ರಾಜ್ಯೋತ್ಸವ ಕನ್ನಡಿಗರ ನಾಡಹಬ್ಬ: ಶಾಸಕ ತುನ್ನೂರು

| Published : Nov 27 2023, 01:15 AM IST

ಸಾರಾಂಶ

ಕನ್ನಡ ರಾಜ್ಯೋತ್ಸವ ಎಂದರೆ ಕನ್ನಡಿಗರು ಸಂಭ್ರಮದಿಂದ ಆಚರಿಸುವ ನಾಡಹಬ್ಬವಾಗಿದೆ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು. ನಗರದ ವಿದ್ಯಾಮಂಗಳ ಕಾರ್ಯಾಲಯದಲ್ಲಿ ನಮ್ಮ ಕರುನಾಡ ರಕ್ಷಣಾ ವೇದಿಕೆ ವತಿಯಿಂದ ನಡೆದ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು

ಕನ್ನಡಪ್ರಭ ವಾರ್ತೆ ಯಾದಗಿರಿ

ಕನ್ನಡ ರಾಜ್ಯೋತ್ಸವ ಎಂದರೆ ಕನ್ನಡಿಗರು ಸಂಭ್ರಮದಿಂದ ಆಚರಿಸುವ ನಾಡಹಬ್ಬವಾಗಿದೆ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು. ನಗರದ ವಿದ್ಯಾಮಂಗಳ ಕಾರ್ಯಾಲಯದಲ್ಲಿ ನಮ್ಮ ಕರುನಾಡ ರಕ್ಷಣಾ ವೇದಿಕೆ ವತಿಯಿಂದ ನಡೆದ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣಕ್ಕೆ ಆದ್ಯತೆ ಕೊಡುವ ಮತ್ತು ಗಡಿ ಪ್ರದೇಶದಲ್ಲಿ ಕನ್ನಡ ಬೆಳವಣಿಗೆಗೆ ಶ್ರಮಿಸಬೇಕು. ಜಿಲ್ಲೆಯಲ್ಲಿ ಕನ್ನಡ ಕಟ್ಟುವ ಕಾರ್ಯದಲ್ಲಿ ನಮ್ಮ ಕರವೇ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರು.

ಸಾನ್ನಿಧ್ಯ ವಹಿಸಿ ಮಾತನಾಡಿದ ಗುರುಮಠಕಲ್ ಖಾಸಾಮಠದ ಶಾಂತವೀರ ಗುರು ಮುರುಘ ರಾಜೇಂದ್ರ ಸ್ವಾಮೀಜಿ, ರಾಜ್ಯೋತ್ಸವ ಸಂದರ್ಭದಲ್ಲಿ ಬೆಂಗಳೂರಿನ ಕಲಾವಿದರನ್ನು ಕರೆಯಿಸಿ ಕಾರ್ಯಕ್ರಮ ಮಾಡುವುದರಿಂದ ಸ್ಥಳೀಯ ಕಲಾವಿದರಿಗೂ ಪ್ರೇರಣೆ ನೀಡುವ ಕಾರ್ಯ ಮಾಡುತ್ತಿರುವುದು ಮೆಚ್ಚುವ ಅಂಶವಾಗಿದೆ ಎಂದರು.

ವಿವಿಧ ಹೋರಾಟಗಳನ್ನು ರೂಪಿಸುವುದರ ಜತೆಗೆ ಸಾಂಸ್ಕೃತಿಕ, ಕಲಾ ಕಾರ್ಯಕ್ರಮಗಳನ್ನು ಮಾಡುತ್ತಾ, ಜನ ಮಾನಸದಲ್ಲಿ ಕನ್ನಡದ ಕಂಪು ಹರಡುತ್ತಿರುವ ನಮ್ಮ ಕರವೇ ಜಿಲ್ಲಾಧ್ಯಕ್ಷ ರವಿ ಮುದ್ನಾಳ ಅವರ ಕಾರ್ಯ ಮಾದರಿಯಾಗಿದೆ ಎಂದರು.

ಇದೇ ಮಾದರಿಯಲ್ಲಿ ಮುಂದುವರೆದು ಬರುವ ವರ್ಷಗಳಲ್ಲಿ ಬಡ ಜನರಿಗೆ ಸಾಮೂಹಿಕ ವಿವಾಹಗಳನ್ನು ಆಯೋಜಿಸುವ ಮೂಲಕ ಹೆಚ್ಚಿನ ಜನಪರ ಕಾರ್ಯಕ್ರಮಗಳ ಆಯೋಜಿಸುವಂತೆ ಸಲಹೆ ನೀಡಿದರು.

ಗರಡಿ ಚಲನಚಿತ್ರ ನಟ ಯಶಸ್ ಸೂರ್ಯ ಮಾತನಾಡಿ, ಕನ್ನಡ ನಾಡು-ನುಡಿ ರಕ್ಷಣೆ ಹೋರಾಟದ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲದೇ ಸಾಮಾಜಿಕ ನಂತರ ರಾಜಕೀಯ ಪ್ರವೇಶವು ಮಾಡಿ ಎಂದರು.

ಮಹಲ್‌ ರೋಜಾದ ಮಲ್ಲಿಕಾರ್ಜುನ ಮುತ್ಯಾ, ಅರಕೇರಾದ ಪರಮಾನಂದ ಮಠದ ಗುರುಲಿಂಗ ಸ್ವಾಮೀಜಿ ಮತ್ತು ರಾಜ್ಯ ರೈತ ಸಂಘ ರೈತ ಸೇನೆ ರಾಜ್ಯ ಉಪಾಧ್ಯಕ್ಷ ಲಕ್ಷ್ಮೀಕಾಂತ ಪಾಟೀಲ್ ಮದ್ದರಕಿ ಹಾಗೂ ಪದ್ಮಾವತಿ ಚಿತ್ರದ ನಟಿ ಸಾಕ್ಷಿ ಮೇಘನಾ ಮಾತನಾಡಿದರು.

ಪ್ರಾಸ್ತಾವಿಕವಾಗಿ ಜಿಲ್ಲಾಧ್ಯಕ್ಷ ರವಿ ಕೆ. ಮುದ್ನಾಳ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ವಿನೋದ ರಾಠೋಡ, ಕಾಂಗ್ರೆಸ್ ಹಿರಿಯ ಮುಖಂಡ ಬಸವರಾಜಪ್ಪಗೌಡ ದಳಪತಿ, ತಾ.ಪಂ. ಮಾಜಿ ಸದಸ್ಯ ಯಂಕಪ್ಪ ರಾಠೋಡ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮರೆಪ್ಪ ಬಿಳ್ಹಾರ, ಕಾಶಿನಾಥ ರಾಠೋಡ, ವಿದ್ಯಾರ್ಥಿ ಅಧ್ಯಕ್ಷ ರವಿ ಪೂಜಾರಿ, ಮಹೇಶ ಯಾದವ, ಶರಣಕುಮಾರ ಕೆ.ಹೆಚ್., ನಾಗಾ ಸರನಾಯಕ, ಬಸವರಾಜ, ಶ್ರೀಕಾಂತ ಸೇರಿದಂತೆ ಇತರರಿದ್ದರು.

ಬಂಗಾರು ರಾಠೋಡ ನಿರೂಪಿಸಿದರು. ತಿರುಪತಿ ಚವ್ಹಾಣ ಸ್ವಾಗತಿಸಿದರು. ವಿಜಯ ಜಾಧವ ವಂದಿಸಿದರು. ಕರುನಾಡ ಸೇವಾ ಸಾಧಕರ ಪ್ರಶಸ್ತಿಯನ್ನು ಪತ್ರಕರ್ತರಾದ ಬಿ.ಜಿ. ಪ್ರವೀಣಕುಮಾರ, ಲಕ್ಷ್ಮೀಕಾಂತ ಕುಲಕರ್ಣಿ, ಆರ್.ಸಿ. ಹೆಚ್. ಅಧಿಕಾರಿ ಡಾ. ಮಲ್ಲಪ್ಪ ನಾಯ್ಕಲ್, ಜಿಲ್ಲಾಧಿಕಾರಿ ಕಚೇರಿ ಶಿರಸ್ತೇದಾರರಾದ ಅನುಸೂಬಾಯಿ, ನಿವೃತ್ತ ಶಿಕ್ಷಕಿ ಅನ್ನಪೂರ್ಣ ಚತುರಾಚಾರ್ಯಮಠ, ಸಂಪಾದಕ ವೈಜನಾಥ ಹಿರೇಮಠ ಅವರಿಗೆ ವಿತರಿಸಲಾಯಿತು.