ಏಕೀಕರಣಕ್ಕೆ ಶ್ರಮಿಸಿದವರನ್ನು ಸ್ಮರಿಸಬೇಕು

| Published : Nov 28 2024, 12:33 AM IST

ಸಾರಾಂಶ

- ಕನ್ನಡವೇ ಸತ್ಯ- ಡಾ.ರಾಜ್ಕುಮಾರ್ ಹಾಡಿರುವ ಭಾವಗೀತೆಗಳ ಗಾಯನ, ಆರು ಮಂದಿ ಸಾಧಕರಿಗೆ ಪ್ರಶಸ್ತಿ ಪ್ರದಾನ

ಕನ್ನಡಪ್ರಭ ವಾರ್ತೆ ಮೈಸೂರುಪ್ರತಿಯೊಬ್ಬರೂ ಕನ್ನಡ ಸೇವೆ ಮಾಡಬೇಕು ಹಾಗೂ ಏಕೀಕರಣಕ್ಕೆ ಶ್ರಮಿಸಿದ ಸಾಹಿತಿಗಳು, ಹೋರಾಟಗಾರರನ್ನು ಸ್ಮರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ ಕರೆ ನೀಡಿದರು.

ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾ ಘಟಕವು ಜೆಎಲ್ಬಿ ರಸ್ತೆಯ ನಾದಬ್ರಹ್ಮ ಸಂಗೀತ ಸಭಾದಲ್ಲಿ ಬುಧವಾರ ಏರ್ಪಡಿಸಿದ್ದ ಕರ್ನಾಟಕ ರಾಜ್ಯೋತ್ಸವ ಸಂಭ್ರಮಾಚರಣೆ, ''''''''ಕನ್ನಡವೇ ಸತ್ಯ''''''''- ಡಾ.ರಾಜ್ ಕುಮಾರ್ ಅವರು ಹಾಡಿರುವ ಭಾವಗೀತೆಗಳ ಗಾಯನ. ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.ಕನ್ನಡ ಮಾತನಾಡುವ ಜನರೆಲ್ಲಾ ಒಗ್ಗೂಡಬೇಕು ಎಂದು ಏಕೀಕರಣ ಚಳವಳಿ ನಡೆಸಲಾಯಿತು. ಏಕೀಕರಣವಾದ ನಂತರವೂ ಬೆಂಗಳೂರಿನಲ್ಲಿ ಕನ್ನಡದ ಬಗ್ಗೆ ನಿರ್ಲಕ್ಷ್ಯ ತೋರಿಸಲಾಗುತ್ತಿತ್ತು. ಆದರೆ ವಾಟಾಳ್ ನಾಗರಾಜ್ ಸೇರಿದಂತೆ ಕನ್ನಡ ಪರ ಹೋರಾಟಗಾರರು ನಡೆಸಿದ ಹೋರಾಟದಿಂದಾಗಿ ಕನ್ನಡ ಇವತ್ತು ಉಳಿದು, ವಿಶ್ವಮಟ್ಟಕ್ಕೆ ಬೆಳೆದು ಬಂದಿದೆ ಎಂದು ಶ್ಲಾಘಿಸಿದರು.ಕನ್ನಡ ನಾಡು- ನುಡಿಯ ಬಗ್ಗೆ ಪ್ರೀತಿ ಇರಬೇಕು. ಕನ್ನಡ ಸುಸಂಸ್ಕೃತವಾದುದು. ಬೇರೆ ಭಾಷೆಯನ್ನು ದ್ವೇಷ ಮಾಡದೇ ಕನ್ನಡ ಸಾಹಿತ್ಯ ಸೇವೆಯನ್ನು ಮುಂದುವರಿಸಬೇಕು ಎಂದು ಅವರು ಸಲಹೆ ಮಾಡಿದರು.ಅಧ್ಯಕ್ಷತೆ ವಹಿಸಿದ್ದ ಸುಗಮ ಸಂಗೀತ ಪರಿಷತ್ ಜಿಲ್ಲಾಧ್ಯಕ್ಷ ನಾಗರಾಜ್ ವಿ ಬೈರಿ ಮಾತನಾಡಿ, ಹತ್ತು ತಿಂಗಳ ಹಿಂದೆ ಅಸ್ತಿತ್ವಕ್ಕೆ ಬಂದ ಜಿಲ್ಲಾ ಘಟಕ ಹತ್ತು ಅರ್ಥಪೂರ್ಣ ಕಾರ್ಯಕ್ರಮಗಳನ್ನು ಸಂಘಟಿಸಿದೆ. ಮುಂದಿನ ಫೆಬ್ರವರಿಯಲ್ಲಿ ರಾಜ್ಯಮಟ್ಟದ ಸಮ್ಮೇಳನ ನಡೆಸಲು ಉದ್ದೇಶಿಸಿದೆ ಎಂದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಹಿರಿಯ ಸುಗಮ ಸಂಗೀತ ಗಾಯಕ ಪ್ರೊ. ಎಸ್. ಮಲ್ಲಣ್ಣ, ಕವಿ ಜಯಪ್ಪ ಹೊನ್ನಾಳಿ, ಕೀಬೋರ್ಡ್ ವಾದಕ ಗಣೇಶ ಭಟ್, ಗಾಯಕ ಜಯರಾಮ್ ರಾಜು ಅವರಿಗೆ ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾ ಘಟಕದ ವತಿಯಿಂದ 2024ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ ಕುಲಪತಿ ಪ್ರೊ.ನಾಗೇಶ್ ವಿ. ಬೆಟ್ಟಕೋಟೆ ಪ್ರದಾನ ಮಾಡಿದರು.

ಸಾಹಿತಿ ನಾ. ದಾಮೋದರ್ ಶೆಟ್ಟಿ ಪ್ರಧಾನ ಭಾಷಣ ಮಾಡಿದರು. ಗಾಯಕರನ್ನು ಖ್ಯಾತ ಸುಗಮ ಸಂಗೀತ ಗಾಯಕ ನಗರ ಶ್ರೀನಿವಾಸ ಉಡುಪ ಸನ್ಮಾನಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಂ. ಡಿ. ಸುದರ್ಶನ ರವರು ಕನ್ನಡ ಧ್ವಜಾರೋಹಣ ನೆರವೇರಿಸಿದರು.ಬಾಕ್ಸ್....

ಕನ್ನಡವೇ ಸತ್ಯ....ಡಾ. ರಾಜಕುಮಾರ್ ಹಾಡಿರುವ ಪ್ರಸಿದ್ಧ ಭಾವಗೀತೆಗಳನ್ನು ನೈಜ ಸಂಗೀತದೊಂದಿಗೆ "ಕನ್ನಡವೇ ಸತ್ಯ " ಗಾಯನ ಶೀರ್ಷಿಕೆಯಡಿ ಪ್ರಸ್ತುತಪಡಿಸಲಾಯಿತು.

ಮೈಸೂರು ಜಯರಾಮ್, ಎ.ಡಿ ಶ್ರೀನಿವಾಸ್, ಎನ್. ಬೆಟ್ಟೆಗೌಡ, ರಾಜೇಶ್ ಪಡಿಯಾರ್, ಡೇವಿಡ್, ಇಂದ್ರಾಣಿ ಅನಂತರಾಮು, ರಶ್ಮಿ ಚಿಕ್ಕಮಗಳೂರು, ಡಾ. ವೈ.ಡಿ. ರಾಜಣ್ಣ, ಸಿಂಚನಾ, ಶ್ರೀಧರ್, ಜೈರಾಜ್, ರವಿರಾಜ್ ಹಾಸು, ಅವರು ಗಾಯನ ಪ್ರಸ್ತುತಪಡಿಸಿದರು. ಪಕ್ಕವಾದ್ಯದಲ್ಲಿ ದೀಪಕ್- ಕೀಬೋರ್ಡ್, ಇಂದುಶೇಖರ್- ತಬಲ, ಪ್ರದೀಪ್ ಕಿಗ್ಗಲ್- ಗಿಟಾರ್, ರೋಷನ್ ಸೂರ್ಯ- ತಬಲ, ವಿನ್ಸೆಂಟ್- ರಿದಂ ಪ್ಯಾಡ್ ಸಾಥ್ ನೀಡಿದರು. ಗೌರವ್ ಸುಧಾ ಮುರಳಿ ಕಾರ್ಯಕ್ರಮ ನಿರೂಪಿಸಿದರು.