ಸಾರಾಂಶ
ನಿಸ್ವಾರ್ಥದಿಂದ ಸಮಾಜ ಸೇವೆ ಮಾಡುತ್ತಿರುವ ರವಿ ಕಟಪಾಡಿ ಮತ್ತು ಈಶ್ವರ್ ಮಲ್ಪೆ ಅವರನ್ನು ಅಯೋಧ್ಯೆಯಲ್ಲಿ ಪೇಜಾವರ ಶ್ರೀಗಳು ಗೌರವಿಸಿದರು.
ಕನ್ನಡಪ್ರಭ ವಾರ್ತೆ, ಉಡುಪಿ
ಉಡುಪಿ ಜಿಲ್ಲೆಯ ಇನ್ನಿಬ್ಬರು ಅಸಾಧಾರಣ ಸಮಾಜ ಸೇವಕರಿಗೆ ಅಯೋಧ್ಯೆಯಲ್ಲಿ ಉನ್ನತ ಗೌರವ ಪ್ರಾಪ್ತಿಯಾಗಿದೆ. ಹಲವಾರು ವರ್ಷಗಳಿಂದ ನಿರಂತರವಾಗಿ ನಿಸ್ವಾರ್ಥದಿಂದ ಸಮಾಜ ಸೇವೆ ಮಾಡುತ್ತಿರುವ ರವಿ ಕಟಪಾಡಿ ಮತ್ತು ಈಶ್ವರ್ ಮಲ್ಪೆ ಅವರನ್ನು ಅಯೋಧ್ಯೆಗೆ ಕರೆಸಿಕೊಂಡಿರುವ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀ ಪಾದರು ಸೋಮವಾರ ಶ್ರೀ ರಾಮ ದೇವರ ತೊಟ್ಟಿಲು ಉತ್ಸವದಲ್ಲಿ ಅಭಿನಂದಿಸಿ ಅನುಗ್ರಹ ಪ್ರಸಾದ ನೀಡಿದರು. ಇಂದು ಮಂಡಲೋತ್ಸವದ ಸಂದರ್ಭದಲ್ಲಿ (ಮಂಗಳವಾರ) ಅವರಿಬ್ಬರ ಹೆಸರಿನಲ್ಲಿ ಬಾಲರಾಮನಿಗೆ ಕಲಶಾರಾಧನೆ ಮತ್ತು ಕಲಶಾಭಿಷೇಕದ ಪೂಜೆ ನೆರವೇರಲಿದ್ದು, ನಂತರ ಮಂಡಲೋತ್ಸವ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ. ರವಿ ಕಟಪಾಡಿ ಅವರು ಕಳೆದ 10 ವರ್ಷಗಳಿಂದ ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಹಾಲಿವುಡ್ ಸಿನೆಮಾಗಳ ಪಾತ್ರಗಳ ವೇಷ ಧರಿಸಿ 1 ಕೋಟಿ ರು.ಗೂ ಅಧಿಕ ಹಣ ಸಂಗ್ರಹಿಸಿ 70ಕ್ಕೂ ಅಧಿಕ ಎಳೆ ಕಂದಮ್ಮಗಳ ಅನಾರೋಗ್ಯ ಚಿಕಿತ್ಸೆಗೆ ಸಹಾಯ ಮಾಡಿದ್ದಾರೆ ಮತ್ತು ಅವರಿಗೆ ಹೊಸ ಬದುಕು ನೀಡಿದ್ದಾರೆ. ಈಶ್ವರ್ ಮಲ್ಪೆ ಅವರು 12 ವರ್ಷಗಳಿಂದ ಆಕಸ್ಮಿಕವಾಗಿ ಸಮುದ್ರ ಪಾಲಾಗುತ್ತಿದ್ದ 50ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಿದ್ದಾರೆ, ರಸ್ತೆ ಅಪಘಾತದಲ್ಲಿ ಗಾಯಗೊಂಡ 300ಕ್ಕೂ ಹೆಚ್ಚು ಮಂದಿಗೆ ಸಕಾಲದಲ್ಲಿ ಆಸ್ಪತ್ರೆಗೆ ಸಾಗಿಸಿ ಪ್ರಾಣ ಕಾಪಾಡಿದ್ದಾರೆ. ಸಮುದ್ರ, ನದಿ, ಕೆರೆಗಳಲ್ಲಿ ಮುಳುಗಿ ಸತ್ತವರ 900ಕ್ಕೂ ಹೆಚ್ಚು ಶವಗಳನ್ನು ಮೇಲೆತ್ತಿದ್ದಾರೆ.ಶನಿವಾರ ಪೇಜಾವರ ಶ್ರೀಗಳು ಉಡುಪಿಯ ಇನ್ನಿಬ್ಬರು ಅಸಮಾನ್ಯ ಸಮಾಜ ಸೇವಕರಾದ ನಿತ್ಯಾನಂದ ಒಳಕಾಡು ಮತ್ತು ವಿಶು ಶೆಟ್ಟಿ ಅಂಬಲಪಾಡಿ ಅವರನ್ನೂ ಅಯೋಧ್ಯೆಗೆ ತಮ್ಮ ವೆಚ್ಚದಲ್ಲಿಯೇ ಕರೆಸಿ ಅವರಿಗೆ ಮಂಡಲೋತ್ಸವ ಪುರಸ್ಕಾರ ಪ್ರದಾನ ಮಾಡಿದ್ದಾರೆ.