ಈ ಪ್ರಜಾಸೇವಾ ಆಂದೋಲನ ಕೇವಲ ಜಿಲ್ಲಾ ಕೇಂದ್ರಕ್ಕೆ ಸೀಮಿತವಾಗಿರದೆ ತಾಲೂಕು, ಹೋಬಳಿ ಹಾಗೂ ಗ್ರಾಪಂ ಮಟ್ಟಕ್ಕೂ ವಿಸ್ತರಣೆಯಾಗಲಿದೆ.

ಜಾಸೇವಾ ಆಂದೋಲನ ಗ್ರಾಪಂ ಮಟ್ಟಕ್ಕೂ ವಿಸ್ತರಣೆ । ಆಯಾ ಇಲಾಖೆಗಳ ಕೌಂಟರ್‌ಗಳಲ್ಲಿ ಅರ್ಜಿ ಸಲ್ಲಿಸಿ, ಸ್ಥಳದಲ್ಲೇ ಇತ್ಯರ್ಥ

ಕನ್ನಡಪ್ರಭ ವಾರ್ತೆ ಕೋಲಾರ

ಸರ್ಕಾರದ ಸೌಲಭ್ಯಗಳನ್ನು ನೇರವಾಗಿ ಸಾರ್ವಜನಿಕರ ಮನೆಬಾಗಿಲಿಗೆ ತಲುಪಿಸುವ ಮಹತ್ವಾಕಾಂಕ್ಷೆಯ ಪ್ರಜಾಸೇವಾ ಆಂದೋಲನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ರಾಮಲಿಂಗಾರೆಡ್ಡಿ ಶನಿವಾರ ಜೂನಿಯರ್ ಕಾಲೇಜು ಆವರಣದಲ್ಲಿ ಚಾಲನೆ ನೀಡಿದರು.

ಸಿಎಂ ಡಿ.ಕೆ.ಶಿವಕುಮಾರ್ ಪರಿಕಲ್ಪನೆಯಂತೆ ನೂತನವಾಗಿ ಪ್ರಜಾಸೇವಾ ಇಲಾಖೆ ಸೃಜಿಸಲಾಗಿದ್ದು, ಜನಸಾಮಾನ್ಯರು ಸಣ್ಣಪುಟ್ಟ ಕೆಲಸಗಳಿಗಾಗಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವುದು ಇದರ ಮುಖ್ಯ ಉದ್ದೇಶ. ಇದೇ ವೇದಿಕೆಯ ಮುಖಾಂತರ ಸಚಿವರು ನಾಡಿನ ಸಮಸ್ತ ಶಿಕ್ಷಕ ಸಮುದಾಯಕ್ಕೆ ಶಿಕ್ಷಕರ ದಿನಾಚರಣೆ ಶುಭಾಶಯ ಕೋರಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಈ ಪ್ರಜಾಸೇವಾ ಆಂದೋಲನ ಕೇವಲ ಜಿಲ್ಲಾ ಕೇಂದ್ರಕ್ಕೆ ಸೀಮಿತವಾಗಿರದೆ ತಾಲೂಕು, ಹೋಬಳಿ ಹಾಗೂ ಗ್ರಾಪಂ ಮಟ್ಟಕ್ಕೂ ವಿಸ್ತರಣೆಯಾಗಲಿದೆ. ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಪ್ರತಿ ತಿಂಗಳ ೧ ಮತ್ತು ೩ನೇ ಶನಿವಾರ ಹಾಗೂ ಶಾಸಕರ ನೇತೃತ್ವದಲ್ಲಿ ಪ್ರತಿ ಶನಿವಾರ ತಾಲೂಕು ಮಟ್ಟದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದರು.

ಸಾರ್ವಜನಿಕರು ಆಯಾ ಇಲಾಖೆಗಳ ಕೌಂಟರ್‌ಗಳಲ್ಲಿ ಸಲ್ಲಿಸುವ ಅರ್ಜಿಗಳನ್ನು ಸ್ಥಳದಲ್ಲಿಯೇ ಇತ್ಯರ್ಥಪಡಿಸಬೇಕು, ಕೆರೆ, ರಾಜಕಾಲುವೆ, ರಸ್ತೆ ಒತ್ತುವರಿಯಂತಹ ಕ್ಲಿಷ್ಟಕರ ಸಮಸ್ಯೆಗಳಿಗೆ ಕಾಲಮಿತಿ ನಿಗದಿಪಡಿಸಿ ಪರಿಹಾರ ಒದಗಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸ್ಥಳದಲ್ಲಿ ಇತ್ಯರ್ಥವಾಗದ ಅರ್ಜಿಗಳ ಕುರಿತು ಪ್ರತಿ ಬುಧವಾರ ತಾಲೂಕು ಕಚೇರಿಗಳಲ್ಲಿ ವಿಮರ್ಶಾ ಸಭೆ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಲ್ಮಾ ಫಾಹಿನ್ ೧೫ ದಿನಗಳಿಗೊಮ್ಮೆ ಹಾಗೂ ಸಿಎಂ ಪ್ರತಿ ತಿಂಗಳು ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ ಎಂದು ಎಚ್ಚರಿಸಿದರು.

ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಕುರಿತು ಮಾತನಾಡಿದ ಅವರು, ೨೦೨೭ರ ಒಳಗೆ ಕೆ.ಸಿ. ವ್ಯಾಲಿ ಯೋಜನೆಯಡಿ ೪೪೦ ಎಂಎಲ್.ಡಿ ಶುದ್ಧ ನೀರನ್ನು ಕೆರೆಗಳಿಗೆ ಹರಿಸುವ ನಿಟ್ಟಿನಲ್ಲಿ ಶುದ್ಧೀಕರಣ ಘಟಕಗಳ ದುರಸ್ತಿ ಕಾರ್ಯ ಶೀಘ್ರವೇ ಪೂರ್ಣಗೊಳ್ಳಲಿದೆ ಎಂದರು.

ಮುಂದಿನ ಶೈಕ್ಷಣಿಕ ವರ್ಷದಿಂದಲೇ ಕೋಲಾರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭವಾಗಲಿದ್ದು, ದೇಶದ ಎರಡನೇ ಅತಿದೊಡ್ಡ ಮಾರುಕಟ್ಟೆಯಾಗಿರುವ ಕೋಲಾರ ಎಪಿಎಂಸಿಯನ್ನು ೬೦ ಎಕರೆ ಗೋಮಾಳ ಜಾಗದಲ್ಲಿ ವಿಸ್ತರಿಸಿ ಮೇಲ್ದರ್ಜೆಗೇರಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ ಎಂದು ಸ್ಪಷ್ಟಪಡಿಸಿದರು.

ಶಾಸಕ ಡಾ.ಕೊತ್ತೂರು ಜಿ.ಮಂಜುನಾಥ್ ಮಾತನಾಡಿ, ರಾಜ್ಯಾದ್ಯಂತ ಹೊಸದಾಗಿ ಪ್ರಜಾಸೇವಾ ಇಲಾಖೆಯನ್ನು ಸ್ಥಾಪಿಸಲಾಗಿದ್ದು, ಜಿಲ್ಲೆಯ ಜನರ ಮನೆಬಾಗಿಲಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವ ಜವಾಬ್ದಾರಿ ಜಿಲ್ಲಾಡಳಿತಕ್ಕೆ ವಹಿಸಲಾಗಿದೆ. ರೇಷನ್ ಕಾರ್ಡ್ ಮತ್ತು ಪಿಂಚಣಿ ಸೌಲಭ್ಯ ಪಡೆಯುವ ಆದಾಯ ಮಿತಿ ಸರ್ಕಾರ ೧,೨೦,೦೦೦ ರುಪಾಯಿಗಳವರೆಗೆ ಹೆಚ್ಚಿಸಿದೆ ಎಂದರು.

ಸಭೆಯಲ್ಲಿ ಎಂಎಲ್ಸಿ ಎಂ.ಎಲ್.ಅನಿಲಕುಮಾರ್ ಮಾತನಾಡಿ, ಸಿಎಂ ಡಿ.ಕೆ.ಶಿವಕುಮಾರ್ ಪರಿಕಲ್ಪನೆಯಂತೆ ’ಪ್ರಜಾಸೇವಾ ಇಲಾಖೆ’ಯನ್ನು ಪ್ರಾರಂಭಿಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಈ ಕಾರ್ಯಕ್ರಮ ಉದ್ಘಾಟಿಸಿದ್ದಾರೆ. ಸರ್ಕಾರದ ಸೌಲಭ್ಯಗಳನ್ನು ನೇರವಾಗಿ ಜನರ ಮನೆಬಾಗಿಲಿಗೆ ತಲುಪಿಸುವುದು ಈ ಆಂದೋಲನದ ಪ್ರಮುಖ ಉದ್ದೇಶವಾಗಿದ್ದು, ಮುಂಬರುವ ದಿನಗಳಲ್ಲಿ ಕಾರ್ಯಕ್ರಮ ತಾಲೂಕು, ಹೋಬಳಿ ಹಾಗೂ ಗ್ರಾಪಂ ಮಟ್ಟಕ್ಕೂ ವಿಸ್ತರಿಸಲಾಗುವುದು ಎಂದು ತಿಳಿಸಿದರು.

ಕೆ.ಸಿ. ವ್ಯಾಲಿ ಯೋಜನೆಯಡಿ ೪೪೦೦ ಎಂಎಲ್.ಡಿ ನೀರು ಒದಗಿಸುವ ಒಪ್ಪಂದವಿದ್ದರೂ ಪ್ರಸ್ತುತ ಕೇವಲ ೨೧೫ ಎಂಎಲ್.ಡಿ ನೀರು ಮಾತ್ರ ಪೂರೈಕೆಯಾಗುತ್ತಿದೆ. ಹೀಗಾಗಿ ಶುದ್ಧೀಕರಣ ಘಟಕಗಳ ದುರಸ್ತಿ ಕಾರ್ಯ ಶೀಘ್ರದಲ್ಲಿಯೇ ಮುಗಿಸಿ ಪೂರ್ಣ ಪ್ರಮಾಣದ ನೀರು ಹರಿಸಲಾಗುವುದು ಎಂದು ತಿಳಿಸಿದರು.

ಇದಕ್ಕೂ ಮುನ್ನ ಸಚಿವರು ಸರ್ಕಾರದ ವಿವಿಧ ಇಲಾಖೆಗಳ ಸ್ಟಾಲ್ ಗಳನ್ನು ಅನಾವರಣ ಗೊಳಿಸಿ ಪ್ರತಿ ಮಳಿಗೆಯಲ್ಲಿ ಮಾಹಿತಿ ಪಡೆದರು.

ಕಾರ್ಯಕ್ರಮದಲ್ಲಿ ನಗರಭಿವೃದ್ಧಿ ಅಧ್ಯಕ್ಷ ಹನೀಫ್, ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಜಿಲ್ಲಾಧ್ಯಕ್ಷ ವೈ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಲ್ಮಾ ಫಾಹಿನ್, ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್, ಜಿಪಂ ಸಿಇಓ ಡಾ.ಪ್ರವೀಣ್ ಪಿ.ಬಾಗೇವಾಡಿ, ಕೋಲಾರ ಎಸ್‌ಪಿ ಕನ್ನಿಕಾ ಸಿಕ್ರಿವಾಲ್, ಎಡಿಸಿ ಎಸ್.ಎಂ.ಮಂಗಳ, ಜಿಲ್ಲಾ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಸರಿನಾ ಸಿಕ್ಕಲಿಗರ್, ಉಪವಿಭಾಗಾಧಿಕಾರಿ ಜಂಬಗಿ ರೇಣುಕಾಪ್ರಸಾದ್ ದಿಲೀಪ್, ನಗರಸಭೆ ಪೌರಾಯುಕ್ತ ವೆಂಕಟೇಶ್ ನಾಗನೂರ್ ಇದ್ದರು.