22ರಂದು ಬಜಗೋಳಿ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ರಾಮೋತ್ಸವ

| Published : Jan 13 2024, 01:31 AM IST

ಸಾರಾಂಶ

ಅಯೋಧ್ಯೆಯಲ್ಲಿ ಪ್ರತಿಮೆ ಕೆತ್ತಲು ಕರಾವಳಿಯಿಂದಲೂ ಶಿಲೆ ಕಲ್ಲು ಕೊಂಡೊಯ್ಯಲಾಗಿತ್ತು. ಕಾರ್ಕಳ ತಾಲೂಕಿನ ತುಂಗಪ್ಪ ಪೂಜಾರಿ ಅವರ ಜಾಗದಲ್ಲಿದ್ದ ನೆಲ್ಲಿಕಾರು ಶಿಲೆಯು ಅಯೋಧ್ಯೆಗೆ ಕೊಂಡೊಯ್ಯುವಾಗ ಮೊದಲ ಬಾರಿ ಪೂಜಿಸಿದ ಸ್ಥಳ ಕಾರ್ಕಳ ಬಜಗೋಳಿ. ಇಲ್ಲಿನ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ಜ.22ರಂದು ರಾಮೋತ್ಸವ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ.

ಕನ್ನಡಪ್ರಭ ವಾರ್ತೆ ಕಾರ್ಕಳ

ತಾಲೂಕಿನ ತುಂಗಪ್ಪ ಪೂಜಾರಿ ಅವರ ಜಾಗದಲ್ಲಿದ್ದ ನೆಲ್ಲಿಕಾರು ಶಿಲೆಯು ಅಯೋಧ್ಯೆಗೆ ಕೊಂಡೊಯ್ಯುವಾಗ ಮೊದಲ ಬಾರಿ ಪೂಜಿಸಿದ ಸ್ಥಳವಾದ ಕಾರ್ಕಳ ಬಜಗೋಳಿ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ಜ.22ರಂದು ರಾಮೋತ್ಸವ ಕಾರ್ಯಕ್ರಮ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಫೆಡರೇಶನ್ ಆಫ್ ಕರ್ನಾಟಕ ಕ್ವಾರಿ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ಡಾ.ರವೀಂದ್ರ ಶೆಟ್ಟಿ ಬಜಗೋಳಿ ಹೇಳಿದರು.

ಅವರು ಶುಕ್ರವಾರ ಪ್ರಕಾಶ್ ಹೋಟೆಲ್ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸುಮಾರು ೫೦೦ ವರ್ಷಗಳ ಕಾಲ ನಡೆದ ಸಾವಿರಾರು ಬಲಿದಾನ ಹಾಗೂ ಹೋರಾಟದ ಫಲವಾಗಿ ಇಂದು ಅಯೋಧ್ಯೆಯಲ್ಲಿ ಭವ್ಯ ಮಂದಿರದ ನಿರ್ಮಾಣವಾಗುತ್ತಿದೆ. ಸೌಹಾರ್ದತೆ, ಜಾತ್ಯತೀತವಾಗಿ ಭವ್ಯ ರಾಮ ಮಂದಿರ ನಿರ್ಮಾಣವಾಗುತ್ತಿರುವುದು ಭಾರತದ ಸೌಹಾರ್ದತೆಗೆ ಹೊಸ ಮೈಲುಗಲ್ಲಾಗಿದೆ ಎಂದರು.ರಾಮೋತ್ಸವ ಕಾರ್ಯಕ್ರಮದಲ್ಲಿ ಪುರೋಹಿತ ಸಂಘ ಕಾರ್ಕಳ ಪ್ರಾಯೋಜಕತ್ವದಲ್ಲಿ ಶ್ರೀರಾಮ ತಾರಕ ಮಂತ್ರ ಯಾಗ, ಬೆಳಗ್ಗೆ ೧೦ಕ್ಕೆ ಅಯೋಧ್ಯಾ ಶ್ರೀರಾಮ ಜನ್ಮಭೂಮಿ ಹೋರಾಟದಲ್ಲಿ ಭಾಗವಹಿಸಿದ ತಾಲೂಕಿನ ಹಿರಿಯರಿಗೆ ಪ್ರಸಾದ ನೀಡಿ ಸನ್ಮಾನ ಕಾರ್ಯಕ್ರಮ, ಸೂರ್ಯಕಿರಣ್ ಚಾರಿಟೇಬಲ್ ಟ್ರಸ್ಟ್‌ನ ಅಧಿಕೃತ ಉದ್ಘಾಟನೆ, ಹಿಂದೂ ಧರ್ಮ ಶಿಕ್ಷಣ ಅಭಿಯಾನಕ್ಕೆ ಚಾಲನೆ ಹಾಗೂ ೧೦೦೮ ರಾಮ ಭಕ್ತರಿಂದ ಹನುಮಾನ್ ಚಾಲೀಸ್ ಪಠಣ ಮತ್ತು ಅಯೋಧ್ಯೆಯ ಶ್ರೀರಾಮ ದೇವರ ಪ್ರಾಣ ಪ್ರತಿಷ್ಠೆಯ ನೇರ ಪ್ರಸಾರದ ವೀಕ್ಷಣೆ ನಡೆಯಲಿದೆ. ಬಳಿಕ ಭಕ್ತಿಗೀತೆ, ಭಜನೆ, ಧಾರ್ಮಿಕ ನೃತ್ಯ ಸಂಗಮ ಹಾಗೂ ಕುಣಿತ ಭಜನೆಯೂ ನಡೆಯಲಿದೆ ಎಂದರು.ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಟ್ರಸ್ಟ್‌ ಅನ್ನು ಕನ್ಯಾನ ಸದಾಶಿವ ಶೆಟ್ಟಿ ಉದ್ಘಾಟಿಸಲಿದ್ದು, ಹಿಂದೂ ಧರ್ಮ ಶಿಕ್ಷಣ ಅಭಿಯಾನಕ್ಕೆ ಉದ್ಯಮಿ ಬಿ.ನಾಗರಾಜ ಶೆಟ್ಟಿ ಚಾಲನೆ ನೀಡಲಿದ್ದಾರೆ. ಸಭಾ ಕಾರ್ಯಕ್ರಮವನ್ನು ಉದ್ಯಮಿ ಗಣೇಶ್ ಕಾಮತ್ ಉದ್ಘಾಟಿಸಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಡಾ. ರವೀಂದ್ರ ಶೆಟ್ಟಿ ಬಜಗೋಳಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಮಕೃಷ್ಣ ಆಚಾರ್, ಸುನೀಲ್ ಕೆ.ಆರ್., ಮಹಾವೀರ್ ಜೈನ್, ಉಮೇಶ್ ರಾವ್, ಸುನೀಲ್ ಕುಮಾರ್ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಹಿಂದೂ ಮುಖಂಡ ಗುರುಪ್ರಸಾದ್ ನಾರವಿ, ಸುರೇಶ್ ಸಾಲ್ಯಾನ್, ರಜತ್ ರಾಮ್ ಮೋಹನ್ ಉಪಸ್ಥಿತರಿದ್ದರು.