ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ರಂಗಶಿಬಿರ ಪೂರಕ: ತಲ್ಲೂರು

| Published : May 05 2024, 02:05 AM IST

ಸಾರಾಂಶ

ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ೧೫ ದಿನಗಳ ಮಕ್ಕಳ ರಂಗಶಿಬಿರ ‘ತಂದಾನಿ.. ತಾನ..’ದ ಸಮಾರೋಪ ಸಮಾರಂಭ ನಡೆಯಿತು. ಶಿಬಿರದಲ್ಲಿ ೨೦ ಮಕ್ಕಳು ಭಾಗವಹಿಸಿದ್ದು, ಅವರಿಂದ ‘ಡಿಂಪಿ” ನಾಟಕ ಪ್ರದರ್ಶನಗೊಂಡಿತು.

ಕನ್ನಡಪ್ರಭ ವಾರ್ತೆ ಉಡುಪಿ

ರಂಗಶಿಬಿರಗಳಲ್ಲಿ ತೊಡಗಿಸಿಕೊಂಡಾಗ ಮಕ್ಕಳ ಸರ್ವತೋಮುಖ ಬೆಳವಣಿಗೆಯಾಗುತ್ತದೆ. ಇಂತಹ ಶಿಬಿರಗಳು ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಂತರನ್ನಾಗಿಸುತ್ತದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದರು.

ಅವರು ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ೧೫ ದಿನಗಳ ಮಕ್ಕಳ ರಂಗಶಿಬಿರ ‘ತಂದಾನಿ.. ತಾನ..’ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ರಂಗಶಿಬಿರವು ಭವಿಷ್ಯದ ಬದುಕನ್ನು ರೂಪಿಸಲು ನೆರವಾಗುತ್ತದೆ. ನಟನೆ, ಹಿನ್ನೆಲೆ ಗಾಯನ ಸೇರಿದಂತೆ ವಿವಿಧ ಚಟುವಟಿಕೆಗಳು ಹಮ್ಮಿಕೊಂಡಾಗ ಅದರಲ್ಲಿ ಭಾಗವಹಿಸುವ ಮಕ್ಕಳಲ್ಲಿ ಯಾವ ವಿಭಾಗದಲ್ಲಿ ಪ್ರತಿಭೆ ಇದೆ ಎಂಬುದು ಗೊತ್ತಾಗುತ್ತದೆ. ಆ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದಾಗ ಮುಂದೆ ಉತ್ತಮ ಕಲಾವಿದರಾಗಿ ಹೊರಹೊಮ್ಮಲಿದ್ದಾರೆ. ಎಲ್ಲ ಮಕ್ಕಳಲ್ಲಿ ಒಂದಲ್ಲ ಒಂದು ಪ್ರತಿಭೆ ಇರುತ್ತದೆ. ಇಂಥ ರಂಗಶಿಬಿರಗಳನ್ನು ಅವುಗಳಿಗೆ ವೇದಿಕೆಯಾಗುತ್ತದೆ ಎಂದು ಹೇಳಿದರು.

ಕೂಡಿ ಬಾಳುವ, ಒಗ್ಗಟ್ಟಿನಿಂದ ಸಾಗುವ ಪಾಠವನ್ನು ಇಂಥ ಶಿಬಿರಗಳು ಹೇಳಿಕೊಡುತ್ತವೆ. ಈ ಮಕ್ಕಳು ಮುಂದೆ ಆಯಾ ಕಾಲದ ಸನ್ನಿವೇಶ, ನಿರ್ಧಾರ ಮತ್ತು ಅವಕಾಶಗಳಿಗೆ ಅನುಗುಣವಾಗಿ ಬೇರೆ ಬೇರೆ ಕ್ಷೇತ್ರಗಳಿಗೆ ಹೋಗಬಹುದು. ರಂಗ ಶಿಬಿರದಲ್ಲಿ ಬಿತ್ತಿದ ಬೀಜದ ಫಲವಾಗಿ ಅವರು ಎಲ್ಲೇ ಹೋದರೂ ಉತ್ತಮ ಮನುಷ್ಯರಾಗಿ ಇರುತ್ತಾರೆ ಎಂದು ವಿಶ್ಲೇಷಿಸಿದರು.

ಮನೀಷ್ ಪಿಂಟೋ ನಿರ್ದೇಶನದಲ್ಲಿ ನಡೆದ ಈ ಶಿಬಿರದಲ್ಲಿ ರಂಗಕರ್ಮಿಗಳಾದ ವಿದ್ದು ಉಚ್ಚಿಲ್, ದಿವಾಕರ ಕಟೀಲ್, ಮೇಘನಾ ಕುಂದಾಪುರ, ರಾಘವ್ ಸೂರಿ, ಅಕ್ಷತ್ ಅಮೀನ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ರಾಧಿಕಾ ದಿವಾಕರ್ ಶಿಬಿರ ಸಂಘಟಿಸಿದರು. ಸುಮನಸಾ ಕೊಡವೂರು ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ಕೊಡವೂರು ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಂಚಾಲಕ ಭಾಸ್ಕರ ಪಾಲನ್, ವಿದ್ದು ಉಚ್ಚಿಲ್, ಮನೀಷ್ ಪಿಂಟೋ ಉಪಸ್ಥಿತರಿದ್ದರು. ಯೋಗೀಶ್ ಕೊಳಲಗಿರಿ ಕಾರ್ಯಕ್ರಮ ನಿರೂಪಿಸಿದರು. ಶಿಬಿರದಲ್ಲಿ ೨೦ ಮಕ್ಕಳು ಭಾಗವಹಿಸಿದ್ದು, ಅವರಿಂದ ‘ಡಿಂಪಿ’ ನಾಟಕ ಪ್ರದರ್ಶನಗೊಂಡಿತು.