ಸಾರಾಂಶ
ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಪ್ರಕರಣ ಸಂಬಂಧ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿ ಜಿಲ್ಲಾ ಪೋಕ್ಸೋ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಪ್ರಕರಣ ಸಂಬಂಧ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿ ಜಿಲ್ಲಾ ಪೋಕ್ಸೋ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ.ರಾಯಬಾಗ ತಾಲೂಕಿನ ಹಾರೂಗೇರಿ ಕುರುಬಗೋಡಿಯ ಉದ್ದಪ್ಪ ರಾಮಪ್ಪ ಗಾಣಗೇರ (32) ಗಲ್ಲು ಶಿಕ್ಷೆಗೆ ಗುರಿಯಾದ ಆರೋಪಿ. 21.9.2017 ರಂದು ಆರೋಪಿಯು 3 ವರ್ಷದ ಬಾಲಕಿ ಆಟವಾಡುತ್ತಿದ್ದಾಗ ಅವಳಿಗೆ ಚಾಕೋಲೇಟ್ ಕೊಡಿಸಿ, ಅಲ್ಲಿಂದ ಕಬ್ಬಿನ ತೋಟಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದ. ಅವಳ ಬಾಯಿ, ಮೂಗು ಮತ್ತು ಕಣ್ಣಲ್ಲಿ ಮಣ್ಣು ಹಾಕಿ ಕೊಲೆ ಮಾಡಿದ್ದ. ಬಳಿಕ ಬಾಲಕಿ ಮೇಲೆ ಮಣ್ಣು ಹಾಕಿ ಪುರಾವೆ ನಾಶಪಡಿಸಲು ಯತ್ನಿಸಿದ್ದ. ಈ ಕುರಿತು ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖಾಧಿಕಾರಿ ಸುರೇಶ ಪಿ.ಶಿಂಗಿ ಅವರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆಗೆ ನಡೆಸಿದ ನ್ಯಾಯಾಧೀಶರಾದ ಸಿ.ಎಂ. ಪುಷ್ಪಲತಾ ಅವರು ಅಪರಾಧಿಗೆ ಗಲ್ಲು ಶಿಕ್ಷೆ ಮತ್ತು ₹45 ಸಾವಿರ ದಂಡ ವಿಧಿಸಿ ತೀರ್ಪು ನೀಡಿ ಆದೇಶ ಹೊರಡಿಸಿದರು. ಒಟ್ಟು 25 ಸಾಕ್ಷಿಗಳ ವಿಚಾರಣೆ ಮೇಲಿಂದ ಹಾಗೂ 52 ದಾಖಲೆಗಳು ಹಾಗೂ 8 ಮುದ್ದೆಮಾಲಿಗಳ ಆಧಾರದ ಮೇಲೆ ಉದ್ದಪ್ಪ ಮೇಲಿನ ಆರೋಪಿಗಳು ಸಾಬೀತಾಗಿವೆ. ಅಲ್ಲದೇ, ನೊಂದ ಬಾಲಕಿಯ ಪಾಲಕರಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ₹3 ಲಕ್ಷ ಪರಿಹಾರ ಧನವನ್ನು ಪಡೆಯಲು ನ್ಯಾಯಾಲಯ ಆದೇಶಿಸಿದೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಲ್.ವಿ.ಪಾಟೀಲ ವಾದ ಮಂಡಿಸಿದರು.