ಸಾರಾಂಶ
ಕನ್ನಡಪ್ರಭ ವಾರ್ತೆ ಜಮಖಂಡಿ
ಕನ್ನಡ ನಾಡು, ನುಡಿ, ಸಂಸ್ಕೃತಿಗೆ ಸೇವೆ ಸಲ್ಲಿಸಿದ ಒಬ್ಬರಿಗೆ ತಾಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುವುದು ಎಂದು ಶಾಸಕ ಜಗದೀಶ ಗುಡಗುಂಟಿ ತಿಳಿಸಿದ್ದಾರೆ.ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಆಚರಣೆ ಪೂರ್ವಸಿದ್ಧತಾ ಸಭೆ ಉದ್ದೇಶಿಸಿ ಮಾತನಾಡಿದ ಅವರು, ತಾಲೂಕು ಮಟ್ಟದಲ್ಲಿ ಕನ್ನಡಕ್ಕಾಗಿ ದುಡಿದ ಒಬ್ಬರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮ ಇರುತ್ತದೆ. ಅದಕ್ಕಾಗಿ ಆಯ್ಕೆ ಸಮಿತಿ ರಚಿಸಲಾಗಿದ್ದು, ತಾಲೂಕು ಕನ್ನಡ ಸಂಘ, ಕನ್ನಡ ಸಾಹಿತ್ಯ ಪರಿಷತ್, ಬಿಇಒ, ಎಸಿ, ತಹಸೀಲ್ದಾರ್ ಸಮಿತಿಯಲ್ಲಿರುತ್ತಾರೆ ಎಂದರು.ನಗರದ ಹೊಕ್ಕಳಬಾವಿ ಪ್ರದೇಶದಿಂದ ಕನ್ನಡ ರಾಜ್ಯೋತ್ಸವದ ಮೆರವಣಿಗೆ ಪ್ರಾರಂಭಿಸಿ, ಓಲೇಮಠ, ಹನುಮಾನ ಚೌಕ, ಅರ್ಬನ್ ಬ್ಯಾಂಕ್, ಅಶೋಕ್ ಸರ್ಕಲ್‌ಗಳ ಮುಖಾಂತರ ಬಸವಭನದಲ್ಲಿ ಮುಕ್ತಾಯ ಗೊಳ್ಳಲಿದೆ. ಆಹಾರ ಇಲಾಖೆ, ಲೋಕೊಪಯೋಗಿ ಇಲಾಖೆ, ಸಾರಿಗೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಮೆರವಣಿಗೆಯಲ್ಲಿ ಭಾವವಹಿಸಿದ ಶಾಲೆಯ ಮಕ್ಕಳಿಗೆ ಉಪಹಾರದ ವ್ಯವಸ್ಥೆ ಮಾಡಲು ಸೂಚಿಸಲಾಯಿತು. ನಗರಸಭೆಗೆ ಮೆರವಣಿಗೆ ಮಾರ್ಗವನ್ನು ಸ್ವಚ್ಛಗೊಳಿಸುವ ಹಾಗೂ ನಗರದ ಎಲ್ಲ ವೃತ್ತಗಳಿಗೆ ವಿದ್ಯುತ್ ದೀಪಾಲಂಕಾರ, ಕನ್ನಡದ ಧ್ವಜಗಳ ಅಡವಡಿಕೆ ಜವಾಬ್ದಾರಿ ನೀಡಲಾಯಿತು, ಕನ್ನಡ ಸಂಘದವರು ಮೆರವಣಿಗೆ ಪ್ರಾರಂಭದ ಸ್ಥಳದಲ್ಲಿ ಉಪಹಾರದ ವ್ಯವಸ್ಥೆ ಮಾಡುವುದಾಗಿ ಒಪ್ಪಿಕೊಂಡರು. ತಾಲೂಕು ಮಟ್ಟದ ಎಲ್ಲ ಇಲಾಖೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಭಾಗವಹಿಸಲು ಸೂಚಿಸಲಾಯಿತು. ಡೊಳ್ಳು ಕುಣಿತ, ಝಾಂಜ್‌ಪಥಕ್, ಕರಡಿ ಮಜಲು ಕಲಾವಿದರ ನಿಯೋಜನೆ, ಕುಂಭ ಮೇಳಕ್ಕೆ 50 ಮಹಿಳೆಯ ಸಜ್ಜು ಗೊಳಿಸಲು, ಇಲಾಖೆಗಳ ಸ್ತಬ್ಧ ಚಿತ್ರಗಳ ಪ್ರದರ್ಶನಕ್ಕೆ ತಯಾರಿ ಮಾಡಿಕೊಳ್ಳಲು ಸೂಚನೆ ನೀಡಲಾಯಿತು. ವಿವಿಧ ಶಾಲೆಗಳಿಗೆ ಸ್ತಬ್ಧ ಚಿತ್ರಗಳನ್ನು ತಯಾರಿಸಲು ಹಾಗೂ ಉತ್ತಮ ಪ್ರದರ್ಶನ ತೋರಿದ ಚಿತ್ರಗಳಿಗೆ ಬಹುಮಾನಗಳನ್ನು ವಿತರಿಸಲು ನಿರ್ಧಾರ ತೆಗೆದುಕೊಳ್ಳಲಾಯಿತು.
ಕನ್ನಡಸಂಘದ ಅಧ್ಯಕ್ಷ ಅರುಣಕುಮಾರ ಶಾ ಮಾತನಾಡಿ, ಎಲ್ಲ ಸಂಘ ಸಂಸ್ಥೆಗಳು ಪ್ರತಿವರ್ಷದಂತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಮನವಿ ಮಾಡಿದರು. ತಹಸೀಲ್ದಾರ್ ಸದಾಶಿವ ಮಕ್ಕೊಜಿ ಮಾತನಾಡಿ, ಇಲಾಖೆ ಅಧಿಕಾರಿಗಳು ತಮಗೆ ನೀಡಿರುವ ಜವಾಬ್ದಾರಿ ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಕನ್ನಡ ಹಬ್ಬವನ್ನು ಎಲ್ಲರೂ ತನು ಮನ ಧನ ದಿಂದ ಸಹಕಾರ ನೀಡಿ ಅದ್ಧೂರಿಯಾಗಿ ಆಚರಿಸಲು ತಾಲೂಕಾಡಳಿತಕ್ಕೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಪಿಡಬ್ಲ್ಯೂಡಿ ಎಇಇ ಬಂಡಿವಡ್ಡರ ಕಾರ್ಯಕ್ರಮದ ಮಾಹಿತಿ ನೀಡಿದರು. ಪೊಲೀಸ್, ನಗರಸಭೆ, ಅಬಕಾರಿ, ಸಮಾಜಕಲ್ಯಾಣ, ಸಿಡಿಪಿಒ, ಶಿಕ್ಷಣ ಸೇರಿದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.