ಹಾವೇರಿ ಜಿಲ್ಲೆಯ ಪ್ರಮುಖ ನಗರ ಹಾಗೂ ವಾಣಿಜ್ಯ ಕೇಂದ್ರ ರಾಣಿಬೆನ್ನೂರಿನಲ್ಲಿ ಸಂಚಾರ ದಟ್ಟಣೆ ಜೊತೆಗೆ ಗೂಡಂಗಡಿಗಳು ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿದೆ.
ಬಸವರಾಜ ಸರೂರ
ಕನ್ನಡಪ್ರಭ ವಾರ್ತೆ ರಾಣಿಬೆನ್ನೂರುಹಾವೇರಿ ಜಿಲ್ಲೆಯ ಪ್ರಮುಖ ನಗರ ಹಾಗೂ ವಾಣಿಜ್ಯ ಕೇಂದ್ರ ರಾಣಿಬೆನ್ನೂರಿನಲ್ಲಿ ಸಂಚಾರ ದಟ್ಟಣೆ ಜೊತೆಗೆ ಗೂಡಂಗಡಿಗಳು ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿದೆ.
ನಗರದಲ್ಲಿ ವಾಹನಗಳ ಓಡಾಟ ಹೆಚ್ಚಾಗಿದ್ದು, ಪ್ರಮುಖ ಸರ್ಕಲ್‌ಗಳಲ್ಲಿ ಗೂಡ್ ಶೆಡ್‌ಗಳು ಹಾಗೂ ಬೀದಿ ಬದಿ ವ್ಯಾಪಾರಸ್ಥರು ರಸ್ತೆಯ ಮೇಲೆ ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರು ಮುಕ್ತವಾಗಿ ಸಂಚರಿಸಲು ಕಿರಿಕಿರಿಯಾಗುತ್ತಿದೆ.ಸಿಗ್ನಲ್ ದೀಪಗಳು ಆಫ್: ಕೆಲವು ವರ್ಷಗಳ ಹಿಂದೆ ನಗರದ ಮೂರು ಕಡೆಗಳಲ್ಲಿ ಸಿಗ್ನಲ್ ದೀಪಗಳನ್ನು ಅಳವಡಿಸಲಾಗಿತ್ತು. ಆದರೆ, ಕೋರ್ಟ್ ಬಳಿಯಿರುವ ಸಿಗ್ನಲ್ ಹೊರತುಪಡಿಸಿ ಹಲಗೇರಿ ಕ್ರಾಸ್ ಮತ್ತು ಪೋಸ್ಟ್ ಸರ್ಕಲ್ ಬಳಿಯಿರುವ ಸಿಗ್ನಲ್ ಕೆಲಸ ಸ್ಥಗಿತಗೊಳಿಸಿ ಹಲವಾರು ವರ್ಷಗಳೇ ಗತಿಸಿವೆ. ಸಿಗ್ನಲ್ ದೀಪಗಳು ಕೈಕೊಟ್ಟ ಪರಿಣಾಮ ವಾಹನ ಸವಾರರು ಬೇಕಾಬಿಟ್ಟಿಯಾಗಿ ವಾಹನ ಚಲಾಯಿಸುವಂತಾಗಿದೆ.
ಇಕ್ಕಟ್ಟಾಗಿರುವ ಎಂ.ಜಿ. ರಸ್ತೆ: ನಗರದ ಪ್ರಮುಖ ಮಾರುಕಟ್ಟೆ ಪ್ರದೇಶವಾದ ಎಂ.ಜಿ. ರಸ್ತೆಯಲ್ಲಂತೂ ಸಂಚಾರ ಪರಿಸ್ಥಿತಿ ಆ ದೇವರಿಗೆ ಪ್ರೀತಿ ಎನ್ನುವಂತಿದೆ. ಅದರಲ್ಲಿಯೂ ಪ್ರತಿ ಅಮಾವಾಸ್ಯೆ ಮತ್ತು ಪ್ರಮುಖ ಹಬ್ಬದ ದಿನಗಳಲ್ಲಿ ಜನರು ಯಾಕಾದರೂ ಇಲ್ಲಿಗೆ ಬಂದಿದ್ದೇವಪ್ಪಾ ಎಂದುಕೊಳ್ಳುವಂತಾಗುತ್ತದೆ. ಹೂವು ಮಾರಾಟಗಾರರು ರಸ್ತೆ ಬದಿಯಲ್ಲಿಯೇ ನಿಂತು ವ್ಯಾಪಾರ ಮಾಡುವುದರಿಂದ ಸಂಚಾರಕ್ಕೆ ಸಾಕಷ್ಟು ಅಡೆತಡೆಯಾಗುತ್ತದೆ. ವಾಹನ ಸವಾರರು ಮುಂದಕ್ಕೆ ಸಾಗಲು ಪೇಚಾಡಬೇಕಾಗುತ್ತದೆ. ಸಂಚಾರಿ ಪೊಲೀಸರು ದಟ್ಟಣೆ ನಿಯಂತ್ರಿಸಲು ಹರಸಾಹಸ ಪಡಬೇಕಾಗುತ್ತದೆ. ನಗರದಲ್ಲಿ ಮೆಕ್ಕೆಜೋಳ ಹಾಗೂ ಹತ್ತಿ ವ್ಯಾಪಾರ, ವಹಿವಾಟು ಅಧಿಕವಾಗಿರುವುದರಿಂದ ನಿತ್ಯವೂ ಸಾವಿರಾರು ಲಾರಿ, ಬಸ್ ಸೇರಿ ಇತರ ಗೂಡ್ಸ್ ವಾಹನಗಳು ಬಂದು ಹೋಗುತ್ತವೆ. ಅಲ್ಲದೆ ಬೈಕ್, ಕಾರುಗಳ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.ಹೆಚ್ಚುತ್ತಿರುವ ಅಪಘಾತಗಳು:ಇದರಿಂದಾಗಿ ನಗರದಲ್ಲಿ ನಿತ್ಯವೂ ಹಲಗೇರಿ ವೃತ್ತ, ತಹಸೀಲ್ದಾರ್ ಕಚೇರಿ ವೃತ್ತದ ಬಳಿ ಬಹಳಷ್ಟು ವಾಹನ ಸಂಚಾರಕ್ಕೆ ಅಡೆತಡೆ ಉಂಟಾಗುತ್ತಿದೆ. ಈ ಭಾಗದಲ್ಲಿ ಅಧಿಕವಾಗಿ ಸರ್ಕಾರಿ, ಖಾಸಗಿ ಶಾಲಾ, ಕಾಲೇಜ್‌ಗಳಿರುವ ಕಾರಣ ವಿದ್ಯಾರ್ಥಿಗಳ ಓಡಾಟವೂ ಹೆಚ್ಚಿರುತ್ತದೆ. ಆಗಾಗ ಅಪಘಾತ ಪ್ರಕರಣಗಳು ಅಧಿಕವಾಗತೊಡಗಿವೆ.
ಈ ಭಾಗದಲ್ಲಿ ಟ್ರಾಫಿಕ್ ಸಿಗ್ನಲ್‌ಗಳ ಜೊತೆಗೆ ಟ್ರಾಫಿಕ್ ಪೊಲೀಸರು ಕಾರ್ಯನಿರ್ವಹಿಸಿದರೆ, ವಾಹನಗಳ ದಟ್ಟಣೆ ನಿಯಂತ್ರಣಕ್ಕೆ ಬರುತ್ತದೆ. ಬಂದ್ ಆಗಿರುವ ಸಿಗ್ನಲ್‌ಗಳನ್ನು ದುರಸ್ತಿ ಪಡಿಸಬೇಕು ಎಂದು ಸಂಚಾರ ಠಾಣೆ ಪೊಲೀಸರಿಗೆ ಹಲವಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.ಪಾರ್ಕಿಂಗ್ ವ್ಯವಸ್ಥೆ: ಇಲ್ಲಿಯ ಹಳೇ ಪಿ.ಬಿ. ರಸ್ತೆಯ ಎನ್.ವಿ. ಹೋಟೆಲ್‌ನಿಂದ ಬಸ್ ನಿಲ್ದಾಣದ ವರೆಗೂ ರಸ್ತೆಯ ಅಕ್ಕಪಕ್ಕ ಸರಿಯಾದ ವಾಹನಗಳ ಪಾರ್ಕಿಂಗ್ ಮಾಡಲು ವ್ಯವಸ್ಥಿತವಾಗಿ ಫುಟ್‌ಪಾತ್ ನಿರ್ಮಾಣ ಮಾಡದ ಕಾರಣ ರಸ್ತೆಯ ಮೇಲೆ ಕಾರು ಹಾಗೂ ಬೈಕ್ ನಿಲ್ಲಿಸುವುದು ಸರ್ವೆ ಸಾಮಾನ್ಯವಾಗಿದೆ. ಇದರಿಂದಾಗಿ ಹಳೇ ಪಿ.ಬಿ. ರಸ್ತೆಯ ಅಕ್ಕಪಕ್ಕ ಸಾಕಷ್ಟು ಜಾಗ ಉಳಿದಿದ್ದರೂ ಅಲ್ಲಿ ಸರಿಯಾಗಿ ಚರಂಡಿ ಹಾಗೂ ಪಾರ್ಕಿಂಗ್ ವ್ಯವಸ್ಥೆ ಮಾಡಿದರೆ ಉತ್ತಮ ಪಾರ್ಕಿಂಗ್ ಜೊತೆಗೆ ಸಂಚಾರ ದಟ್ಟಣೆಯನ್ನು ಸುಧಾರಿಸಬಹುದು.
ನಗರದಲ್ಲಿ ವಾಹನ ಸಂಖ್ಯೆ ಹೆಚ್ಚಾಗಿದ್ದು, ಹಲಗೇರಿ ಸರ್ಕಲ್, ಎಂಜಿ ರಸ್ತೆ ಸೇರಿದಂತೆ ವಿವಿಧ ಭಾಗದಲ್ಲಿ ಓಡಾಡುವುದು ಕಷ್ಟವಾಗಿದೆ. ಇನ್ನು ಸಿಗ್ನಲ್‌ಗಳು ಬಂದ್ ಆಗಿರುವುದರಿಂದ ವಾಹನ ಸವಾರರು ಮನಬಂದಂತೆ ವಾಹನಗಳನ್ನು ಓಡಿಸುತ್ತಿದ್ದಾರೆ. ಇದರಿಂದಾಗಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಆದ್ದರಿಂದ ಪೊಲೀಸ್ ಇಲಾಖೆ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಾಣಿಬೆನ್ನೂರು ಗೋ ಗ್ರಿನ್ ಸಂಚಾಲಕ ಡಾ. ಗಿರೀಶ ಕೆಂಚಪ್ಪನವರ ಹೇಳಿದರು.ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಎಂಜಿ ರೋಡ್‌ನಲ್ಲಿ ಬೀದಿ ವ್ಯಾಪಾರಿಗಳಿಗೆ ಪ್ರತ್ಯೇಕ ಜಾಗ ನೀಡುವಂತೆ ನಗರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ವ್ಯಾಪಾರಿಗಳಿಗೆ ಬೇರೆ ಕಡೆಗೆ ಅವಕಾಶ ನೀಡಿದರೆ ಉತ್ತಮವಾದ ಪಾರ್ಕಿಂಗ್ ಮಾಡಬಹುದು. ಒಟ್ಟಾರೆ ನಗರದಲ್ಲಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಪ್ರಯತ್ನಿಸಲಾಗುವುದು. ಪೊಲೀಸ್ ಇಲಾಖೆಯಿಂದ ನಿಗದಿಪಡಿಸಿದ ಜಾಗದಲ್ಲಿಯೆ ವಾಹನ ನಿಲ್ಲಿಸಬೇಕು ಎಂದು ಸಂಚಾರ ಠಾಣೆ ಪಿಎಸ್‌ಐ ಕೃಷ್ಣಪ್ಪ ಹೇಳಿದರು.