ಸಾರಾಂಶ
ಗೋಕರ್ಣ: ಇಲ್ಲಿನ ಬಂಕಿಕೊಡ್ಲದ ಕಾಶಿ ವಿಶ್ವನಾಥ ದೇವಾಲಯದಲ್ಲಿ ಚಂಪಾ ಷಷ್ಟಿ ಪ್ರಯುಕ್ತ ಸಾರಸ್ವತ ಸಮಾಜದಿಂದ ಶನಿವಾರ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.
ಮುಂಜಾನೆ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ಜರುಗಿತು. ಮಧ್ಯಾಹ್ನ ಕಾಶಿ ವಿಶ್ವನಾಥ ದೇವಾಲಯದಿಂದ ಗ್ರಾಮ ದೇವರಾದ ಬಂಕನಾಥೇಶ್ವರ ದೇವಾಲಯದ ವರೆಗೆ ರಥ ಸಾಗಿ ಪುನಃ ದೇವಾಲಯಕ್ಕೆ ಮರಳಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ರಥ ಎಳೆದು ಸಂಭ್ರಮಿಸಿದರು. ಸಂಜೆ ದೇವರ ಉತ್ಸವ, ಮೃಗ ಬೇಟೆ ನೆರವೇರಿಸಿ, ಕಳಸದಕೇರಿಯಲ್ಲಿ ಪೂಜೆ ಸ್ವೀಕರಿಸಿ, ದೇವಾಲಯಕ್ಕೆ ಮರಳಿತು. ಅಷ್ಟಾವಧಾನ ಸೇವೆ, ಮಹಾಮಂಗಳಾರತಿ ಪ್ರಸಾದ ವಿತರಣೆ ನಡೆಯಿತು.ಕಂಚಿ ಹಣ್ಣಿನ ಖರೀದಿ: ಸಾಮಾನ್ಯವಾಗಿ ಚಂಪಾ ಷಷ್ಟಿಯಂದು ಪ್ರತಿ ಮನೆಯಲ್ಲೂ ಕುಂಬಳಕಾಯಿಯನ್ನು ಪದಾರ್ಥದಲ್ಲಿ ಬಳಸುವುದು ಈ ದಿನದ ವಿಶೇಷವಾಗಿದ್ದು, ಇದರಂತೆ ಇಲ್ಲಿನ ಜಾತ್ರೆಯಲ್ಲಿ ಸಕ್ಕರೆ ಕಂಚಿ (ಸಿಹಿ ಕಂಚಿ) ಹಣ್ಣು ಮಾರಾಟಕ್ಕೆ ಬರುತ್ತದೆ. ಇದನ್ನು ಖರೀದಿಸಲು ಭಕ್ತರು ಮುಗಿಬೀಳುವುದು ವಿಶೇಷವಾಗಿದೆ. ಅದರಂತೆ ಈ ದಿನ ಹಣ್ಣನ್ನು ಮನೆಗೆ ತೆಗೆದುಕೊಂಡು ಹೋಗುವ ಸಾಂಪ್ರದಾಯ ಅನಾದಿಕಾಲದಿಂದ ಇದೆ. ಇದರಂತೆ ಈ ವರ್ಷವೂ ಖರೀದಿ ಜೋರಾಗಿತ್ತು. ಈ ಭಾಗದ ಪ್ರಥಮ ರಥೋತ್ಸವ ಇದಾಗಿದ್ದು, ಇನ್ನು ಮುಂದೆ ವಿವಿಧೆಡೆಯ ದೇವಾಲಯಗಳ ರಥೋತ್ಸವ ಜರುಗಲಿದೆ. ಇನ್ನೂ ಮಿಠಾಯಿ, ಮಕ್ಕಳ ಆಟಿಕೆ ಸೇರಿದಂತೆ ವಿವಿಧ ಅಂಗಡಿಗಳು ಬಂದಿದ್ದು, ಜನರು ತಮಗೆ ಅಗತ್ಯ ವಸ್ತುಗಳನ್ನ ಪಡೆದು ಸಂಭ್ರಮಿಸಿದರು.
ಶ್ರೀಗಳ ಭೇಟಿ: ಕವಳೆಮಠದ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ ಅವರು ಕಾಶಿ ವಿಶ್ವೇಶ್ವರ ಮಂದಿರಕ್ಕೆ ಭೇಟಿ ಪೂಜೆ ಸಲ್ಲಿಸಿ, ಆನಂತರ ರಥಾರೋಹಣ ನೆರವೇರಿಸಿ, ರಥ ಕಾಣಿಕೆ ಸರ್ಮಸಿದರು. ಬಳಿಕ ಬಂಕನಾಥೇಶ್ವರ ದೇವಾಲಯಕ್ಕೆ ತೆರಳಿ ವಿಶೇಷ ಬೆಣ್ಣೆ ಅಲಂಕೃತ ದೇವರಿಗೆ ಪೂಜೆ ಸಲ್ಲಿಸಿದರು.ಆಕರ್ಷಿಸಿದ ಬೆಣ್ಣೆ ಅಲಂಕಾರ: ಬಂಕನಾಥೇಶ್ವರ ದೇವರಿಗೆ ಈ ವರ್ಷ ಬೆಣ್ಣೆಯಿಂದ ಅಲಂಕಾರ ಮಾಡಿದ್ದು ವಿಶೇಷವಾಗಿತ್ತು. ಭವ್ಯ ಅಲಂಕಾರ ಭಕ್ತರನ್ನ ಆಕರ್ಷಿಸಿತು.
ಮುಗ್ವಾದಲ್ಲಿ ಜಾತ್ರಾ ಮಹೋತ್ಸವ:ಹೊನ್ನಾವರ ತಾಲೂಕಿನ ಪುರಾಣ ಪ್ರಸಿದ್ಧ ನಾಗಾರಾಧನೆಯ ಪುಣ್ಯ ತಾಣ ಎಂದೇ ಪ್ರಸಿದ್ಧಿ ಹೊಂದಿರುವ ಮುಗ್ವಾ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಚಂಪಾ ಷಷ್ಟಿ ನಿಮಿತ್ತ ಜಾತ್ರಾ ಮಹೋತ್ಸವ ಸಾವಿರಾರು ಭಕ್ತರ ನಡುವೆ ಶನಿವಾರ ವಿಜೃಂಭಣೆಯಿಂದ ನೆರವೇರಿತು.
ಶ್ರೀ ಸುಬ್ರಹ್ಮಣ್ಯ ದೇವಾಲದಲ್ಲಿ ಮುಂಜಾನೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಭಕ್ತರಿಂದ ಹಣ್ಣು-ಕಾಯಿ ಸೇವೆ, ಅರ್ಚನೆ, ಆರತಿ, ಅಭಿಷೇಕ, ಸರ್ವ ಸೇವೆ, ಪಂಚಖಾದ್ಯ ಸೇವೆ, ಲಾಡು ಪ್ರಸಾದ ಸೇವೆ ಸೇರಿದಂತೆ ವಿವಿಧ ಸೇವೆಯನ್ನು ಸಲ್ಲಿಸಿದರು.ಸಮೀಪದ ನಾಗಬನದಲ್ಲಿರುವ ನಾಗದೇವರಿಗೆ ಕ್ಷೀರಾಭಿಷೇಕ, ಆರತಿ ಮತ್ತು ಫಲಾಭಿಷೇಕ ಸೇರಿದಂತೆ ವಿವಿಧ ಸೇವೆ ಸಲ್ಲಿಸಲಾಯಿತು. ಮುಂಜಾನೆ 7 ಗಂಟೆಯಿಂದ ರಾತ್ರಿ 8.30ರ ವರೆಗೆ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಮುಂಜಾನೆ 8:30ರಿಂದ ಅಭಿಷೇಕಗಳು ಆರಂಭವಾಗಿ ಮಧ್ಯಾಹ್ನ 12 ಗಂಟೆ ವರೆಗೆ ನಡೆದವು. ನಂತರ ಕಲಾಭಿಷೇಕ, ಪರಿವಾರ ದೇವತೆಗಳಿಗೆ ಪೂಜೆ, ಬಲಿ, ಮಹಾಮಂಗಳಾರತಿ ನೆರವೇರಿತು. ಭಕ್ತರು ಸರತಿ ಸಾಲಿನಲ್ಲಿ ದರ್ಶನ ಪಡೆಯುವುದಕ್ಕಾಗಿ ಪೆಂಡಾಲ್ ವ್ಯವಸ್ಥೆ, ಅಲ್ಲಲ್ಲಿ ಶುದ್ಧ ಕುಡಿಯುವ ನೀರು ಹಾಗೂ ಪಾನಕ ವ್ಯವಸ್ಥೆಯನ್ನು ಕಲ್ಪಿಸಿದ್ದರು. ಶಾಸಕ ದಿನಕರ ಶೆಟ್ಟಿ, ವಿವಿಧ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ನಾಡಿನ ಮೂಲೆಮೂಲೆಯಿಂದ ಸಾವಿರಾರು ಭಕ್ತರು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದ್ದರು.ದೇವಾಲಯದ ಟ್ರಸ್ಟ ಅಧ್ಯಕ್ಷ ಎಸ್.ಆರ್. ಹೆಗಡೆ ಮಾತನಾಡಿ, ಪ್ರತಿ ಬಾರಿಯಂತೆ ಸಕಲ ಸಿದ್ಧತೆಯೊಂದಿಗೆ ಅದ್ಧೂರಿಯಾಗಿ ಚಂಪಾಷಷ್ಟಿ ಉತ್ಸವ ನಡೆದಿದ್ದು, ವಿವಿಧ ಸೇವಾ ಕಾರ್ಯಗಳಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ಬಾರಿ 10 ಸಾವಿರಕ್ಕೂ ಅಧಿಕ ಭಕ್ತರಿಗೆ ಪ್ರಸಾದ ಭೋಜನ ವ್ಯವಸ್ಥೆ ಕಲ್ಪಿಸಲಾಗಿತ್ತು ಎಂದರು.