ಸಾರಾಂಶ
ದಾರಿಯಲ್ಲಿ ಹೋಗುವಾಗ ಡ್ರಾಪ್ ಕೊಡುವ ನೆಪದಲ್ಲಿ ನನ್ನನ್ನು ಯಾರು ಇಲ್ಲದ ಸ್ಥಳಕ್ಕೆ ಬಲವಂತವಾಗಿ ಕರೆದುಕೊಂಡು ಹೋಗಿ ನನ್ನ ಮೇಲೆ ಅತ್ಯಾಚಾರ ಮಾಡಿರುವ ಆರೋಪಿಯನ್ನು ಬಂಧಿಸುವಲ್ಲಿ ಹಳೇಬೀಡು ಠಾಣೆಯ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ ಎಂದು ಬೇಲೂರು ತಾಲೂಕಿನ ಹಳೇಬೀಡು ಪೊಲೀಸ್ ಠಾಣಾ ವ್ಯಾಪ್ತಿಯ ನೊಂದ ಸಂತ್ರಸ್ತೆ ತಮ್ಮ ಅಳಲು ತೋಡಿಕೊಂಡರು.
ಕನ್ನಡಪ್ರಭವಾರ್ತೆ ಹಾಸನ
ದಾರಿಯಲ್ಲಿ ಹೋಗುವಾಗ ಡ್ರಾಪ್ ಕೊಡುವ ನೆಪದಲ್ಲಿ ನನ್ನನ್ನು ಯಾರು ಇಲ್ಲದ ಸ್ಥಳಕ್ಕೆ ಬಲವಂತವಾಗಿ ಕರೆದುಕೊಂಡು ಹೋಗಿ ನನ್ನ ಮೇಲೆ ಅತ್ಯಾಚಾರ ಮಾಡಿರುವ ಆರೋಪಿಯನ್ನು ಬಂಧಿಸುವಲ್ಲಿ ಹಳೇಬೀಡು ಠಾಣೆಯ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ ಎಂದು ಬೇಲೂರು ತಾಲೂಕಿನ ಹಳೇಬೀಡು ಪೊಲೀಸ್ ಠಾಣಾ ವ್ಯಾಪ್ತಿಯ ನೊಂದ ಸಂತ್ರಸ್ತೆ ತಮ್ಮ ಅಳಲು ತೋಡಿಕೊಂಡರು.ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತಾಡಿದ ಅವರು, ನಾನು ಬೇಲೂರು ತಾಲೂಕಿನ ಹಗರೆ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದು, ಫೆಬ್ರವರಿ ೨೮ ರಂದು ರಾತ್ರಿ ೮ ಗಂಟೆ ಸುಮಾರಿಗೆ ಪರಿಚಿತನೆ ಆಗಿರುವ ಚಿಕ್ಕೂರು ಹೊಸಳ್ಳಿ ಗ್ರಾಮದ ಗಿರೀಶ್ ಎಂಬ ವ್ಯಕ್ತಿ ಮನೆಗೆ ಡ್ರಾಪ್ ಮಾಡುವ ನೆಪದಲ್ಲಿ ಕರೆದುಕೊಂಡು ಬಂದು ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ಮಾಡಿದ್ದಾನೆ ಎಂದು ದೂರಿದರು.ಈ ಬಗ್ಗೆ ಹಳೇಬೀಡು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ಯಾವುದೇ ರೀತಿಯ ಕ್ರಮಕೈಗೊಂಡಿಲ್ಲ. ಅತ್ಯಾಚಾರ ನಡೆದ ಸ್ಥಳದಲ್ಲಿ ಘಟನೆ ನಡೆದಾಗ ಸ್ಥಳಿಯರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ ಹಳೇಬೀಡು ಪೊಲೀಸರು ಆತನನ್ನು ಕೇವಲ ಹತ್ತು ನಿಮಿಷ ಪೊಲೀಸ್ ಠಾಣೆಯಲ್ಲಿ ಇಟ್ಟುಕೊಂಡು ಬಿಡುಗಡೆ ಮಾಡಿ ಕಳುಹಿಸಿದ್ದಾರೆ ಎಂದರು.ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆ ಪತಿ ಮಾತನಾಡಿ, ಪ್ರಕರಣದ ಬಗ್ಗೆ ಎಸ್ಪಿ, ಡಿವೈಎಸ್ಪಿ ಅವರಿಗೂ ದೂರು ನೀಡಲಾಗಿದೆ. ಆದರೆ ಈ ವರೆಗೂ ಕೇವಲ ತನಿಖಾ ಹಂತದಲ್ಲಿ ಇದೆ ಎಂದು ಹೇಳಿ ಪ್ರಕರಣವನ್ನು ಮುಚ್ಚಿಹಾಕುವ ಹುನ್ನಾರ ಮಾಡಿದ್ದಾರೆ. ಕೂಡಲೇ ಅತ್ಯಾಚಾರಿಯನ್ನು ಬಂಧಿಸಿ ನಮಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು. ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ವಿಫಲವಾಗಿದ್ದಾರೆ. ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.