17 ವರ್ಷಗಳಿಂದ ನಗದೇ ಗೆದ್ದ ಹಾನಗಲ್ಲಿನ ರತಿ ಕಾಮಣ್ಣ

| Published : Mar 29 2024, 12:47 AM IST

ಸಾರಾಂಶ

ಜೀವಂತ ರತಿ ಕಾಮರ ವೇಷದಲ್ಲಿ ಸ್ಥಾಪಿತರಾದವರನ್ನು ನಗಿಸಬೇಕೆಂಬ ಸ್ಪರ್ಧೆಯಲ್ಲಿ ೧೭ ವರ್ಷಗಳಿಂದ ನಗಿಸುವವರೇ ಸೋತು, ರತಿ-ಕಾಮರು ಗೆದ್ದಿದ್ದಾರೆ. ಪ್ರಸ್ತುತ ವರ್ಷದ ಓಕಳಿ ಹಬ್ಬದ ನಿಮಿತ್ತ ಮಾ. ೨೯ರಂದು ರತಿ ಕಾಮರ ಸ್ಥಾಪನೆಯಾಗಲಿದ್ದು, ನಗಿಸುವವರಿಗೆ ಆಹ್ವಾನಿಸಲಾಗಿದೆ.

ಹಾನಗಲ್ಲ: ಜೀವಂತ ರತಿ ಕಾಮರ ವೇಷದಲ್ಲಿ ಸ್ಥಾಪಿತರಾದವರನ್ನು ನಗಿಸಬೇಕೆಂಬ ಸ್ಪರ್ಧೆಯಲ್ಲಿ ೧೭ ವರ್ಷಗಳಿಂದ ನಗಿಸುವವರೇ ಸೋತು, ರತಿ-ಕಾಮರು ಗೆದ್ದಿದ್ದಾರೆ. ಪ್ರಸ್ತುತ ವರ್ಷದ ಓಕಳಿ ಹಬ್ಬದ ನಿಮಿತ್ತ ಮಾ. ೨೯ರಂದು ರತಿ ಕಾಮರ ಸ್ಥಾಪನೆಯಾಗಲಿದ್ದು, ನಗಿಸುವವರಿಗೆ ಆಹ್ವಾನಿಸಲಾಗಿದೆ.

ಶುಕ್ರವಾರ ಪಟ್ಟಣದ ಮಹಾತ್ಮಾಗಾಂಧೀ ವೃತ್ತದಲ್ಲಿ ರತಿ ಕಾಮರನ್ನು ಸ್ಥಾಪಿಸಲಾಗುವುದು. ಹಾನಗಲ್ಲಿನ ಮಹಾತ್ಮಾ ಗಾಂಧೀ ವೃತ್ತದಲ್ಲಿ ಕಳೆದ ೧೭ ವರ್ಷಗಳಿಂದ ವಿಶೇಷವಾಗಿ ಸಿದ್ಧಗೊಳಿಸಿದ ವೇದಿಕೆಯಲ್ಲಿ ರತಿ ಕಾಮರಾಗಿ ಮೊದಲ ಮೂರು ವರ್ಷ ಮಹೇಶ ಕೊಲ್ಲಾಪೂರ, ರಾಘವೇಂದ್ರ ಡೊಳ್ಳೇಶ್ವರ ಸ್ಥಾಪಿತವಾಗುತ್ತಿದ್ದರು. ಕಳೆದ ೧೪ ವರ್ಷಗಳಿಂದ ಮಾಲತೇಶ ತುಪರಿಕೊಪ್ಪ ಹಾಗೂ ಮಹೇಶ ಕೊಲ್ಲಾಪೂರ ರತಿ ಕಾಮರಾಗಿ ಸ್ಥಾಪಿತವಾಗುತ್ತಿದ್ದಾರೆ. ಸಂಜೆ ೭ರಿಂದ ರಾತ್ರಿಯವರೆಗೆ ನಗಿಸುವ ಯತ್ನ ನಡೆದೇ ಇರುತ್ತದೆ. ಇವರನ್ನು ನಗಿಸಲು ಸಾವಿರಾರು ಜನ ಯತ್ನಿಸಿದ್ದಾರೆ. ಈ ೧೭ ವರ್ಷಗಳಲ್ಲಿ ಇಲ್ಲಿನ ರತಿ ಕಾಮರು ನಗಲೇ ಇಲ್ಲ. ಗಾಂಭೀರ್ಯದ ನೋಟದಲ್ಲಿಯೇ ಎಲ್ಲರನ್ನು ಆಕರ್ಷಿಸಿ ಸೋಲಿಸಿದ್ದಾರೆ. ಮಕ್ಕಳಾದಿಯಾಗಿ ಮಹಿಳೆಯರು ಕೂಡ ಇವರನ್ನು ನಗಿಸುವಲ್ಲಿ ವಿಫಲರಾಗಿದ್ದಾರೆ.

ಆರಂಭದಲ್ಲಿ ಕಾಮನ ಹಬ್ಬಕ್ಕೆ ಒಂದು ಸಾಂಸ್ಕೃತಿಕ ವಾತಾವರಣವನ್ನು ಕಲ್ಪಿಸಲು ಉದ್ಯಮಿಗಳಾದ ಆರ್.ಪ್ರತಾಪ, ದಿ.ಸಂಜಯ ಜುಗನೀಕರ, ರಾಮು ಯಳ್ಳೂರ ಮೊದಲಾದವರು ಈ ಕಾರ್ಯಕ್ಕೆ ಮುಂದಾದರು. ಕಳೆದ ೪ ವರ್ಷಗಳಿಂದ ಕದಂಬ ಯುವಶಕ್ತಿ ಬಳಗ ಈ ಕಾರ್ಯವನ್ನು ಮುಂದುವರೆಸಿದೆ.

ಈ ಬಾರಿ ರತಿ ವೇಷದಲ್ಲಿ ಮಹೇಶ ಕೊಲ್ಲಾಪೂರ ಹಾಗೂ ಕಾಮನ ವೇಷದಲ್ಲಿ ಮಾಲತೇಶ ತುಮರಿಕೊಪ್ಪ ಈ ೧೮ ನೇ ವರ್ಷದ ರತಿ ಕಾಮರನ್ನು ನಗಿಸುವ ಸ್ಪರ್ಧೆಯಲ್ಲಿದ್ದು, ಈ ಬಾರಿಯಾದರೂ ಇವರನ್ನು ನಗಿಸುವರೇ ಕಾದುನೋಡಬೇಕು. ನಗಿಸಿದವರಿಗೆ ಬೆಲೆ ಬಾಳುವ ಕೊಡುಗೆಗಳನ್ನು ಕೂಡ ನೀಡಲಾಗುತ್ತದೆ.