ಭಕ್ತಸಾಗರದ ನಡುವೆ ರಾಮನಾಥಪುರದ ತೇರು ಸಂಪನ್ನ

| Published : Dec 19 2023, 01:45 AM IST

ಭಕ್ತಸಾಗರದ ನಡುವೆ ರಾಮನಾಥಪುರದ ತೇರು ಸಂಪನ್ನ
Share this Article
  • FB
  • TW
  • Linkdin
  • Email

ಸಾರಾಂಶ

ರಥೋತ್ಸವದಲ್ಲಿ ಸುತ್ತಮುತ್ತಲಿನ ಹಳ್ಳಿಗಳು ಹಾಗೂ ನೆರೆ ಜಿಲ್ಲೆಗಳ ಅಪಾರ ಭಕ್ತರು ರಥೋತ್ಸವ ಸಂಭ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ನಸುಕಿನಿಂದಲೇ ಭಕ್ತರು ಕೊರೆಯುವ ಮೈ ಚಳಿಯನ್ನು ಲೆಕ್ಕಿಸದೆ ಕಾವೇರಿ ನದಿಗೆ ಇಳಿದು ಪುಣ್ಯಸ್ನಾನ ಮಾಡಿದರು. ದಿನವಿಡೀ ಭಕ್ತರ ನದಿಯಲ್ಲಿ ಪವಿತ್ರ ಸ್ನಾನ ಮಾಡಿ ದೇವಸ್ಥಾನದ ಪೂಜಾ ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಹರಕೆ ಹೊತ್ತ ಭಕ್ತರು ತಲೆಮಡಿ ಅರ್ಪಿಸಿದರು. ದೇವಸ್ಥಾನಕ್ಕೆ ಬರುವ ಭಕ್ತರ ನೂಕುನುಗ್ಗಲು ಉಂಟಾಗದಂತೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ದೇವಸ್ಥಾನದಲ್ಲಿ ನೂಕುನುಗ್ಗಲನ್ನು ನಿಯಂತ್ರಿಸಲು ಸ್ವಯಂಸೇವಕರು ಸಹಕರಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು.

ಕನ್ನಡಪ್ರಭ ವಾರ್ತೆ ಅರಕಲಗೂಡು

ತಾಲೂಕಿನ ರಾಮನಾಥಪುರ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ತುಳು ಷಷ್ಠಿ ಮಹಾ ರಥೋತ್ಸವ ಸೋಮವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಬಹು ವಿಜೃಂಭಣೆಯಿಂದ ನೆರವೇರಿತು.

ದೇವಸ್ಥಾನದಲ್ಲಿ ಬೆಳಗ್ಗೆ ವಿವಿಧ ಧಾರ್ಮಿಕ ಪೂಜಾ ವಿಧಾನಗಳನ್ನು ಪೂರೈಸಲಾಯಿತು. ಮಧ್ಯಾಹ್ನ 12 ಗಂಟೆ ವೇಳೆಗೆ ದೇವರ ಉತ್ಸವ ಮೂರ್ತಿಯನ್ನು ಪ್ರಾಂಗಣ ಸುತ್ತ ಪ್ರದಕ್ಷಿಣೆ ಹಾಕಿಸಿ ಹೊರತಂದು ಅಲಂಕೃತ ರಥದ ಮೇಲೆ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಪುನಸ್ಕಾರಗಳನ್ನು ಸಲ್ಲಿಸಲಾಯಿತು. ಶುಭ ಮುಹೂರ್ತದಲ್ಲಿ ನೆರೆದಿದ್ದ ಭಕ್ತರ ಜಯ ಘೋಷಗಳ ನಡುವೆ ಭಕ್ತರು ತೇರು ಎಳೆದರು.

ತೇರು ಮುಂದೆ ಸಾಗುವಾಗ ಭಕ್ತರು ರಥದತ್ತ ಹಣ್ಣು ಧವನ ತೂರಿ ತಮ್ಮ ಭಕ್ತಿ ಸಮರ್ಪಿಸಿದರು. ನಾಗದೇವ ಉತ್ಸವ ಮೂರ್ತಿಯನ್ನು ಹೊತ್ತು ದೈವಾನುಗ್ರಹದಿಂದ ಸೇತುವೆ ತನಕ ಸುಸೂತ್ರವಾಗಿ ಸಾಗಿದ ತೇರು ಮತ್ತೆ ಸ್ವಸ್ಥಾನಕ್ಕೆ ಸೇರಿತು.

ರಥೋತ್ಸವ ಬಳಿಕ ದೇವರ ಮೂರ್ತಿಯನ್ನು ಬೆಳ್ಳಿ ರಥದಲ್ಲಿ ಕೂರಿಸಿ ಮೂರು ಸುತ್ತು ವೈಮಾಳಿಗೋತ್ಸವ ನಡೆಯಿತು. ದೇವಸ್ಥಾನದ ಒಳ ಪ್ರಾಂಗಣದ ಸುತ್ತ ಪ್ರದಕ್ಷಿಣೆ ಹಾಕಿದ ಉತ್ಸವ ಮೂರ್ತಿಯನ್ನು ಭಕ್ತರು ಕಣ್ತುಂಬಿಕೊಂಡು ಪುನೀತರಾದರು. ದಕ್ಷಿಣ ಕನ್ನಡ ಶೈಲಿಯ ಮಂಗಳವಾದ್ಯ ಶಬ್ಧ ನಿನಾದ ದೇವಸ್ಥಾನದಲ್ಲಿ ಮೊಳಗಿತು.

ರಥೋತ್ಸವದಲ್ಲಿ ಸುತ್ತಮುತ್ತಲಿನ ಹಳ್ಳಿಗಳು ಹಾಗೂ ನೆರೆ ಜಿಲ್ಲೆಗಳ ಅಪಾರ ಭಕ್ತರು ರಥೋತ್ಸವ ಸಂಭ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ನಸುಕಿನಿಂದಲೇ ಭಕ್ತರು ಕೊರೆಯುವ ಮೈ ಚಳಿಯನ್ನು ಲೆಕ್ಕಿಸದೆ ಕಾವೇರಿ ನದಿಗೆ ಇಳಿದು ಪುಣ್ಯಸ್ನಾನ ಮಾಡಿದರು. ದಿನವಿಡೀ ಭಕ್ತರ ನದಿಯಲ್ಲಿ ಪವಿತ್ರ ಸ್ನಾನ ಮಾಡಿ ದೇವಸ್ಥಾನದ ಪೂಜಾ ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಹರಕೆ ಹೊತ್ತ ಭಕ್ತರು ತಲೆಮಡಿ ಅರ್ಪಿಸಿದರು. ದೇವಸ್ಥಾನಕ್ಕೆ ಬರುವ ಭಕ್ತರ ನೂಕುನುಗ್ಗಲು ಉಂಟಾಗದಂತೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ಸರದಿ ಸಾಲಿನಲ್ಲಿ ನಿಂತು ದೇವಸ್ಥಾನಕ್ಕೆ ಆಗಮಿಸಿ ಭಕ್ತರು ಹಣ್ಣು, ತುಪ್ಪ, ನೈವೇದ್ಯ ಅರ್ಪಿಸಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದು ಕೃತಾರ್ಥರಾದರು.

ದೇವಸ್ಥಾನದಲ್ಲಿ ನೂಕುನುಗ್ಗಲನ್ನು ನಿಯಂತ್ರಿಸಲು ಸ್ವಯಂಸೇವಕರು ಸಹಕರಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು.

ಸೋಮವಾರ ರಾತ್ರಿ ದೇವಸ್ಥಾನದಲ್ಲಿ ಶಾಂತೋತ್ಸವ ನಡೆಯಿತು. ಪಾರುಪತ್ತೇದಾರ್‌ ರಮೇಶ್‌ ಭಟ್‌ ನೆಲ್ಲಿತೀರ್ಥ ಅವರ ಮುಖಂಡತ್ವದಲ್ಲಿ ಧಾರ್ಮಿಕ ಕಾರ್ಯಗಳು ವಿಧಿವತ್ತಾಗಿ ಸಾಗಿದವು. ಸುಬ್ರಮಣ್ಯಸ್ವಾಮಿ ದರ್ಶನಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಮಾಡಲಾಯಿತು.

ಈ ವೇಳೆ ಶಾಸಕ ಎ. ಮಂಜು, ಎಂಎಲ್ ಸಿ ಸೂರಜ್‌ ರೇವಣ್ಣ ಮತ್ತಿತರರು ಪ್ರಸನ್ನ ಸುಬ್ರಮಣ್ಯ ಸ್ವಾಮಿ ದರ್ಶನ ಪಡೆದರು. * ಹೇಳಿಕೆ-1

ಪ್ರತಿವರ್ಷ ಷಷ್ಠಿ ಜಾತ್ರೆಯನ್ನು ಸಂಪ್ರದಾಯವಾಗಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಭಕ್ತರ ಸಂಖ್ಯೆಯು ಹೆಚ್ಚಾಗುತ್ತಿದೆ. ರಾಮನಾಥಪುರದಲ್ಲಿ 11 ದೇವಾಲಯಗಳಿದ್ದು "ದಕ್ಷಿಣ ಕಾಶಿ " ಎಂದು ಕರೆಯಲಾಗುತ್ತದೆ. ಇಂದು ರಾಮೇಶ್ವರ ದೇವಸ್ಥಾನವನ್ನು ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ನದಿಯ ಸ್ವಚ್ಛತೆಯನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ. - ಎ. ಮಂಜು, ಶಾಸಕ