ಅವ್ಯವಸ್ಥೆಯ ಆಗರವಾದ ರಟ್ಟೀಹಳ್ಳಿ ಪಟ್ಟಣ

| Published : Oct 16 2023, 01:45 AM IST

ಸಾರಾಂಶ

ಬಹುತೇಕ ಕಾಲುವೆಗಳು ತುಂಬಿ ಗಬ್ಬು ನಾರುತ್ತಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ಕಸದ ರಾಶಿಗಳು ರಾರಾಜಿಸುತ್ತಿದೆ. ಇದರಿಂದ ಪಟ್ಟಣ ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿದೆ.

ಸತೀಶ ಸಿ.ಎಸ್.

ಕನ್ನಡಪ್ರಭ ವಾರ್ತೆ ರಟ್ಟೀಹಳ್ಳಿ

ಬಹುತೇಕ ಕಾಲುವೆಗಳು ತುಂಬಿ ಗಬ್ಬು ನಾರುತ್ತಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ಕಸದ ರಾಶಿಗಳು ರಾರಾಜಿಸುತ್ತಿದೆ. ಇದರಿಂದ ಪಟ್ಟಣ ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿದೆ.

ಈ ಬಗ್ಗೆ ಸಾರ್ವಜನಿಕರೂ ಸ್ವತಃ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಮಾಹಿತಿ ನೀಡಿದ್ದಾರೆ. ಆದರೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಸಿದ್ದಾರೆ. ಪಟ್ಟಣ ಪಂಚಾಯಿತಿ ಅಧಿಕಾರಿಗಳ ವರ್ತನೆಯಿಂದಾಗಿ ಪಟ್ಟಣದ ಜನತೆ ಬೇಸತ್ತು ಹೋಗಿದ್ದಾರೆ.

ಸರ್ಕಾರದ ಆದೇಶದ ಮೇರೆಗೆ ಫೋಟೋಕ್ಕೆ ಫೋಸ್ ನೀಡಿ, ಸ್ವಚ್ಛತೆಯ ಬಗ್ಗೆ ಭಾಷಣ ಬಿಗಿಯುವ ಅಧಿಕಾರಿಗಳು, ಜನಪ್ರತಿನಿಧಿಗಳು ಮರಳಿ ಸ್ವಚ್ಛತೆಯ ಕುರಿತು ಕಾಳಜಿ ವಹಿಸುವುದಿಲ್ಲ ಎಂಬುದು ಜನರ ದೂರು. ಇದಕ್ಕೆ ಪಟ್ಟಣದ ಸ್ಥಿತಿಗತಿಯೇ ಸಾಕ್ಷಿಯಾಗಿದೆ.

ಪಟ್ಟಣದಲ್ಲಿ ಡೆಂಘೀ ಸೇರಿದಂತೆ ಸಾಂಕ್ರಾಮಿಕ ಕಾಯಿಲೆಗಳು ಹೆಚ್ಚುತ್ತಿದ್ದು, ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುತ್ತಿದೆ. ಆದರೆ ಪಟ್ಟಣದ ಸ್ವಚ್ಛತೆ ಕಾಪಾಡುವಲ್ಲಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಪಟ್ಟಣದ ಕೋಟೆ ಓಣಿಯ ಗುರೂಜಿ ಆಸ್ಪತ್ರೆಯ ಮುಂಭಾಗ, ತರಕಾರಿ ಮಾರ್ಕೆಟ್, ಕುರುಬಗೇರಿ, ವೀರಭದ್ರೇಶ್ವರ ದೇವಸ್ಥಾನ ರಸ್ತೆ ಸೇರಿದಂತೆ ಇನ್ನೂ ಅನೇಕ ಕಡೆಯ ಕಾಲುವೆಗಳು ತುಂಬಿಕೊಂಡು ಸೊಳ್ಳೆಗಳ ವಾಸಸ್ತಾನವಾಗಿ ಪರಿಣಮಿಸಿವೆ. ಈ ಮಾರ್ಗಗಳಲ್ಲಿ ಅನೇಕ ದೇವಸ್ಥಾನಗಳು ಇದ್ದು, ಜನರು ಹೆಚ್ಚು ಓಡಾಡುವ ಪ್ರಮುಖ ರಸ್ತೆಯಾಗಿವೆ. ಆದರೆ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸ್ಥಳೀಯ ವ್ಯಾಪಾರಸ್ಥರು ಸಾಕಷ್ಟು ಪಪಂಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ಹೀಗಾಗಿ ಕೂಡಲೇ ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಪಪಂ ಅಧಿಕಾರಿಗಳು, ಜನಪ್ರತಿನಿಧಿಗಳು ಸೂಕ್ತ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಪ್ರತಿಭಟನೆ ಅನಿವಾರ್ಯ ಎಂದು ಸ್ಥಳೀಯ ನಿವಾಸಿಗಳು ಎಚ್ಚರಿಸಿದ್ದಾರೆ.

ಪಟ್ಟಣ ಪಂಚಾಯಿತಿಯಲ್ಲಿ ಪೌರ ಕಾರ್ಮಿಕರ ಕೊರತೆ ಇದೆ. ಪ್ರತಿ ೧ ಸಾವಿರ ಜನ ಸಂಖ್ಯೆಗೆ ಒಬ್ಬ ಪೌರ ಕಾರ್ಮಿಕರ ಅಗತ್ಯತೆ ಇದ್ದು, ಪ್ರಸ್ತುತ ೮ ಕಾರ್ಮಿಕರಿದ್ದಾರೆ. ಪಟ್ಟಣದ ಜನಸಂಖ್ಯೆ ಹೆಚ್ಚುತ್ತಿದ್ದು, ಕಸ ವಿಲೇವಾರಿ ಹಾಗೂ ಸ್ವಚ್ಛತೆ ಕಾಪಾಡುವಲ್ಲಿ ಸಮಸ್ಯೆಯಾಗುತ್ತಿದೆ ಎನ್ನುತ್ತಾರೆ ಪಪಂ ಮುಖ್ಯಾಧಿಕಾರಿ ಸಂತೋಷ ಚಂದ್ರಶೇಖರ.

ತಾಲೂಕಿನಾದ್ಯಂತ ಡೆಂಘೀ ಸೇರಿದಂತೆ ಮಾರಕ ರೋಗಗಳು ಹರಡುತ್ತಿದ್ದು, ಪಟ್ಟಣದಲ್ಲಿ ಕೋಟೆ ರಸ್ತೆ ಸೇರಿದಂತೆ ಅನೇಕ ಕಡೆಗಳ ಕಾಲುವೆಗಳು ತುಂಬಿ ಗಬ್ಬು ನಾರುತ್ತಿವೆ. ಈ ಬಗ್ಗೆ ಸ್ಥಳೀಯ ಪಪಂ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದರೂ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ ಎನ್ನುತ್ತಾರೆ ವ್ಯಾಪಾರಸ್ಥ ಸಂಜೀವ ಪಾಳಂಕರ್.