ಸಾರಾಂಶ
ಅತ್ಯಾಚಾರವನ್ನು ಖಂಡಿಸಿ ಎಸ್‌ಎಫ್‌ಐ ಹಾಗೂ ಡಿವೈಎಫ್‌ಐ ಸಂಘಟನೆಗಳ ಮುಖಂಡರು ಬುಧವಾರ ತೋರಣಗಲ್ಲು ಗ್ರಾಮ ಪಂಚಾಯ್ತಿ ಬಳಿ ಪ್ರತಿಭಟನೆ ನಡೆಸಿದರು.
ಸಂಡೂರು: ತಾಲೂಕಿನ ತೋರಣಗಲ್ಲು ರೈಲ್ವೆ ನಿಲ್ದಾಣದ ಸಮೀಪ ಸೋಮವಾರ 5 ವರ್ಷದ ಬಾಲಕಿಯ ಮೇಲೆ ನಡೆದಿರುವ ಅತ್ಯಾಚಾರವನ್ನು ಖಂಡಿಸಿ ಎಸ್‌ಎಫ್‌ಐ ಹಾಗೂ ಡಿವೈಎಫ್‌ಐ ಸಂಘಟನೆಗಳ ಮುಖಂಡರು ಬುಧವಾರ ತೋರಣಗಲ್ಲು ಗ್ರಾಮ ಪಂಚಾಯ್ತಿ ಬಳಿ ಪ್ರತಿಭಟನೆ ನಡೆಸಿದರಲ್ಲದೆ, ಅತ್ಯಾಚಾರಿಯನ್ನು ಕೂಡಲೇ ಬಂಧಿಸಿ, ಅವನಿಗೆ ಉಗ್ರ ಶಿಕ್ಷೆ ನೀಡಲು ಆಗ್ರಹಿಸಿದರು. ಪ್ರತಿಭಟನಾಕಾರರು ತಮ್ಮ ಮನವಿ ಪತ್ರವನ್ನು ಡಿವೈಎಸ್‌ಪಿ ಪ್ರಸಾದ್ ಗೋಖಲೆ, ಉಪ ತಹಸೀಲ್ದಾರ್ ಸುಬ್ಬರಾವ್ ದೇಸಾಯಿ ಅವರಿಗೆ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಸಂಘಟನೆಗಳ ಮುಖಂಡರಾದ ಎಚ್. ಸ್ವಾಮಿ, ಎಸ್. ಕಾಲುಬಾ, ಶಿವಾರೆಡ್ಡಿ, ತೋರಣಗಲ್ಲು ಕೈಗಾರಿಕಾ ಪ್ರದೇಶ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಅತ್ಯಾಚಾರ, ದೌರ್ಜನ್ಯ, ಕೈಗಾರಿಕಾ ಅವಘಡಗಳು, ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ದುಷ್ಕೃತ್ಯ ಎಸಗಿದ ಆಪರಾಧಿಗಳ ಪರ ನಿಂತು, ಇಂತಹ ಘಟನೆಗಳ ದುರ್ಲಾಭ ಪಡೆಯಲು ಸ್ಥಳೀಯ ದುಷ್ಕರ್ಮಿಗಳು ಯತ್ನಿಸುತ್ತಾರೆ. ಇಲ್ಲಿ ನಡೆದಿರುವ ಹಲವು ಘಟನೆಗಳಿಗೆ ನ್ಯಾಯ ದೊರಕಿಲ್ಲ. ಕಾನೂನಾತ್ಮಕ ತನಿಖೆ ನಡೆಯದೆ, ದುಷ್ಕರ್ಮಿಗಳನ್ನು ಶಿಕ್ಷೆಗಳಿಂದ ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಯಾವುದೇ ರಾಜಕಾರಣಿಗಳ, ಪುಡಾರಿಗಳ ಒತ್ತಡಕ್ಕೆ ಮಣಿಯದೆ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ದುಷ್ಕರ್ಮಿಯನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಇಂತಹ ದುಷ್ಕೃತ್ಯಗಳಲ್ಲಿ ಭಾಗಿಯಾಗುವ ವ್ಯಕ್ತಿಗಳನ್ನು ರಕ್ಷಿಸಲು ಮುಂದಾಗುವವರ ವಿರುದ್ಧವೂ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಲೋಕೇಶ್, ಅಕ್ಷಯ್, ಅರ್ಜುನ್, ಯರ‍್ರಿಸ್ವಾಮಿ, ಅಮರ್, ನಂದೀಶ್, ಲೋಕೇಶ್, ಎನ್. ಪಂಪಾಪತಿ, ಯಾಕೂಬ್, ಜಯಸೂರ್ಯ, ಎಂ.ಪಿ. ತಿಮ್ಮಪ್ಪ, ವಿದ್ಯಾರ್ಥಿಗಳಾದ ಪೂಜಾ, ಮಲ್ಲೇಶ್ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.