ರಾಯಚೂರು ಜಿಲ್ಲೆಯ ಸಾಧಕರಿಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿ ಗರಿ

| Published : Oct 31 2024, 12:46 AM IST

ಸಾರಾಂಶ

ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಸರ್ಕಾರ ಬುಧವಾರ ಪ್ರಕಟಿಸಿದ್ದು ಅದರಲ್ಲಿ ರಾಯಚೂರು ಜಿಲ್ಲೆಯ ಇಬ್ಬರು ಸಾಧಕರಿಗೆ ಈ ಬಾರಿಯ ಪ್ರಶಸ್ತಿ ಒಲಿದಿರು ವುದು ವಿಶೇಷವಾಗಿದೆ.

ಕನ್ನಡಪ್ರಭ ವಾರ್ತೆ ರಾಯಚೂರು

ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಸರ್ಕಾರ ಬುಧವಾರ ಪ್ರಕಟಿಸಿದ್ದು ಅದರಲ್ಲಿ ರಾಯಚೂರು ಜಿಲ್ಲೆಯ ಇಬ್ಬರು ಸಾಧಕರಿಗೆ ಈ ಬಾರಿಯ ಪ್ರಶಸ್ತಿ ಒಲಿದಿರು ವುದು ವಿಶೇಷವಾಗಿದೆ.

ಸಂಗೀತ ಕ್ಷೇತ್ರದಲ್ಲಿ ತಬಲಾ ವಾದಕ ಎ.ಎನ್‌.ಸದಾಶಿವಪ್ಪ ಹಾಗೂ ಸಮಾಜ ಸೇವೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸೂಲಗಿತ್ತಿ ಮಲ್ಲಮ್ಮ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ತಬಲಾ ಮಾಂತ್ರಿಕ ಸದಾಶಿವಪ್ಪ:

ಕಳೆದ 55 ವರ್ಷಗಳಿಂದ ತಬಲಾ ವಾದಕರಾಗಿ ಸೇವೆ ಸಲ್ಲಿಸಿಕೊಂಡು ಬರುತ್ತಿರುವ ತಬಲಾ ಮಾಂತ್ರಿಕ ಎ.ಎನ್.ಸದಾಶಿವಪ್ಪ ಅವರು ರಂಗಭೂಮಿ, ನಾಟಕ ಸೇರಿದಂತೆ ಸಾಂಸ್ಕೃತಿಕ ಹಾಗೂ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ರಾಯಚೂರು ನಗರದ ಮಡ್ಡಿಪೇಟೆಯಲ್ಲಿ ವಾಸಮಾಡುತ್ತಿರುವ ಎ.ಎನ್.ಸದಾಶಿವಪ್ಪ ಅವರು 1940ರಲ್ಲಿ ಆಲ್ಕೂರು ನರಸಪ್ಪ, ಆಲ್ಕೂರ ನಾಗಮ್ಮ ದಂಪತಿಗೆ ಜನಿಸಿದರು.

ಚಿಕ್ಕ ವಯಸ್ಸಿನಿಂದಲೂ ಸಂಗೀತ ಸಾಧನೆಯಲ್ಲಿ ತಮ್ಮ ಜೀವನ ಕಳೆದಿದ್ದಾರೆ. ಶಾಸ್ತ್ರೀಯ ಸಂಗೀತ, ಗಜಲ್, ನಾಟಕಗಳಿಗೆ, ಜಾನಪದ, ಧಾರ್ಮಿಕ ಕಾರ್ಯಕ್ರಮಗಳಿಗೆ ಸೇವೆ ನೀಡಿಕೊಂಡು ಬರುತ್ತಿರುವುದು ವಿಶೇಷ. 25 ವರ್ಷಗಳಿಂದ ಆಕಾಶವಾಣಿ, ದೂರದರ್ಶನ ದಲ್ಲಿ ಮಾತ್ರವಲ್ಲದೇ ಅನೇಕ ಸಂಗೀತ ವಿದ್ವಾಂಸರಿಗೆ ತಬಲಾ ಸಾಥ್ ನೀಡಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಮಾತ್ರವಲ್ಲದೇ ರಂಗಭೂಮಿ ಕಲಾವಿದರಾಗಿಯೂ 1960ರಿಂದ ಕೆಲಸ ಮಾಡಿದ ಹಿರಿಮೆ ಇವರದು.

ದಾವಣಗೆರೆಯ ಕೆ.ಬಿ.ಆರ್.ಡ್ರಾಮಾ ಕಂಪನಿ, ಗುರಿಗೇರಾದ ಗುಡಿಗೇರಿ ನಾಟಕ ಕಂಪನಿ, ಆಶಾಪುರದ ಶ್ರೀ ಸೂಗೂರೇಶ್ವರ ನಾಟಕ ಕಂಪನಿ ಸೇರಿದಂತೆ ಅನೇಕ ನಾಟಕ ಕಂಪನಿಗಳಿಗೆ ತಬಲಾ ನುಡಿಸಿದ್ದಾರೆ. 1960ರಿಂದ 1980ರವರೆಗೆ ಇವರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಹಳ ಪ್ರಸಿದ್ಧ ತಬಲಾ ವಾದಕರು ಎಂದು ಹೆಸರು ಮಾಡಿದ್ದರು.

ಇವರ ಸೇವೆ ಗುರುತಿಸಿ 1998ರಲ್ಲಿ ರಾಗ ರಂಗೋತ್ಸವ ಪ್ರಶಸ್ತಿ, 2000ರಲ್ಲಿ ಜನಪದ ಅಕಾಡೆಮಿ ಪ್ರಶಸ್ತಿ, 2001ರಲ್ಲಿ ಜಿಲ್ಲಾ ಗಣರಾಜ್ಯೋತ್ಸವ ಪ್ರಶಸ್ತಿ, 2002ರಲ್ಲಿ ಗದ್ವಾಲ್ನ ಬಾಲಭವನ ಕಲ್ಚರಲ್ ಪ್ರಶಸ್ತಿ, ಜಿಲ್ಲಾ ಕನ್ನಡ ಸಾಹಿತ್ಯ ಪ್ರಶಸ್ತಿ, 2014ರಲ್ಲಿ ಡಾ.ರಾಜ್‌ಕುಮಾರ್ ಜಿಲ್ಲಾ ಕನ್ನಡರತ್ನ ಪ್ರಶಸ್ತಿ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ.

ಕಲ್ಯಾಣ ಕರ್ನಾಟಕ ಭಾಗ ಮಾತ್ರವಲ್ಲದೇ ಬೆಂಗಳೂರು, ಮೈಸೂರು, ಆಂಧ್ರ, ತೆಲಂಗಾಣ, ಮಹಾರಾಷ್ಟçದ ಸೇರಿದಂತೆ ವಿವಿಧ ರಾಜ್ಯಗಳಲ್ಲೂ ಇವರು ತಮ್ಮ ಸೇವೆ ನೀಡಿದ್ದಾರೆ. ರಂಗಭೂಮಿ ಕಲಾವಿದರಾಗಿಯೂ ಸೇವೆ ಸಲ್ಲಿಸಿದ್ದಾರೆ. ಹೆಸರಾಂತ ನಾಟಕ ಕಂಪನಿಗಳಲ್ಲಿ ಕೆಲಸ ಮಾಡಿಕೊಂಡಿದ್ದು, ರಂಗಭೂಮಿ ಕಲಾವಿದರಾಗಿಯೂ ಗುರುತಿಸಿಕೊಂಡಿದ್ದಾರೆ.

ಇವರು ಕಲಾದವಿರ ಸಂಘದದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದು, ಪಂಡಿತ್ ಪಂಚಾಕ್ಷರಿ ಗವಾಯಿಗಳ ಟ್ರಸ್ಟ್ ಸ್ಥಾಪಿಸುವ ಮೂಲಕವೂ ಸಂಗೀತ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದ್ದಾರೆ. ಇವರ ಅಪಾರ ಸೇವೆ ಪರಿಗಣಿಸಿ ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

10 ಸಾವಿರ ಹೆರಿಗೆ ನೆರವೇರಿಸಿದ ಮಲ್ಲಮ್ಮಗೆ ರಾಜೋತ್ಸವ ಪ್ರಶಸ್ತಿ

ಕವಿತಾಳ: ರಾಜ್ಯೋತ್ಸವ ಪ್ರಶಸ್ತಿಗೆ ಭಾಜೀನರಾಗಿರುವ ಮತ್ತೊರ್ವ ಸಾಧಕಿ, ಸಮಾಜ ಸೇವಕಿ ಸೂಲಗಿತ್ತಿ ಮಲ್ಲಮ್ಮ ಅವರು ಜಿಲ್ಲೆಯ ಸಿರವಾರ ತಾಲ್ಲೂಕಿನ ಕವಿತಾಳ ಪಟ್ಟಣದ ನಿವಾಸಿದ್ದು, ಸಾಕಷ್ಟು ತಂತ್ರಜ್ಞಾನ ಆವಿಷ್ಕಾರಗೊಂಡಿರುವ ವೈದ್ಯಕೀಯ ಕ್ಷೇತ್ರದಲ್ಲಿ ಸಿಜರಿನ್ ಮುಖಾಂತರ ಹೆರಿಗೆ ಆಗುತ್ತಿರುವ ಈ ಕಾಲದಲ್ಲಿ 10 ಸಾವಿರಕ್ಕೂ ಹೆಚ್ಚು ಸರಳ ಹೆರಿಗೆಗಳನ್ನು ಮಾಡಿಸಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ಕೊಟ್ಟಿದ್ದಾರೆ.

ಬೇರೆ-ಬೇರೆ ಕಡೆಯಿಂದ ಜನಪದ ವೈದ್ಯ ಪದ್ಧತಿ (ನಾಟಿವೈದ್ಯ) ಹಾಗೂ ಸೂಲಗಿತ್ತಿ ಎಂಬ ಕಾರಣಕ್ಕೆ ಬಾಣಂತಿಯರು, ಜನರು ಕೂಡ ಇಂದಿಗೂ ಅವರನ್ನು ಬೇಟಿಯಾಗುತ್ತೇಲೆ ಇದ್ದಾರೆ. ಬಂದವರೆಲ್ಲ ಅವರು ಪುಣ್ಯ,ಕೈಗುಣದಿಂದ ಗುಣವೂ ಆಗುತ್ತಿದ್ದಾರೆ.

ಉಚಿತವಾಗಿ ಸೂಲಗಿತ್ತಿ ಕಾರ್ಯನಿರ್ವಹಿಸುತ್ತಿರುವ ಮಲ್ಲಮ್ಮ ಅವರು ಕಾರ್ಯವೈಖರಿಯನ್ನು ಗುರುತಿಸಿ ಜಿಲ್ಲಾಡಳಿತ, ಸಿರವಾರ ತಾಲೂಕು ಆಡಳಿತ ಹಾಗೂ ಇರಕಲ್ ಮಠ ಮತ್ತು ಬೆಳಕು ಸಂಸ್ಥೆ ಪ್ರಶಸ್ತಿ ನೀಡಿ ಸನ್ಮಾಸಿ ಅವರ ಸೇವೆಯನ್ನು ಗೌರವಿಸಿದ್ದಾರೆ.ಅವರು ಇದುವರೆಗೂ ಹೆರಿಗೆ ಕೂಡ ವಿಫಲವಾಗಿಲ್ಲ ಎಂದು ಹೆಗ್ಗಳಿಕೆ ವಿಷಯವಾಗಿದೆ.

ನಮ್ಮ ಪುರ್ವಜನರಿಂದ ಬಂದ ಹೆರಿಗೆ ಮಾಡಿವ ಕಾಯಕವನ್ನು ನಾನು ಮಾಡುತ್ತಿರುವೆ. ನಾನು ಯಾವುದೇ ಪ್ರಶಸ್ತಿಯನ್ನು ಬೇಡಿಕೆಯನ್ನಿಟ್ಟಿಲ್ಲ. ನನ್ನ ಕಾಯಕ ಗುರುತಿಸಿ ಪ್ರಶಸ್ತಿ ನೀಡುತ್ತಿರುವ ನನ್ನಗೆ ಸಂತಸ ತಂದಿದೆ. ನನಗೆ ಸರ್ಕಾರದಿಂದ ಒಂದು ಸೂರಿನ ಕಲ್ಪಿಸಬೇಕು ಎಂದು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಷ್ಕೃತ ಸೂಲಗಿತ್ತಿ ಮಲ್ಲಮ್ಮ ಮನವಿ ಮಾಡಿದ್ದಾರೆ.