ಸಾರಾಂಶ
ಅಯೋಧ್ಯೆ ರಾಮ ಮಂದಿರ ಸಂಪೂರ್ಣವಾಗಲು ಇನ್ನೂ 2 ವರ್ಷ ಬೇಕು. ಧಾರ್ಮಿಕ, ಸಾಂಸ್ಕೃತಿಕ, ಆರ್ಥಿಕ, ಸಾಮಾಜಿಕವಾಗಿ ಎಲ್ಲ ನೆಲೆಯಲ್ಲಿ ಬದಲಾವಣೆ ಕಾಣುತ್ತಿದ್ದೇವೆ ಎಂದು ಪೇಜಾವರ ಶ್ರೀಗಳು ಹೇಳಿದರು.
ಕನ್ನಡಪ್ರಭ ವಾರ್ತೆ ಮಂಗಳೂರುಅಯೋಧ್ಯೆ ಶ್ರೀರಾಮ ದೇವಾಲಯದಲ್ಲಿ 48 ದಿನಗಳ ಮಂಡಲೋತ್ಸವ ಪೂರ್ಣಗೊಳಿಸಿ ಆಗಮಿಸಿದ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರಿಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಅದ್ಧೂರಿ ಸ್ವಾಗತ ಕೋರಲಾಯಿತು.
ಶಾಸಕರಾದ ವೇದವ್ಯಾಸ ಕಾಮತ್, ಯಶಪಾಲ್ ಸುವರ್ಣ, ವಿಶ್ವ ಹಿಂದೂ ಪರಿಷತ್ ರಾಜ್ಯಾಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್ ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಶ್ರೀಗಳನ್ನು ಜಿಲ್ಲೆಗೆ ಬರಮಾಡಿಕೊಂಡರು.ರಾಮ ಸೇವೆ ದೊಡ್ಡ ಸುಯೋಗ: ಈ ವೇಳೆ ಮಾತನಾಡಿದ ಪೇಜಾವರ ಸ್ವಾಮೀಜಿ, ಅಯೋಧ್ಯೆಯಲ್ಲಿ ಶ್ರೀರಾಮನ ಸೇವೆ ಮಾಡುವ ಅವಕಾಶ ದೊರೆತದ್ದು ದೊಡ್ಡ ಸುಯೋಗ. ಕೃಷ್ಣೈಕ್ಯರಾದ ಶ್ರೀ ವಿಶ್ವೇಶ ತೀರ್ಥ ಸ್ವಾಮಿಜಿಯವರು ಈ ಭಾಗ್ಯ ನಮಗೆ ಕರುಣಿಸಿದ್ದಾರೆ. ಶ್ರೀರಾಮನ ನೆಲದಲ್ಲಿ ಮಾಡಿದ ಸೇವೆ ಕೃಷ್ಣನಿಗೆ ಸಮರ್ಪಣೆ ಎಂದು ಹೇಳಿದರು.ಮಂದಿರ ಪೂರ್ಣಕ್ಕೆ 2 ವರ್ಷ ಬೇಕು:ಅಯೋಧ್ಯೆ ರಾಮ ಮಂದಿರ ಸಂಪೂರ್ಣವಾಗಲು ಇನ್ನೂ 2 ವರ್ಷ ಬೇಕು. ಧಾರ್ಮಿಕ, ಸಾಂಸ್ಕೃತಿಕ, ಆರ್ಥಿಕ, ಸಾಮಾಜಿಕವಾಗಿ ಎಲ್ಲ ನೆಲೆಯಲ್ಲಿ ಬದಲಾವಣೆ ಕಾಣುತ್ತಿದ್ದೇವೆ ಎಂದು ಹೇಳಿದ ಪೇಜಾವರ ಶ್ರೀ, ಅಯೋಧ್ಯೆಯಲ್ಲಿ ಇದ್ದಾಗ ದೂರದ ಉತ್ತರ ಪ್ರದೇಶದಲ್ಲಿ ಇದ್ದೇವೆ ಅನಿಸಲಿಲ್ಲ. ರಾಮನ ಸಾನಿಧ್ಯದೊಂದಿಗೆ ರಾಮ ಭಕ್ತರ ಸಾನಿಧ್ಯವಿತ್ತು. ಕರ್ನಾಟಕದಿಂದ, ದಕ್ಷಿಣ ಭಾರತದ ರಾಜ್ಯಗಳಿಂದ ನಿರಂತರವಾಗಿ ಭಕ್ತರು ಬರುತ್ತಿದ್ದರು ಎಂದು ಸ್ಮರಿಸಿದರು.ಶಾಸಕ ಡಿ. ವೇದವ್ಯಾಸ ಕಾಮತ್ ಮಾತನಾಡಿ, ಹಿಂದೂಗಳ ಅತ್ಯಂತ ಪವಿತ್ರ ತೀರ್ಥಕ್ಷೇತ್ರ ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆ ಬಳಿಕ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಜ.30ರಿಂದ ಮಾ.11ವರೆಗೆ ಶ್ರದ್ಧಾಭಕ್ತಿಯಿಂದ ಮಂಡಲ ಪೂಜೆ ನೆರವೇರಿದೆ. ಇದೀಗ ಆ ಪವಿತ್ರ ಕ್ಷೇತ್ರದಿಂದ ಪುಣ್ಯಭೂಮಿ ತುಳುನಾಡಿಗೆ ಆಗಮಿಸಿರುವ ಶ್ರೇಷ್ಠ ಸಂತರನ್ನು ಸ್ವಾಗತಿಸುವ ಸೌಭಾಗ್ಯ ತಮಗೆ ದೊರೆತಿದೆ ಎಂದು ಹೇಳಿದರು.ಕಾರ್ಪೊರೇಟರ್‌ಗಳಾದ ಪೂರ್ಣಿಮಾ, ಮನೋಹರ್ ಕದ್ರಿ, ಪ್ರಮುಖರಾದ ರಮೇಶ್ ಕಂಡೆಟ್ಟು, ವಿಜಯ್ ಕುಮಾರ್ ಶೆಟ್ಟಿ, ನಂದನ್ ಮಲ್ಯ, ರಮೇಶ್ ಹೆಗ್ಡೆ, ಲಲ್ಲೇಶ್ ಕುಮಾರ್, ಪೂರ್ಣಿಮಾ ರಾವ್, ನೀಲೇಶ್ ಕಾಮತ್, ವಿನೋದ್ ಮೆಂಡನ್, ಮೋಹನ್ ಪೂಜಾರಿ, ರಾಜೇಂದ್ರ, ಪ್ರಕಾಶ್, ರಾಹುಲ್, ರಾಮ್ ಪ್ರಸಾದ್, ಪ್ರಶಾಂತ ಮರೋಳಿ, ಸುಧಾಕರ ಪೇಜಾವರ ಮತ್ತಿತರರಿದ್ದರು.