ಸಾಂಬ್ರಾಣಿಯ ಬುಡಕಟ್ಟು ಸಮುದಾಯದ ಜನಪದಕಲಾವಿದೆ ಹುಸೇನಬಿ ಸಿದ್ದಿಗೆ ರಾಜ್ಯೋತ್ಸವ ಪ್ರಶಸ್ತಿ

| Published : Nov 01 2023, 01:00 AM IST

ಸಾಂಬ್ರಾಣಿಯ ಬುಡಕಟ್ಟು ಸಮುದಾಯದ ಜನಪದಕಲಾವಿದೆ ಹುಸೇನಬಿ ಸಿದ್ದಿಗೆ ರಾಜ್ಯೋತ್ಸವ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಬಡ ಕೃಷಿಕೂಲಿ ಕಾರ್ಮಿಕರ ಮನೆಯಲ್ಲಿ ಹುಟ್ಟಿರುವ ಹುಸೇನಬಿ ಅವರದ್ದು ತುಂಬು ಕುಟುಂಬ, ಸದ್ಯ ಅವರಿಗೆ 103 ವರ್ಷವಂತೆ. ಹುಟ್ಟಿದ ದಿನ, ತಿಂಗಳು ಗೊತ್ತಿಲ್ಲ ಎಂದು ಹುಸೇನಬಿ ಹೇಳುತ್ತಾರೆ.

ಓರವಿಲ್ಲ ಫರ್ನಾಂಡಿಸ್

ಹಳಿಯಾಳ

ಬುಡಕಟ್ಟು ಸಿದ್ದಿ ಸಮುದಾಯದ ಸಾಂಪ್ರದಾಯಿಕ ಜನಪದ ಹಾಡು, ನೃತ್ಯ, ಡಮಾಮಿ ಸಂಗೀತ ಉಳಿಸಿ ಬೆಳೆಸಲು ಮುಂದಿನ ತಲೆಮಾರಿಗೆ ಪರಿಚಯಿಸಲು ಶ್ರಮಿಸುತ್ತಿರುವ ಶತಾಯುಷಿ ಬುಡಕಟ್ಟು ಸಿದ್ದಿ ಕಲಾವಿದೆ ಹುಸೇನಬಿ ಬುಡನ್ಸಾಬ ಮುಜಾವರ ಅವರಿಗೆ 2023ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಧಾರೆಯೆರೆದ ಬುಡಕಟ್ಟು ಕಲೆ:

ಹಳಿಯಾಳ ತಾಲೂಕಿನ ಸಾಂಬ್ರಾಣಿ ಗ್ರಾಮದಲ್ಲಿ ಹಿರಿಯ ಮಗಳು ಮಮ್ತಾಜ್ ಅವರ ಆಶ್ರಯ ಮನೆಯಲ್ಲಿಯೇ ಹುಸೇನಬಿ ವಾಸ. ಉದರ ನಿರ್ವಹಣೆಗಾಗಿ ಕೃಷಿ ಕೂಲಿ ಕಾಯಕವನ್ನು ಅವಲಂಬಿಸಿದ ಹುಸೇನಬಿ, ತನ್ನ ಕಷ್ಟದಾಯಕ ಬದುಕಿನಲ್ಲೂ ತಮ್ಮ ಬುಡಕಟ್ಟು ಸಿದ್ದಿ ಸಮುದಾಯದ ಮಕ್ಕಳಿಗೆ, ಯುವಸಮೂಹಕ್ಕೆ ವಿಶೇಷವಾಗಿ ಮಹಿಳೆಯರಿಗೆ ಬುಡಕಟ್ಟು ಸಾಂಪ್ರದಾಯಿಕ ಸಂಗೀತ, ಹಾಡು, ನೃತ್ಯ ಕಲೆಯನ್ನು ಧಾರೆಯೆರೆಯುತ್ತಿದ್ದಾರೆ. ಸದ್ಯ ಡಮಾಮಿ ನೃತ್ಯದ ಮೂಲಕ ಬುಡಕಟ್ಟು ಸಿದ್ದಿ ಸಮುದಾಯದ ಪ್ರತಿಭೆಗಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮಿಂಚಲು ಹುಸೇನಬಿ ಕಾರಣರಾಗಿದ್ದಾರೆ.

ತುಂಬು ಕುಟುಂಬದ ಒಡತಿ:

ಬಡ ಕೃಷಿಕೂಲಿ ಕಾರ್ಮಿಕರ ಮನೆಯಲ್ಲಿ ಹುಟ್ಟಿರುವ ಹುಸೇನಬಿ ಅವರದ್ದು ತುಂಬು ಕುಟುಂಬ, ಸದ್ಯ ಅವರಿಗೆ 103 ವರ್ಷವಂತೆ. ಹುಟ್ಟಿದ ದಿನ, ತಿಂಗಳು ಗೊತ್ತಿಲ್ಲ ಎಂದು ಹುಸೇನಬಿ ಹೇಳುತ್ತಾರೆ. ಒಟ್ಟು ಹನ್ನೆರೆಡು ಮಕ್ಕಳಲ್ಲಿ ಸದ್ಯ ಐವರು ಮಾತ್ರ ಬದುಕಿದ್ದಾರೆ. ಸ್ವಂತ ಕೃಷಿ ಜಮೀನು ಇಲ್ಲ, ಕೃಷಿ ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡ ಹುಸೇನಬಿ, ಬಾಲ್ಯದಲ್ಲಿ ಕೇಳಿ ಕಲಿತ ಬುಡಕಟ್ಟು ಸಿದ್ದಿ ಜನಪದ ಹಾಡು ಹಾಡುವ, ತನ್ನ ವಾರಿಗೆಯವರಿಗೆ ಕಲಿಸುವ ಹವ್ಯಾಸ ಬೆಳೆಸಿಕೊಂಡು ಬೆಳೆದಿದ್ದರು, ಉರ್ದು ಭಾಷೆಯಲ್ಲಿ ನೂರಕ್ಕೂ ಹೆಚ್ಚು ಜನಪದ ಹಾಡುಗಳನ್ನು ತನ್ನ ಸಮುದಾಯದವರಿಗೆ ಕಲಿಸಿದ್ದಾರೆ. ಅನಕ್ಷರಸ್ಥೆಯಾದರೂ ಲೆಕ್ಕವಿಲ್ಲದಷ್ಟೂ ಸಾಂಪ್ರದಾಯಿಕ ಹಾಡು ರಚಿಸಿ ಕಲಿಸಿದ್ದಾರೆ. ಈ ಭಾಗದಲ್ಲಿ ಹುಸೇನಬಿ ಕಲಿಸಿದ ಹಾಡುಗಳಿಂದಲೇ ಬುಡಕಟ್ಟು ಸಮುದಾಯದವರ ಮದುವೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಸಂಭ್ರಮಾಚರಣೆಗಳು ನಡೆಯುತ್ತವೆ.

ಮೂರನೇಯ ಪ್ರಶಸ್ತಿ:

2020ರಲ್ಲಿ ನವೆಂಬರ್ 21ರಂದು ಕರ್ನಾಟಕ ಜನಪದ ಆಕಾಡೆಮಿ ಪ್ರಶಸ್ತಿಗೆ ಭಾಜನರಾದ ಹುಸೇನಬಿ, ತದನಂತರ ರಾಜ್ಯ ಸರ್ಕಾರ ನೀಡುವ ಜನಪದಶ್ರೀ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಪ್ರಸಕ್ತ ವರ್ಷ 2023ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯು ಹುಸೇನಬಿ ಅವರಿಗೆ ಒಲಿದು ಬಂದಿದೆ.

ಬದುಕು ಕಟ್ಟಲು ನೇರವಾಗಲಿ:

ಶತಾಯುಷಿ ಕಲಾವಿದೆ ಹುಸೇನಬಿ ಅವರಿಗೆ ಕಿವಿ ಕೇಳಲ್ಲ, ಆದರೂ ಅವರಲ್ಲಿದ್ದ ಉತ್ಸಾಹ, ಹುಮ್ಮಸ್ಸು ಇನ್ನೂ ಕಮ್ಮಿಯಾಗಿಲ್ಲ, ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ ಸುದ್ದಿ ಕೇಳಿ ಹರ್ಷ ವ್ಯಕ್ತಪಡಿಸಿದರು.

ಜನಪದ ಕಲೆ, ಸಂಗೀತ ಉಳಿಸಿ ಬೆಳೆಸುವ ಕಾರ್ಯವನ್ನು ಸರ್ಕಾರ ಮಾಡಬೇಕಿದೆ. ಪ್ರಶಸ್ತಿ ನೀಡಿ ಕಲಾವಿದರು, ಸಾಧಕರನ್ನು ಗುರುತಿಸುವ ಸರ್ಕಾರ ಇನ್ನೊಂದೆಡೆ ಬಡ ಕಲಾವಿದರು, ಸಾಧಕರ ಕುಟುಂಬದ ಉಪಜೀವನ ನಿರ್ವಹಣೆಗಾಗಿಯೂ ನೇರವಾಗಬೇಕು ಎನ್ನುತ್ತಾರೆ ಹುಸೇನಬಿ ಮುಜಾವರ.