ಸಾರಾಂಶ
ಮಾಹೆಯ ಗಾಂಧಿಯನ್ ಫಿಲಾಸಫಿಕಲ್ ಆರ್ಟ್ಸ್ ಮತ್ತು ಸೈನ್ಸಸ್ (ಜಿಸಿಪಿಎಎಸ್)ನಲ್ಲಿ ಕನ್ನಡ ಮತ್ತು ಪ್ರಾದೇಶಿಕ ಭಾಷೆಗಳ ಕೇಂದ್ರ, ಸಹೃದಯ ಸಂಗಮಮ್, ಕೇರಳ ಸಾಂಸ್ಕೃತಿಕ ಮತ್ತು ಸಾಮಾಜಿಕ ಕೇಂದ್ರಗಳ ಸಹಯೋಗದಲ್ಲಿ ರಾಜ್ಯೋತ್ಸವ ದಿನದಂದು ವಿದ್ವಾಂಸರಿಂದ ಸಂವಾದ ಆಯೋಜಿಸಲಾಗಿತ್ತು.
ಕನ್ನಡಪ್ರಭ ವಾರ್ತೆ ಮಣಿಪಾಲ
ಭಾಷೆಯ ವೈವಿಧ್ಯತೆಯನ್ನು ಸಂಭ್ರಮಿಸುವ ಅಗತ್ಯವಿದೆ ಮತ್ತು ಭಾಷಾಂತರವು ವೈವಿಧ್ಯತೆಯನ್ನು ಸಂಭ್ರಮಿಸುವ ಉತ್ತಮ ಕಾರ್ಯವಿಧಾನವಾಗಿದೆ ಎಂದು ವಿವಿಧ ವಿದ್ವಾಂಸರು ಹೇಳಿದರು.ಇಲ್ಲಿನ ಮಾಹೆಯ ಗಾಂಧಿಯನ್ ಫಿಲಾಸಫಿಕಲ್ ಆರ್ಟ್ಸ್ ಮತ್ತು ಸೈನ್ಸಸ್ (ಜಿಸಿಪಿಎಎಸ್)ನಲ್ಲಿ ಕನ್ನಡ ಮತ್ತು ಪ್ರಾದೇಶಿಕ ಭಾಷೆಗಳ ಕೇಂದ್ರ, ಸಹೃದಯ ಸಂಗಮಮ್, ಕೇರಳ ಸಾಂಸ್ಕೃತಿಕ ಮತ್ತು ಸಾಮಾಜಿಕ ಕೇಂದ್ರಗಳ ಸಹಯೋಗದಲ್ಲಿ ರಾಜ್ಯೋತ್ಸವ ದಿನದಂದು ವಿದ್ವಾಂಸರಿಂದ ಸಂವಾದ ಆಯೋಜಿಸಲಾಗಿತ್ತು.ವಿದ್ವಾಂಸರಾದ ಡಾ.ಎನ್.ಟಿ.ಭಟ್, ಡಾ.ಪಾರ್ವತಿ ಐತಾಳ್, ಡಾ.ರಾಜಾರಾಂ ತೋಳ್ಪಡಿ, ಪ್ರೊ.ಕೆ.ಶಂಕರನ್, ಪ್ರೊ.ಮೋಹನ್ ಕುಮಾರ್ ವಿ., ಪ್ರೊ. ವರದೇಶ್ ಹಿರೇಗಂಗೆ, ಡಾ. ಪೃಥ್ವಿರಾಜ್ ಕವತಾರ್ ಈ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡಾ. ಎನ್ ಟಿ. ಭಟ್ ಮತ್ತು ಡಾ. ಪಾರ್ವತಿ ಐತಾಳ್ ಇಬ್ಬರೂ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದದ ಅಗತ್ಯವನ್ನು ಒತ್ತಿ ಹೇಳಿದರು. ಇದರಿಂದ ಒಬ್ಬರು ಇತರ ಭಾಷೆಗಳ ಸೌಂದರ್ಯವನ್ನು ಪ್ರಶಂಸಿಸಲು ಸಾಧ್ಯವಾಗುತ್ತದೆ. ಇಬ್ಬರೂ ತಮ್ಮ ಸ್ವಂತ ಕೃತಿಗಳ ಉದಾಹರಣೆಗಳೊಂದಿಗೆ ಇತರ ಸಾಹಿತ್ಯಗಳ ಸಾರವನ್ನು ಹೊರತರಲು ತಮ್ಮ ಅನುವಾದದ ತತ್ವವನ್ನು ವಿವರಿಸಿದರು. ನಂತರ ‘ಅನುವಾದ ಲೋಕ’ಕ್ಕೆ ಅವರಿಬ್ಬರನ್ನೂ ಸನ್ಮಾನಿಸಲಾಯಿತು.ಡಾ. ರಾಜಾರಾಂ ತೋಳ್ಪಾಡಿ, ‘ರಾಮ್ ಮನೋಹರ ಲೋಹಿಯಾ’ ಅವರ ಮೇಲಿನ ಸಂಶೋಧನೆಯಿಂದ ಎಲ್ಲ ಭಾಷೆಗಳ ಅಗತ್ಯವನ್ನು ಒತ್ತಿ ಹೇಳಿದರು. ಪ್ರೊ.ವರದೇಶ್ ಹಿರೇಗಂಗೆ ಅವರು ಮಾತೃ ಭಾಷೆಯೇ ಒಂದು ಹಂತದ ವರೆಗೆ ಶಿಕ್ಷಣದ ಮಾಧ್ಯಮವಾಗಬೇಕು ಎಂದು ಹೇಳಿದರು. ಪ್ರೊ. ಶಂಕರನ್ ಮತ್ತು ಪ್ರೊ. ಮೋಹನ್ ಕುಮಾರ್ ಇಬ್ಬರೂ ಭಾರತದಲ್ಲಿನ ಭಾಷೆಗಳ ವೈವಿಧ್ಯತೆಯನ್ನು ಪ್ರಶಂಸಿದರು ಮತ್ತು ಸೌಹಾರ್ದಯುತವಾಗಿ ಅದರಿಂದ ಉಂಟಾಗುವ ಸವಾಲುಗಳನ್ನು ನಿರ್ವಹಿಸಬೇಕೆಂದು ಹೇಳಿದರು. ಡಾ ಪೃಥ್ವಿರಾಜ್ ಕವತಾರ್, ಭಾಷಾ ಸಂರಕ್ಷಣೆಯ ಸಂಕೀರ್ಣ ಸ್ವರೂಪದ ಬಗ್ಗೆ ಮಾತನಾಡಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.