ರಾಮನಗರ: ತೀವ್ರ ಕುತೂಹಲ ಕೆರಳಿಸಿದ್ದ ವಿಧಾನಪರಿಷತ್ ಬೆಂಗಳೂರು ಶಿಕ್ಷಕರ ಕ್ಷೇತ್ರ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಎ.ಪಿ.ರಂಗನಾಥ್ ಮೊದಲ ಬಾರಿಗೆ ಗೆಲುವಿನ ನಗೆ ಬೀರಿದರೆ, ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ 6ನೇ ಬಾರಿ ಮೇಲ್ಮನೆ ಪ್ರವೇಶಿಸುವ ಕನಸು ಭಗ್ನಗೊಂಡಿದೆ
ರಾಮನಗರ: ತೀವ್ರ ಕುತೂಹಲ ಕೆರಳಿಸಿದ್ದ ವಿಧಾನಪರಿಷತ್ ಬೆಂಗಳೂರು ಶಿಕ್ಷಕರ ಕ್ಷೇತ್ರ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಎ.ಪಿ.ರಂಗನಾಥ್ ಮೊದಲ ಬಾರಿಗೆ ಗೆಲುವಿನ ನಗೆ ಬೀರಿದರೆ, ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ 6ನೇ ಬಾರಿ ಮೇಲ್ಮನೆ ಪ್ರವೇಶಿಸುವ ಕನಸು ಭಗ್ನಗೊಂಡಿದೆ.
ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ 2020ರಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್ ಮತ್ತು 2024ರ ಉಪಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಎ.ಪಿ.ರಂಗನಾಥ್ ಸೋಲು ಕಂಡಿದ್ದರು. ಮೂರನೇ ಪ್ರಯತ್ನದಲ್ಲಿ ಗೆಲುವು ಸಾಧಿಸಿರುವ ರಂಗನಾಥ್ ರಾಜಕೀಯ ಪಂಡಿತರ ಲೆಕ್ಕಾಚಾರ ತಲೆಕೆಳಗಾಗುವಂತೆ ಮಾಡಿದ್ದಾರೆ.1 ಉಪಚುನಾವಣೆ ಸೇರಿ 5 ಬಾರಿ ಗೆಲುವು ಕಂಡಿದ್ದ ಪುಟ್ಟಣ್ಣ, ವಿರೋಧಿಗಳಿಗೆ ಕ್ಷೇತ್ರದಲ್ಲಿ ತಮ್ಮ ಪ್ರಾಬಲ್ಯ ಹಾಗೂ ಶಿಕ್ಷಕ ವರ್ಗದೊಂದಿಗೆ ತಮ್ಮ ಬಾಂಧವ್ಯ ಹೇಗಿದೆ ಎಂಬುದನ್ನು ಸಾಬೀತು ಪಡಿಸುತ್ತಾ ಬಂದಿದ್ದರು. ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದ ಪುಟ್ಟಣ್ಣ 6ನೇ ಬಾರಿಗೂ ವಿಧಾನ ಪರಿಷತ್ ಪ್ರವೇಶಿಸುವ ಉಮೇದಿನಲ್ಲಿದ್ದರು. ಆದರೆ, ಎರಡು ಬಾರಿ ಸೋತಿದ್ದ ರಂಗನಾಥ್ ಅವರಿಗೆ ಸಿಂಪತಿ ಕೈ ಹಿಡಿಯಿತು. ಈ ಮೂಲಕ ಶಿಕ್ಷಕ ಮತದಾರರು ಆಡಳಿತರೂಢ ಕಾಂಗ್ರೆಸ್ ಪಕ್ಷಕ್ಕೆ ಪಾಠ ಕಲಿಸಿದ್ದಾರೆ.
ಜೆಡಿಎಸ್ನಿಂದ ಉಚ್ಚಾಟನೆಗೊಂಡಿದ್ದ ಪುಟ್ಟಣ್ಣ ಅವರನ್ನು 2020ರ ಚುನಾವಣೆಯಲ್ಲಿ ಬಿಜೆಪಿ ತನ್ನತ್ತ ಸೆಳೆದುಕೊಂಡು ಅಭ್ಯರ್ಥಿಯಾಗಿ ಘೋಷಿಸಿತ್ತು. ಆ ಚುನಾವಣೆಯಲ್ಲಿ ಪುಟ್ಟಣ್ಣ ಗೆಲುವು ಕೂಡ ಸಾಧಿಸಿದ್ದರು. ಅಂದಿನ ಬಿಜೆಪಿ ಸರ್ಕಾರದ ಶಿಕ್ಷಕ ವಿರೋಧಿ ನೀತಿಗಳಿಂದ ಬೇಸರಗೊಂಡು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಕಾಂಗ್ರೆಸ್ ಸೇರಿದ್ದರು.ಅಲ್ಲದೆ, ರಾಜಾಜಿನಗರ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಹೋದ ಪುಟ್ಟಣ್ಣ ಮತದಾರರಿಂದ ತಿರಸ್ಕೃತಗೊಂಡಿದ್ದರು. 2024ರ ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ ಪುಟ್ಟಣ್ಣ ಅವರಿಗೇ 2026ರ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಮಣೆ ಹಾಕಿತು.
2020ರಲ್ಲಿ ಜೆಡಿಎಸ್ ಹಾಗೂ 2024ರ ಉಪಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಅಖಾಡಕ್ಕಿಳಿದು ಎ.ಪಿ.ರಂಗನಾಥ್ ಪರಾಭವಗೊಂಡಿದ್ದರು. ಎನ್ಡಿಎ ಮೈತ್ರಿಕೂಟ, ಸೋಲಿನ ಸಿಂಪತಿ ಮತ್ತು ಮೈತ್ರಿ ಬಲ 2026ರ ಚುನಾವಣೆಯಲ್ಲಿ ವರ್ಕ್ ಔಟ್ ಆಗುತ್ತದೆ ಎಂಬ ಲೆಕ್ಕಾಚಾರದೊಂದಿಗೆ ಎ.ಪಿ.ರಂಗನಾಥ್ ಅವರನ್ನೇ ಚುನಾವಣಾ ಕಣಕ್ಕಿಳಿಸಿತ್ತು.ಮುಂಬರುವ ಜಿಪಂ- ತಾಪಂ, ಗ್ರಾಪಂ ಹಾಗೂ ವಿಧಾನಸಭಾ ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ - ಬಿಜೆಪಿ ಮೈತ್ರಿಕೂಟಕ್ಕೆ ಈ ಚುನಾವಣೆ ಪ್ರತಿಷ್ಠೆಯಾಗಿತ್ತು. ಜೆಡಿಎಸ್ ವರಿಷ್ಠರು ಮೈತ್ರಿಕೂಟದ ಭಾಗವಾಗಿದ್ದ ಬಿಜೆಪಿಯ ನೆರವಿನೊಂದಿಗೆ ಕ್ಷೇತ್ರವನ್ನು ವಶಪಡಿಸಿಕೊಳ್ಳಲು ಹಾಗೂ ಆಡಳಿತರೂಢ ಕಾಂಗ್ರೆಸ್ ಪಕ್ಷ ಕ್ಷೇತ್ರ ಉಳಿಸಿಕೊಳ್ಳಲು ಪ್ರಯತ್ನ ನಡೆಸಿತ್ತು. ಇದಕ್ಕಾಗಿ ರಾಜಕೀಯ ಪಕ್ಷಗಳು ಪ್ರತಿಷ್ಠೆಯನ್ನು ಪಣಕ್ಕಿರಿಸಿ ಪ್ರಬಲ ಪಟ್ಟುಗಳನ್ನು ಹಾಕಿದ್ದರಿಂದ ನೇರಾನೇರ ಸ್ಪರ್ಧೆ ಏರ್ಪಟ್ಟು ಗಮನ ಸೆಳೆದಿತ್ತು. ಈ ಚುನಾವಣೆಯಲ್ಲಿ ರಂಗನಾಥ್ ಅವರು, ಪುಟ್ಟಣ್ಣನವರ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿದ್ದಾರೆ.
ರಂಗನಾಥ್ ಎದುರು ಮಂಡಿಯೂರಿದ ಪುಟ್ಟಣ್ಣ :ಈ ಕ್ಷೇತ್ರದಲ್ಲಿ ಪುಟ್ಟಣ್ಣ ಜೆಡಿಎಸ್ ಮತ್ತು ಬಿಜೆಪಿಯಿಂದಲೇ ಗೆಲುವು ಸಾಧಿಸುತ್ತಾ ಬಂದಿದ್ದವರು. ಉಪಚುನಾವಣೆಯಲ್ಲಿ ಮಾತ್ರ ಕಾಂಗ್ರೆಸ್ನಿಂದ ಕಡಿಮೆ ಮತಗಳ ಅಂತರದಿಂದ ಗೆದ್ದಿದ್ದರು. ರಾಜಕೀಯ ಪಕ್ಷಕ್ಕಿಂತ ವೈಯಕ್ತಿಕ ವರ್ಚಸ್ಸು ಗೆಲುವಿಗೆ ಕಾರಣವೆಂದು ಭಾವಿಸಿದ್ದ ಪುಟ್ಟಣ್ಣ ಅತಿಯಾದ ಆತ್ಮವಿಶ್ವಾಸ ಹೊಂದಿದ್ದರು. ಆದರೆ, ಈ ಬಾರಿ ಮತದಾರ ಶಿಕ್ಷಕರು ಬದಲಾವಣೆ ಬಯಸಿರುವುದರಿಂದ ತಮ್ಮ ಗೆಲುವು ಸುಲಭವೆಂದು ಎನ್ಡಿಎ ಅಭ್ಯರ್ಥಿ ರಂಗನಾಥ್ ಭಾವಿಸಿದ್ದರು. ವೈಯಕ್ತಿಕ ಬಲಕ್ಕಿಂತಲೂ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ, ವಿಪಕ್ಷ ನಾಯಕ ಅಶೋಕ್ ಹಾಗೂ ಇತರೆ ನಾಯಕರ ವರ್ಚಸ್ಸನ್ನು ನಂಬಿಕೊಂಡಿದ್ದರು.
ಈ ಹಿಂದೆ ಬಿಜೆಪಿ ಅಥವಾ ಕಾಂಗ್ರೆಸ್ ಪಕ್ಷ ಆಡಳಿತದಲ್ಲಿದ್ದರೂ ಪುಟ್ಟಣ್ಣ ಜೆಡಿಎಸ್ ನಿಂದ ಮೂರು ಬಾರಿ, ಬಿಜೆಪಿ ಅಧಿಕಾರದಲ್ಲಿದ್ದಾಗ ಒಂದು, ಕಾಂಗ್ರೆಸ್ ಅಧಿಕಾರದಲ್ಲಿ ಉಪಚುನಾವಣೆಯಲ್ಲಿ ಒಂದು ಬಾರಿ ಗೆಲುವು ಸಾಧಿಸಿದ್ದರು. ಮೈತ್ರಿ ಅಭ್ಯರ್ಥಿ ರಂಗನಾಥ್ ಅವರಿಗೆ ರಾಜಕೀಯ ಪಾಠ ಕಲಿಸುವ ಹಂಬಲದಲ್ಲಿದ್ದ ಕೈ ಹುರಿಯಾಳು ಪುಟ್ಟಣ್ಣ ಅವರೇ ಸೋತು ಮಂಡಿಯೂರಿದ್ದಾರೆ.ಕೋಟ್ ..............
ಬೆಂಗಳೂರು ಶಿಕ್ಷಕರ ಕ್ಷೇತ್ರದ ಎನ್ ಡಿಎ ಅಭ್ಯರ್ಥಿಯಾದ ನನಗೆ ಐತಿಹಾಸಿಕ ಗೆಲುವು ತಂದುಕೊಟ್ಟ ಪ್ರಜ್ಞಾವಂತ ಶಿಕ್ಷಕರು ಹಾಗೂ ಹಗಲಿರುಳು ಶ್ರಮಿಸಿದ ಎನ್ ಡಿಎ ನಾಯಕರು ಮತ್ತು ಕಾರ್ಯಕರ್ತರಿಗೆ ಧನ್ಯವಾದಗಳು.ನನ್ನನ್ನು ಚುನಾಯಿಸಿದ್ದಕ್ಕೆ ಧನ್ಯವಾದವನ್ನಷ್ಟೇ ಹೇಳುವುದಿಲ್ಲ. ನಿಮ್ಮ ಈ ಆಯ್ಕೆ ಎಷ್ಟು ಸೂಕ್ತ ಎಂಬುದನ್ನು ಸಾಧಿಸಿ ತೋರಿಸುತ್ತೇನೆ. ಪ್ರಜ್ಞಾವಂತ ಶಿಕ್ಷಕರ ನಂಬಿಕೆ ಉಳಿಸಿಕೊಳ್ಳುತ್ತೇನೆ.
- ಎ.ಪಿ.ರಂಗನಾಥ್, ವಿಧಾನ ಪರಿಷತ್ ನೂತನ ಸದಸ್ಯರುಬಾಕ್ಸ್ ...............
ಸಿಎಂ ಡಿಕೆಶಿಗೆ ಮುಖಭಂಗ:ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತವರು ಜಿಲ್ಲೆಯವರೇ ಆದ ಪುಟ್ಟಣ್ಣ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದರು. ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಎ.ಪಿ.ರಂಗನಾಥ್ ಅವರನ್ನು ಗೆಲ್ಲಿಸಿಕೊಳ್ಳುವುದು ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಸವಾಲಾಗಿತ್ತು. ಡಿ.ಕೆ.ಶಿವಕುಮಾರ್ ಮತ್ತು ಕುಮಾರಸ್ವಾಮಿ ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ಕೂಡ ನಡೆಸಿದ್ದರು. ಆದರೆ, ಪ್ರಜ್ಞಾವಂತ ಮತದಾರರಾದ ಶಿಕ್ಷಕರು ಪುಟ್ಟಣ್ಣ ಅವರನ್ನು ತಿರಸ್ಕರಿಸುವ ಮೂಲಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತೀವ್ರ ಮುಖಭಂಗ ಅನುಭವಿಸುವಂತೆ ಮಾಡಿದ್ದಾರೆ.
ಬಾಕ್ಸ್ .............ಸುಶಿಕ್ಷಿತರ 1857 ಮತಗಳೇ ರಿಜೆಕ್ಟ್ :
ಸುಶಿಕ್ಷಿತ ಮತದಾರರು ಎನಿಸಿಕೊಂಡ ಶಿಕ್ಷಕರೇ ಚಲಾಯಿಸಿರುವ 1857 ಮತಗಳು ತಿರಸ್ಕೃತಗೊಂಡಿವೆ.ಚುನಾವಣೆಯಲ್ಲಿ ಒಟ್ಟು 27,405 ಮತದಾರರ ಪೈಕಿ 22,468 ಮತಗಳು ಚಲಾವಣೆಯಾಗಿದ್ದವು. ಇದರಲ್ಲಿ 20,616 ಮತಗಳು ಕ್ರಮದಬ್ಧವಾಗಿದ್ದರೆ, 1857 ಮತಗಳು ಕುಲಗೆಟ್ಟಿವೆ.
ಬಾಕ್ಸ್ .............ಯಾವ ಅಭ್ಯರ್ಥಿಗೆ ಎಷ್ಟು ಮತ? :
ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ - 9,902 , ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿ ಎ.ಪಿ.ರಂಗನಾಥ್ - 10,810, ಪಕ್ಷೇತರರಾದ ಡಾ.ಜಿ.ಆರ್.ಹೆಬ್ಬೂರ್ - 94 , ಉಮೇಶ್ ಬಾಬು ಪಿಳ್ಳೇಗೌಡ - 215, ಬಿ.ಎಸ್.ನಾಗರಾಜು -11 , ಡಾ.ಎನ್.ಲಕ್ಷ್ಮಣ್ ಸ್ವಾಮಿ - 24 ಮತ ಪಡೆದಿದ್ದಾರೆ.ಬಾಕ್ಸ್ ..........
2026 ರ ಚುನಾವಣೆ ನೋಟಗೆದ್ದವರು: ಎ.ಪಿ.ರಂಗನಾಥ್ (ಜೆಡಿಎಸ್ - ಬಿಜೆಪಿ)
ಪಡೆದ ಮತ - 10,810ಸಮೀಪದ ಪ್ರತಿಸ್ಪರ್ಧಿ :
ಪುಟ್ಟಣ್ಣ (ಕಾಂಗ್ರೆಸ್)ಪಡೆದ ಮತ: 9,902
ಅಂತರ - 908 ಮತಬಾಕ್ಸ್ ..............
ರಂಗನಾಥ್ ಗೆಲುವಿಗೆ ಕಾರಣವೇನು ? :*ಶಿಕ್ಷಕರ ಸಮಸ್ಯೆಗಳಿಗೆ ಸರ್ಕಾರದ ಜತೆ ಸೇತುವೆಯಾಗಿ ಕೆಲಸ ಮಾಡುತ್ತಾರೆಂಬ ಆಶಾಭಾವನೆ
*ಶಿಕ್ಷಕರೊಂದಿಗೆ ವೈಯಕ್ತಿಕ ಸಂಪರ್ಕದ ಜತೆಗೆ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿಗಳ ಬೆಂಬಲ.* ಜೆಡಿಎಸ್ - ಬಿಜೆಪಿ ಮೈತ್ರಿಕೂಟದ ಬಲ ಹಾಗೂ 2 ಬಾರಿಯ ಸೋಲಿನ ಸಿಂಪತಿ ಮತಗಳಾಗಿ ಪರಿವರ್ತನೆ
*ಚುನಾವಣೆ ಘೋಷಣೆಗೂ ಮುನ್ನವೇ ಕ್ಷೇತ್ರದಾದ್ಯಂತ ಬಿಡುವಿಲ್ಲದೆ ಪ್ರಚಾರ*ಜೆಡಿಎಸ್ ಮತ್ತು ಬಿಜೆಪಿ ಮುಖಂಡರು, ಕಾರ್ಯಕರ್ತರು ಮತದಾನದ ಕೊನೆ ಘಳಿಗೆವರೆಗೂ ಹೋರಾಟ ನಡೆಸಿದ್ದು.
ಬಾಕ್ಸ್ ............ಪುಟ್ಟಣ್ಣ ಸೋಲಿಗೆ ಕಾರಣವೇನು? :
*5 ಬಾರಿ ಗೆಲುವು ಸಾಧಿಸಿದ್ದ ಪುಟ್ಟಣ್ಣ ಅವರಿಗೆ 6ನೇ ಬಾರಿಯೂ ಗೆದ್ದೆ ಗೆಲ್ಲುತ್ತೇನೆಂಬ ಅತಿಯಾದ ಆತ್ಮವಿಶ್ವಾಸವೇ ಮುಳುವಾಯಿತು.* ಅತಿ ಹೆಚ್ಚು ಮತಗಳನ್ನು ಹೊಂದಿರುವ ಬೆಂಗಳೂರು ನಗರ ಪ್ರದೇಶದ ಶಿಕ್ಷಕ ಮತದಾರರು ತಿರಸ್ಕಾರ ಮಾಡಿರುವುದು.
* ಸಚಿವರು, ಶಾಸಕರು ಹಾಗೂ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಿಂದ ನಿರೀಕ್ಷೆಯಂತೆ ಬೆಂಬಲ ಸಿಗಲಿಲ್ಲ. ಅಲ್ಲದೆ, ಪಕ್ಷಕ್ಕಿಂತ ವೈಯಕ್ತಿಕ ವರ್ಚಸ್ಸನ್ನು ಹೆಚ್ಚಾಗಿ ನಂಬಿದ್ದು.*ಶಿಕ್ಷಕರನ್ನು ಸೆಳೆಯುವ ಎನ್ ಡಿಎ ಮೈತ್ರಿಕೂಟದ ತಂತ್ರಕ್ಕೆ ಪ್ರತಿತಂತ್ರ ಹೆಣೆಯುವಲ್ಲಿ ಎಡವಿದ್ದು.
*ಶಿಕ್ಷಕರ ಪರ ನಡೆಸಿದ ಹೋರಾಟ, ಕಾಂಗ್ರೆಸ್ ಪಕ್ಷದ ಅಧಿಕಾರದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಮನವರಿಕೆ ಮಾಡಿಕೊಡುವಲ್ಲಿ ವಿಫಲರಾದರು.27 ಕೆಆರ್ ಎಂಎನ್ 3,4.ಜೆಪಿಜಿ
3.ಎ.ಪಿ.ರಂಗನಾಥ್4.ವಿಧಾನ ಪರಿಷತ್ ನ ಬೆಂಗಳೂರು ಶಿಕ್ಷಕರ ಕ್ಷೇತ್ರ ಚುನಾವಣೆಯಲ್ಲಿ ಜೆಡಿಎಸ್ - ಬಿಜೆಪಿ ಅಭ್ಯರ್ಥಿ ಎ.ಪಿ.ರಂಗನಾಥ್ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.