ಶೆಟ್ಟರ್ ಜೊತೆಗೆ ರಮೇಶ ಜಾರಕಿಹೊಳಿ ಚರ್ಚೆ

| Published : Mar 29 2024, 12:49 AM IST

ಸಾರಾಂಶ

ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್‌ ಕ್ಷೇತ್ರದಲ್ಲಿ ಪ್ರಚಾರ ಕಾರ್ಯಕೈಗೊಳ್ಳುವುದರ ಜೊತೆಗೆ ಅತೃಪ್ತ ಬಿಜೆಪಿ ನಾಯಕರ ಮನವೊಲಿಸುವ ಪ್ರಯತ್ನ ಮುಂದುವರಿಸಿದ್ದಾರೆ. ಮಾಜಿ ಸಚಿವ, ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಜಗದೀಶ ಶೆಟ್ಟರ್‌ ಅವರನ್ನು ಬೆಳಗಾವಿಯಲ್ಲಿ ಭೇಟಿಯಾಗಿ ಚುನಾವಣೆ ಕಾರ್ಯತಂತ್ರದ ಕುರಿತು ಸಮಾಲೋಚನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಸ್ಥಳೀಯ ಬಿಜೆಪಿ ನಾಯಕರೊಂದಿಗೆ ಪ್ರಚಾರ ಕಾರ್ಯಕೈಗೊಂಡಿರುವ ಜಗದೀಶ ಶೆಟ್ಟರ್‌ ಮಠಾಧೀಶರನ್ನು ಭೇಟಿಯಾಗಿ ಆಶೀರ್ವಾದ ಪಡೆಯುತ್ತಿದ್ದು, ತಾವು ಹೊರಗಿನವರಲ್ಲ ಎಂಬುದನ್ನು ಸಾಬೀತುಪಡಿಸುವ ಪ್ರಯತ್ನ ನಡೆಸಿದ್ದಾರೆ. ಬೆಳಗಾವಿ ಜೊತೆಗೆ ಮೂರು ದಶಕಗಳ ನಂಟಿದ್ದು, ತಾವು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವೇಳೆ ಜಿಲ್ಲೆಗೆ ತಂದಿರುವ ಅಭಿವೃದ್ಧಿ ಯೋಜನೆಗಳ ಕುರಿತು ಜನತೆಗೆ ಮನವರಿಕೆ ಮಾಡತೊಡಗಿದ್ದಾರೆ. ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಮಂತ್ರಿಯನ್ನಾಗಿಸಬೇಕಿದೆ. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಸಂಘಟಿತರಾಗಿ ಕೆಲಸ ಮಾಡುವಂತೆ ಮನವಿ ಮಾಡಿದ್ದಾರೆ.

ಸಂಸದೆ ಮಂಗಲ ಅಂಗಡಿ ಗೃಹ ಕಚೇರಿಯಲ್ಲಿ ಗುರುವಾರ ಜಗದೀಶ ಶೆಟ್ಟರ್‌ ರನ್ನು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಭೇಟಿಯಾಗಿ, ಸುಮಾರು ಎರಡು ಗಂಟೆಕಾಲ ಸುದೀರ್ಘವಾಗಿ ಚುನಾವಣೆ ಕುರಿತು ಚರ್ಚಿಸಿದ್ದಾರೆ.

ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಲೆ ಇದೆ. ಕಾರ್ಯಕರ್ತರು ಉತ್ಸುಕರಾಗಿದ್ದಾರೆ. ಎಲ್ಲರೂ ಒಮ್ಮತದಿಂದ ಕೆಲಸ ಮಾಡುತ್ತಾರೆ.ಎಲ್ಲರಲ್ಲಿಯೂ ಸಹಮತ ಇದೆ. ನರೇಂದ್ರ ಮೋದಿ ಅವರು ಈ ಬಾರಿಯೂ ಪ್ರಧಾನಿಯಾಗೋದು ನಿಶ್ಚಿತವಾಗಿದೆ. ಬೆಳಗಾವಿಯಲ್ಲೂ ಬಿಜೆಪಿ ವಿಜಯದ ಪತಾಕೆ ಹಾರಿಸಲಿದೆ. ನಾವೆಲ್ಲರೂ ಅದಕ್ಕಾಗಿ ಹಗಲಿರುಳು ಶ್ರಮಿಸುತ್ತೇವೆ ಎಂದು ರಮೇಶ ಜಾರಕಿಹೊಳಿ ಭರವಸೆ ನೀಡಿದ್ದಾರೆ. ಸೋಮವಾರದಿಂದ ನಿರಂತರವಾಗಿ ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಸಂಚಾರ ಮಾಡುತ್ತೇನೆ. ಬಿಜೆಪಿಯ ಕಾರ್ಯಕರ್ತರು, ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ಷೇತ್ರದಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಯ ಮೇಲೆ ನಿಗಾ ಇಡುತ್ತೇವೆ ಎಂದು ರಮೇಶ ಜಾರಕಿಹೊಳಿ ಭರವಸೆ ನೀಡಿದ್ದಾರೆ.