ಮಿಲಾಗ್ರಿಸ್ ಕಾಲೇಜಿನಲ್ಲಿ ರಾಜ್ಯೋತ್ಸವ ಕಾರ್ಯಕ್ರಮ

| Published : Nov 06 2024, 12:39 AM IST

ಮಿಲಾಗ್ರಿಸ್ ಕಾಲೇಜಿನಲ್ಲಿ ರಾಜ್ಯೋತ್ಸವ ಕಾರ್ಯಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ, ಕನ್ನಡ ವಿಭಾಗ ಹಾಗೂ ಐಕ್ಯೂಎಸಿಗಳ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ ‘ಸಿರಿ ಸಂಭ್ರಮ’ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು.

ಕನ್ನಡಪ್ರಭ ವಾರ್ತೆ ಕಲ್ಯಾಣಪುರ

ಇಲ್ಲಿನ ಮಿಲಾಗ್ರಿಸ್ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ, ಕನ್ನಡ ವಿಭಾಗ ಹಾಗೂ ಐಕ್ಯೂಎಸಿಗಳ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ ‘ಸಿರಿ ಸಂಭ್ರಮ’ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು.

ಮಾಹೆಯ ಪ್ರಾದೇಶಿಕ ಸಂಶೋಧನಾ ಕೇಂದ್ರದ ಸಹ ಸಂಶೋಧಕ ಡಾ. ಅರುಣ್‌ಕುಮಾರ್ ಎಸ್.ಆರ್. ಕಾರ್ಯಕ್ರಮ ಉದ್ಘಾಟಿಸಿ, ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗಳ ಕುರಿತಾದ ವಿಚಾರಗಳನ್ನು ತಿಳಿಸಿದರು.ಭಾಷೆಯಿಂದ ಒಂದು ಸಮಾಜದ ಸಂಸ್ಕೃತಿ, ಆಚರಣೆಗಳು ಉಳಿಯಲು ಸಾಧ್ಯವಿದೆ,.ಕನ್ನಡ ಸಾಹಿತ್ಯವು ಪಂಪನಿಂದ ತೊಡಗಿ ಹಲವು ಜನ ಶ್ರೇಷ್ಠ ಕವಿಗಳ ಮೂಲಕ ಜೀವನಕ್ಕೆ ಬೇಕಾದ ವಿಚಾರಗಳನ್ನು ನೀಡುತ್ತಾ ಬಂದಿದೆ. ಸಮಾಜದ ಕೆಟ್ಟ ವಿಚಾರಗಳನ್ನು ಪ್ರತಿಭಟಿಸುವ ಮತ್ತು ನ್ಯಾಯವನ್ನು ತಂದುಕೊಳ್ಳುವ ರೀತಿಯ ಸಾಹಿತ್ಯವು ಕನ್ನಡದಲ್ಲಿ ಬಹಳ ಹಿಂದೆಯೇ ಮೂಡಿ ಬಂದಿರುವುದು ಗಮನಾರ್ಹ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಡಾ. ವಿನ್ಸೆಂಟ್ ಆಳ್ವ ಅಧ್ಯಕ್ಷತೆ ವಹಿಸಿ, ಪ್ರತಿಯೊಂದು ಭಾಷೆಯೂ ಗೌರವಕ್ಕೆ ಅರ್ಹವಾಗಿರುತ್ತದೆ ಮತ್ತು ಸಾಹಿತ್ಯದ ಓದುವಿಕೆಯು ಪ್ರತಿಯೊಬ್ಬರನ್ನೂ ಉನ್ನತಿಯತ್ತ ಕೊಂಡೊಯ್ಯುತ್ತದೆ ಎಂದು ತಿಳಿಸಿದರು.

ಕನ್ನಡ ವಿಭಾಗದ ಮುಖ್ಯಸ್ಥೆ ಹಾಗೂ ವಿದ್ಯಾರ್ಥಿ ಸಂಘದ ನಿರ್ದೇಶಕಿ ಡಾ. ಹರಿಣಾಕ್ಷಿ ಎಂ.ಡಿ. ಅತಿಥಿಗಳನ್ನು ಪರಿಚಯಿಸಿದರು. ರಾಜ್ಯೋತ್ಸವದ ಆಚರಣೆಯ ಪ್ರಯುಕ್ತ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳ ಬಹುಮಾನಗಳ ವಿತರಣೆಯನ್ನು ಸುಷ್ಮಾ ಶೆಟ್ಟಿ ನಡೆಸಿಕೊಟ್ಟರು.

ವೇದಿಕೆಯಲ್ಲಿ ಐಕ್ಯೂಎಸಿಯ ಸಂಯೋಜಕ ಪ್ರೊ. ಶಾಲೆಟ್ ಮಥಾಯಸ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಗಣೇಶ್ ಸ್ವಾಗತಿಸಿದರು. ಉಮ್ಮರ್ ವಂದಿಸಿದರು. ರಂಜಿತಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ಪದಾಧಿಕಾರಿಗಳಾದ ನಮ್ರತಾ, ವಿಶಾಲ್, ಶ್ರೀಶ, ಶ್ರೇಯಾ ಮನರಂಜನಾ ಕಾರ್ಯಕ್ರಮ ನಡೆಸಿಕೊಟ್ಟರು.