ಉಲ್ಲೇಖಿಸಬಹುದು.