ಸಾರಾಂಶ
ಇತ್ತೀಚಿನ ದಿನಗಳಲ್ಲಿ ತಾಲೂಕಿನ ರೈತರು ಅನ್ಯ ಬೆಳೆಗಳನ್ನು ಕೈಬಿಟ್ಟು ಅಡಕೆ ಬೆಳೆಯತ್ತ ಆಕರ್ಷಿತರಾಗುತ್ತಿದ್ದು, ವರ್ಷದಿಂದ ವರ್ಷಕ್ಕೆ ಅಡಕೆ ಬೆಳೆಗಾರರ ಸಂಖ್ಯೆ ಹೆಚ್ಚಳವಾಗುತ್ತಿದೆ. ತಾಲೂಕನ್ನು ಮಲೆನಾಡು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿಸಬೇಕು ಎನ್ನುವ ಕೂಗು ಈಗ ಬಲವಾಗಿದೆ.
ಬಸವರಾಜ ಸರೂರ
ಕನ್ನಡಪ್ರಭ ವಾರ್ತೆ ರಾಣಿಬೆನ್ನೂರುಇತ್ತೀಚಿನ ದಿನಗಳಲ್ಲಿ ತಾಲೂಕಿನ ರೈತರು ಅನ್ಯ ಬೆಳೆಗಳನ್ನು ಕೈಬಿಟ್ಟು ಅಡಕೆ ಬೆಳೆಯತ್ತ ಆಕರ್ಷಿತರಾಗುತ್ತಿದ್ದು, ವರ್ಷದಿಂದ ವರ್ಷಕ್ಕೆ ಅಡಕೆ ಬೆಳೆಗಾರರ ಸಂಖ್ಯೆ ಹೆಚ್ಚಳವಾಗುತ್ತಿದೆ. ತಾಲೂಕನ್ನು ಮಲೆನಾಡು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿಸಬೇಕು ಎನ್ನುವ ಕೂಗು ಈಗ ಬಲವಾಗಿದೆ.
ಜಿಲ್ಲೆಯಲ್ಲಿ ಹಿರೇಕೆರೂರು, ಶಿಗ್ಗಾಂವಿ, ಸವಣೂರು, ಬ್ಯಾಡಗಿ ಹಾಗೂ ಹಾನಗಲ್ಲ ಕ್ಷೇತ್ರಗಳನ್ನು ಪ್ರಾಧಿಕಾರಕ್ಕೆ ಸೇರಿಸಲಾಗಿದೆ. ಆದರೆ ರಾಣಿಬೆನ್ನೂರು ಹಾಗೂ ಹಾವೇರಿ ತಾಲೂಕು ಮಾತ್ರ ಇನ್ನು ಬಯಲುಸೀಮೆ ಪ್ರಾಧಿಕಾರಕ್ಕೆ ಸೇರಿದ್ದು, ರೈತರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಬೇಕಾಗಿದೆ.ಅಡಕೆ ಬೆಳೆಯುವ ಕ್ಷೇತ್ರ:
ತೋಟಗಾರಿಕೆ ಇಲಾಖೆಯ ಬೆಳೆಸಮೀಕ್ಷೆಯ ಅನುಸಾರ ತಾಲೂಕಿನಲ್ಲಿ 2020-21 ಸಾಲಿನಲ್ಲಿ ಒಟ್ಟು 1,701 ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆಯುವ ಪ್ರದೇಶವಿತ್ತು. ಅದು ಪ್ರಸಕ್ತ ವರ್ಷ 2,700 ಹೆಕ್ಟೇರ್ ಪ್ರದೇಶಕ್ಕೆ ಏರಿಕೆಯಾಗಿದೆ. ಸುಮಾರು 7 ರಿಂದ 8 ಸಾವಿರ ಎಕರೆ ಪ್ರದೇಶದಲ್ಲಿ ಅಡಕೆ ಬೆಳೆಯಲಾಗುತ್ತಿದೆ. ಇದು ಪ್ರಸಕ್ತ ವರ್ಷ ಅಡಕೆ ಬೆಳೆಯ ಕ್ಷೇತ್ರ ಹೆಚ್ಚಳವಾಗಿದೆ ಎನ್ನುತ್ತಾರೆ ತೋಟಗಾರಿಕೆ ಅಧಿಕಾರಿಗಳು.ಪ್ರಾಧಿಕಾರಕ್ಕೆ ಸೇರಿದರೆ ದೊರಕುವ ಲಾಭ:
ರಾಣಿಬೆನ್ನೂರು ತಾಲೂಕನ್ನು ಮಲೆನಾಡು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿಸಿದರೆ ಸರ್ಕಾರದಿಂದ ಹೆಚ್ಚಿನ ಅನುದಾನ ಲಭಿಸುವುದಲ್ಲದೆ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ. ಬ್ಯಾಡಗಿ ತಾಲೂಕು ಮಲೆನಾಡು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ್ದು ಎನ್‌ಆರ್‌ಜಿ ಯೋಜನೆಯಲ್ಲಿ ಅಡಕೆ ಬೆಳೆಯಲು ಅನುದಾನ ನೀಡಲಾಗುತ್ತಿದೆ. ಆದರೆ ರಾಣಿಬೆನ್ನೂರ ತಾಲೂಕಿನಲ್ಲಿ ಅಡಕೆಯ ಜತೆಗೆ ಬಾಳೆ, ಪಪ್ಪಾಯಿ, ನುಗ್ಗೆ ಸೇರಿದಂತೆ ಇತರ ಬೆಳೆಗಳನ್ನು ಮಿಶ್ರಬೆಳೆಯಾಗಿ ಬೆಳೆಯಬೇಕು ಎಂಬ ನಿಯಮವಿದೆ. ಇಂತಹ ಅನೇಕ ಸೌಲಭ್ಯಗಳನ್ನು ಈ ಭಾಗದ ರೈತರು ಕಳೆದುಕೊಳ್ಳುತ್ತಿದ್ದು, ಹಾವೇರಿ ಹಾಗೂ ರಾಣಿಬೆನ್ನೂರ ತಾಲೂಕು ಕೇಂದ್ರಗಳನ್ನು ಮಲೆನಾಡು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿಸಿ ಎನ್ನುವ ಅಭಿಪ್ರಾಯ ರೈತರಿಂದ ಕೇಳಿಬಂದಿದೆ.ವಿಧಾನಸಭೆಯಲ್ಲಿ ಪ್ರಸ್ತಾಪ:
ತಾಲೂಕಿನಲ್ಲಿ ಅತಿಹೆಚ್ಚು ಅಡಕೆ ಬೆಳೆಗಾರರಿದ್ದು, ಈ ತಾಲೂಕನ್ನು ಮಲೆನಾಡು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿಸಬೇಕು ಎಂದು ಈ ಹಿಂದೆ ಮಾಜಿ ಶಾಸಕ ಅರುಣಕುಮಾರ ಪೂಜಾರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಪ್ರಸಕ್ತ ವರ್ಷ ಇನ್ನಷ್ಟು ಕ್ಷೇತ್ರ ಹೆಚ್ಚಳವಾಗಿದೆ. ಇತ್ತೀಚೆಗೆ ಬೆಳಗಾವಿ ಅಧಿವೇಶನದಲ್ಲಿ ಸ್ಥಳೀಯ ಶಾಸಕ ಪ್ರಕಾಶ ಕೋಳಿವಾಡ ತಾಲೂಕನ್ನು ಮಲೆನಾಡು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿ ಸದನದಲ್ಲಿ ಗಮನ ಸೆಳೆದಿದ್ದಾರೆ.ರಾಣಿಬೆನ್ನೂರು ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೈತರು ಅಡಕೆ ಬೆಳೆಯನ್ನು ಬೆಳೆಯುತ್ತಿದ್ದಾರೆ. ಹೀಗಾಗಿ ಈ ತಾಲೂಕನ್ನು ಮಲೆನಾಡು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿಸಬೇಕು ಎಂದು ಈಗಾಗಲೇ ನಮ್ಮ ಇಲಾಖೆಯ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ನೂರಅಹ್ಮದ್ ಹಲಗೇರಿ.
ಸುಮಾರು 10 ವರ್ಷಗಳಿಂದ ಅಡಕೆ ಬೆಳೆಯುತ್ತಿದ್ದು, ಈಗ ಬೆಳೆಯ ಕ್ಷೇತ್ರವನ್ನು ಹೆಚ್ಚಳ ಮಾಡಲಾಗಿದೆ. ಮಲೆನಾಡು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರದಿರುವುದರಿಂದ ರೈತರಿಗೆ ಸಮಸ್ಯೆಯಾಗಿದೆ. ಆದ್ದರಿಂದ ನಮ್ಮ ತಾಲೂಕನ್ನು ಅದರಲ್ಲಿ ಸೇರಿಸಬೇಕು ಎನ್ನುತ್ತಾರೆತಾಲೂಕಿನ ಐರಣಿ ಗ್ರಾಮದ ಅಡಕೆ ಬೆಳೆಗಾರ ಚಂದ್ರಪ್ಪ ನಾಗೇನಹಳ್ಳಿ.