14 ರಿಂದ 19 ರವರೆಗೆ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ

| Published : Jan 08 2025, 12:17 AM IST

ಸಾರಾಂಶ

2025ರ ಬುಹುರೂಪಿ ನಾಟಕೋತ್ಸವವನ್ನು ಬಿಡುಗಡೆ ಎಂಬ ಆಶಯದಡಿ ಸಂಘಟಿಸಲಾಗಿದ್ದು, ನಾಟಕಗಳು ಕೂಡ ವಿಮೋಚನೆ, ಸಾಮಾಜಿಕ ನ್ಯಾಯವನ್ನೇ ಪ್ರತಿಪಾದಿಸಲಿವೆ.

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ರಂಗಾಯಣ ಆವರಣದಲ್ಲಿ ಬಿಡುಗಡೆ- ಸಾಮಾಜಿಕ ನ್ಯಾಯ, ಚಳವಳಿಗಳು ಮತ್ತು ರಂಗಭೂಮಿ ಎಂಬ ಆಶಯದಡಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವನ್ನು ಜ.14 ರಿಂದ 19 ರವರೆಗೆ ಆಯೋಜಿಸಲಾಗಿದೆ ಎಂದು ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು ತಿಳಿಸಿದರು.

ರಂಗಾಯಣದ ಬಿ.ವಿ. ಕಾರಂತ ರಂಗಚಾವಡಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಕ್ರಾಂತಿ ದಿನದಿಂದ ಆರಂಭವಾಗುವ ಬಹುರೂಪಿ ನಾಟಕೋತ್ಸವ 6 ದಿನಗಳ ಕಾಲ ರಂಗಾಸಕ್ತರನ್ನು ಮನರಂಜಿಸಲಿದ್ದು, ಬಹುಭಾಷಾ ನಾಟಕೋತ್ಸವ, ವಿಚಾರ ಸಂಕಿರಣ, ಚಲನಚಿತ್ರೋತ್ಸವ, ಪುಸ್ತಕ ಮೇಳ, ಕರಕುಶಲ ಮೇಳ ಮತ್ತು ಪ್ರಾತ್ಯಕ್ಷಿಕೆ, ದೇಸಿ ಆಹಾರ ಮೇಳ, ಚಿತ್ರಕಲಾ ಪ್ರದರ್ಶನ ಹಾಗೂ ಮಕ್ಕಳ ನಾಟಕೋತ್ಸವವು ಇರಲಿದೆ ಎಂದು ಹೇಳಿದರು.

2025ರ ಬುಹುರೂಪಿ ನಾಟಕೋತ್ಸವವನ್ನು ಬಿಡುಗಡೆ ಎಂಬ ಆಶಯದಡಿ ಸಂಘಟಿಸಲಾಗಿದ್ದು, ನಾಟಕಗಳು ಕೂಡ ವಿಮೋಚನೆ, ಸಾಮಾಜಿಕ ನ್ಯಾಯವನ್ನೇ ಪ್ರತಿಪಾದಿಸಲಿವೆ. ಇದೇ ಮೊದಲ ಬಾರಿಗೆ ಮಕ್ಕಳ ರಂಗಭೂಮಿಯನ್ನು ಉತ್ತೇಜಿಸುವ ಉದ್ದೇಶದಿಂದ ಮಕ್ಕಳ ನಾಟಕೋತ್ಸವವನ್ನು ನಡೆಸಲಾಗುತ್ತಿದೆ. ನಾಟಕೋತ್ಸವಕ್ಕೆ 25 ಲಕ್ಷ ರೂ. ಅನುದಾನವಿದ್ದು, ಟಿಕೆಟ್, ಮಳಿಗೆಗಳು ಸೇರಿದಂತೆ ವಿವಿಧ ಮೂಲಗಳಿಂದ ಹಣ ಸಂಗ್ರಹಿಸಲಾಗುತ್ತಿದೆ. ಹೆಚ್ಚುವರಿ ಖರ್ಚಿನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಅನುದಾನ ಪಡೆಯಲಾಗುವುದು ಎಂದರು.

ಜ.13ರ ಸಂಜೆ 5.30ಕ್ಕೆ ಕಿಂದರಿ ಜೋಗಿ ಆವರಣದಲ್ಲಿ ಜನಪದ ಸಂಭ್ರಮಕ್ಕೆ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಚಾಲನೆ ನೀಡುವರು. ಜಾನಪದ ಕಲಾವಿದೆ ಸವಿತಾ ಚೀರುಕುನ್ನಯ್ಯ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು ಎಂದು ಅವರು ಹೇಳಿದರು.

ಚಲನಚತ್ರೋತ್ಸವಕ್ಕೆ ಜ.14ರ ಬೆಳಗ್ಗೆ 11ಕ್ಕೆ ನಟಿ ಭಾವನಾ ರಾಮಣ್ಣ ಶ್ರೀರಂಗ ವೇದಿಕೆಯಲ್ಲಿ ಚಾಲನೆ ನೀಡುವರು. ಬಹುರೂಪಿ ನಾಟಕೋತ್ಸವವನ್ನು ಜ.14ರ ಸಂಜೆ 5.30ಕ್ಕೆ ವನರಂಗದಲ್ಲಿ ನಟ, ರಂಗಕರ್ಮಿ ಅತುಲ್ ಕುಲಕರ್ಣಿ ಉದ್ಘಾಟಿಸುವರು. ಜ.16ರ ಸಂಜೆ 6ಕ್ಕೆ ಕಲಾಮಂದಿರದಲ್ಲಿ ನಡೆಯುವ ಮಕ್ಕಳ ನಾಟಕೋತ್ಸವವನ್ನು ಬಹುಭಾಷಾ ನಟ ಪ್ರಕಾಶ್ ರಾಜ್ ಉದ್ಘಾಟಿಸುವರು ಎಂದು ಅವರು ವಿವರಿಸಿದರು.

ವಿಚಾರ ಸಂಕಿರಣ

ಜ.18 ಮತ್ತು 19 ರಂದು ಬಿ.ವಿ. ಕಾರಂತ ರಂಗಚಾವಡಿಯಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಗಿದೆ. ಜ.18ರ ಬೆಳಗ್ಗೆ 10ಕ್ಕೆ ಲೇಖಕಿ ಎ. ರೇವತಿ ಉದ್ಘಾಟಿಸುವರು. ಹಿರಿಯ ಕವಿ ಎಸ್.ಜಿ. ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸುವರು. ಮೊದಲ ದಿನ ಸಂವಿಧಾನ ಮತ್ತು ಸಾಮಾಜಿಕ ನ್ಯಾಯ, ಲೈಂಗಿಕ ಅಲ್ಪಸಂಖ್ಯಾತರ ಅಸ್ಮಿತೆ, ಬಹುಜನ ಸಂಸ್ಕೃತಿಯ ಬಹುತ್ವದ ನೆಲೆಗಳು, ಮಹಿಳಾ ಹೋರಾಟಗಳು ವಿಚಾರದ ಕುರಿತು ಆಹ್ವಾನಿತರು ಮಾತನಾಡಲಿದ್ದಾರೆ. ಜ.19 ರಂದು ಬಿಡುಗಡೆಯ ಹಾದಿಯಲ್ಲಿ ಜನ ಚಳವಳಿ, ಆದಿವಾಸಿ ಅಲೆಮಾರಿ ಸಮುದಾಯಗಳ ಬಿಡುಗಡೆಯ ದಾರಿಗಳು, ರಂಗಭೂಮಿ: ಯುವ ಚಿಂತನೆ ಕುರಿತು ಗಣ್ಯರು ವಿಚಾರ ಮಂಡಿಸಲಿದ್ದಾರೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ, ರಂಗ ಸಮಾಜದ ಸದಸ್ಯ ಸುರೇಶ್ ಬಾಬು ಇದ್ದರು.