ಕನ್ನಡ ರಾಜ್ಯೋತ್ಸವ ಕೇವಲ ಹಾಡು-ಕುಣಿತಕ್ಕೆ ಸೀಮಿತವಾಗಬಾರದು. ಪ್ರತಿಯೊಬ್ಬರೂ ತಮ್ಮ ಮೂಲಭೂತ ಹಕ್ಕುಗಳ ಬಗ್ಗೆ ಅರಿವು ಪಡೆದು, ಅನ್ಯಾಯದ ವಿರುದ್ಧ ಧ್ವನಿ ಎತ್ತಿದಾಗ ಮಾತ್ರ ನಿಜವಾದ ರಾಜ್ಯೋತ್ಸವ ಸಾರ್ಥಕವಾಗುತ್ತದೆ.

ಕನ್ನಡಪ್ರಭ ವಾರ್ತೆ ಮುಂಡರಗಿ

ಕನ್ನಡ ರಾಜ್ಯೋತ್ಸವ ಕೇವಲ ಹಾಡು-ಕುಣಿತಕ್ಕೆ ಸೀಮಿತವಾಗಬಾರದು. ಪ್ರತಿಯೊಬ್ಬರೂ ತಮ್ಮ ಮೂಲಭೂತ ಹಕ್ಕುಗಳ ಬಗ್ಗೆ ಅರಿವು ಪಡೆದು, ಅನ್ಯಾಯದ ವಿರುದ್ಧ ಧ್ವನಿ ಎತ್ತಿದಾಗ ಮಾತ್ರ ನಿಜವಾದ ರಾಜ್ಯೋತ್ಸವ ಸಾರ್ಥಕವಾಗುತ್ತದೆ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಕರೆ ನೀಡಿದರು.ಪಟ್ಟಣದ ಅನ್ನದಾನೀಶ್ವರ ಕಾಲೇಜು ಆವರಣದಲ್ಲಿ ಮಂಗಳವಾರ ಸಂಜೆ ಆಯೋಜಿಸಲಾಗಿದ್ದ ಅಶ್ವಮೇಧ ಮ್ಯೂಸಿಕ್ ಇವೆಂಟ್ಸ್ ಮುಂಡರಗಿ ಹಾಗೂ ಕನ್ನಡಾಭಿಮಾನಿಗಳಿಂದ71ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕನ್ನಡ ಉತ್ಸವ ಹಾಗೂ ಮುಂಡರಗಿ ತಾಲೂಕಾ ಮಹರ್ಷಿ ವಾಲ್ಮೀಕಿ ನಾಯಕ ಮಹಿಳಾ ಟ್ರಸ್ಟ್‌ ಕಮೀಟಿ ಉದ್ಘಾಟನೆ, ಸಾಧಕರಿಗೆ ಸನ್ಮಾನ ಹಾಗೂ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಅಜ್ಞಾನವೇ ಸಾವು, ಅರಿವೇ ಬದುಕು. ಪ್ರತಿಯೊಬ್ಬರೂ ಜಾಗೃತರಾಗಿ ತಮ್ಮ ಊರಿನ ಸಮಸ್ಯೆಗಳ ಬಗ್ಗೆ ಅಧಿಕಾರಿಗಳನ್ನು ಪ್ರಶ್ನೆ ಮಾಡುವುದನ್ನು ಕಲಿಯಬೇಕು. ಗುಲಾಮಗಿರಿಯ ಬದುಕನ್ನು ಬಿಟ್ಟು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕು. ಹೆಣ್ಣುಮಕ್ಕಳು ಅಡುಗೆ ಮನೆಗೆ ಸೀಮಿತವಾಗದೆ ಶಿಕ್ಷಣ, ಉದ್ಯೋಗ ಮತ್ತು ಸಾಮಾಜಿಕವಾಗಿ ಮುಂದೆ ಬರಬೇಕು. ಮಹಿಳೆಯರ ಮೇಲಿನ ದೌರ್ಜನ್ಯವನ್ನು ಖಂಡಿಸಿದ ಅವರು, ಕುಟುಂಬದಲ್ಲಾಗಲಿ ಅಥವಾ ಸಮಾಜದಲ್ಲಾಗಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆದರೆ ಸುಮ್ಮನೆ ಕೂರಬೇಡಿ. ತಕ್ಷಣವೇ ತುರ್ತು ಸಹಾಯವಾಣಿ ಸಂಖ್ಯೆ 112 ಅಥವಾ ಮಹಿಳಾ ಸಹಾಯವಾಣಿ 181 ಕ್ಕೆ ಕರೆ ಮಾಡಿ ನೆರವು ಪಡೆದುಕೊಳ್ಳಿ ಎಂದು ಕಿವಿಮಾತು ಹೇಳಿದರು.

ಗ್ರಾಮೀಣ ಭಾಗದ ಶಾಲೆಗಳು, ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಟಿಕ ಆಹಾರ ಪೂರೈಕೆ, ಸಾರಿಗೆ ವ್ಯವಸ್ಥೆ ಹಾಗೂ ಆಸ್ಪತ್ರೆ ಸೌಲಭ್ಯಗಳ ಕೊರತೆ ಕುರಿತು ಸಾರ್ವಜನಿಕರು ಗಮನ ಸೆಳೆದರು.

ಈ ಕುರಿತು ಮಾತನಾಡಿದ ತಹಸೀಲ್ದಾರ್ ಎರ್ರಿಸ್ವಾಮಿ, ಪ್ರತಿ ಶನಿವಾರ ಗ್ರಾಮಗಳಲ್ಲಿ ಜನಸ್ಪಂದನ ಸಭೆಗಳನ್ನು ನಡೆಸಿ ಸಾರ್ವಜನಿಕರ ಪಿಂಚಣಿ, ಆರ್‌ಟಿಸಿ, ಪಹಣಿ ಹಾಗೂ ಇತರ ಕಂದಾಯ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಮುಖಂಡರಾದ ಹೇಮಗಿರೀಶ ಹಾವಿನಾಳ, ಸುಜಾತಾ ದೊಡ್ಡಮನಿ, ಐ.ಎಸ್. ಪೂಜಾರ, ಮುತ್ತು ರಾಠೋಡ, ಸುರೇಶ ಮಾಗಡಿ, ರಾಮಣ್ಣ ಮುಕ್ಕಣ್ಣವರ, ಎಸ್.ಡಿ. ಮಕಾಂದಾರ, ಕವಿತಾ ನಾಯ್ಕರ್, ಚಂದ್ರು ನಾವಿ, ಭಾಗ್ಯಶ್ರೀ ಬಾಬಣ್ಣ, ಡಾ. ಕುಮಾರಸ್ವಾಮಿ ಹಿರೇಮಠ, ಡಾ. ಲಕ್ಷ್ಮಣ ಪೂಜಾರ, ಲಕ್ಷ್ಮಿ ಮಾಗಡಿ, ಲತಾ ಇಟಗಿ, ಫಕ್ಕೀರೇಶ ಇಟಗಿ, ರಾಜು ಡಾವಣಗೇರಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಪ್ರೊ. ಚಂದ್ರಶೇಖರ ಪೂಜಾರ ಸ್ವಾಗತಿ, ಶಕುಂತಲಾ ಹಂಪಿಮಠ ಹಾಗೂ ಶರಣಪ್ಪ ಮಲ್ಲಾಪೂರ ನಿರೂಪಿಸಿದರು.