ಸಾರಾಂಶ
ಅದಿತಿ ಆರ್ಟ್ ಗ್ಯಾಲರಿಯಲ್ಲಿ ಕಲ್ಲಚ್ಚು ಕಲಾ ಕೃತಿಗಳ ಪ್ರದರ್ಶನ ನಡೆಯಿತು. ಮಂಗಳೂರಿನ ನೇಮಿರಾಜ ಶೆಟ್ಟಿ ಪ್ರದರ್ಶನ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಇತಿಹಾಸವನ್ನು ಚಿತ್ರಗಳ ಮೂಲಕ ಜೋಪಾಸನೆ ಮಾಡುವ ಕಾಯಕವೂ ಅತ್ಯಂತ ಶ್ರೇಷ್ಠ. ಮುಂದಿನ ಪೀಳಿಗೆಗೆ ಪ್ರಾಚೀನರ ಕಲಾ ಕೊಡುಗೆಯನ್ನು ಸಂರಕ್ಷಣೆ ಮಾಡುವುದು ಅನಿವಾರ್ಯ ಎಂದು ಮಂಗಳೂರಿನ ನೇಮಿರಾಜ ಶೆಟ್ಟಿ ಅಭಿಪ್ರಾಯಪಟ್ಟರು.ಅವರು ಅದಿತಿ ಆರ್ಟ್ ಗ್ಯಾಲರಿಯಲ್ಲಿ ಆಯೋಜಿಸಲಾದ ಮೂರು ದಿನ ಜರುಗಲಿರುವ ಕಲ್ಲಚ್ಚು ಕಲಾ ಕೃತಿಗಳ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಭಾರತದಲ್ಲಿ ಮುದ್ರಣ ಮಾಧ್ಯಮದ ಇತಿಹಾಸದ ಬಗ್ಗೆ ಹಾಗೂ ಕಲಾಕೃತಿಗಳ ಆಳವಾಗಿ ಬೆಳಕು ಚೆಲ್ಲಿದ ಅವರು ರವಿಮರ್ಮ ಅವರ ಕೊಡುಗೆಯನ್ನು ಪ್ರಸಂಶಿಸಿದರು.ಕಲಾವಿದ ಡಾ. ಜನಾರ್ದನ ಹಾವಂಜೆ ಮಾತನಾಡಿ, ಸಾಮಾಜಿಕ ಬದಲಾವಣೆಗಾಗಿ ದೇವರನ್ನು ಮನುಷ್ಯರೂಪದಲ್ಲಿ ತೋರಿಸಿದ ಕಲಾವಿದ ರವಿ ವರ್ಮ ಅವರ ಕೊಡುಗೆ ಅಪಾರ. ಕಲ್ಲಚ್ಚು ಪ್ರತಿಗಳ ತಳಸ್ಪರ್ಶಿ ಅಧ್ಯಯನವಾಗಬೇಕು ಎಂದು ಹೇಳಿದರು.
ಚಿತ್ರ ಕೃತಿಗಳ ನಿರ್ಮಾಣದ ಜತೆಗೆ ಕಲಾಕೃತಿಗಳು ಸಾಮಾನ್ಯರಿಗೂ ತಲುಪುವಂತೆ ಮಾಡುವುದು ಒಂದು ವಿಶಿಷ್ಟ ಕಲೆ. ಪ್ರಾಚೀನ ಕಾಲದ ಮುದ್ರಣ ತಂತ್ರಜ್ಞಾನವನ್ನು ಬಳಸಿ ಬಹುಪ್ರತಿಗಳ ನಿರ್ಮಾಣ ಮಾಡಿದ ಅನೇಕ ಕಲಾವಿದರ ಸಾಲಿಗೆ ರವಿ ವರ್ಮ ಅವರೂ ಸೇರುತ್ತಾರೆ ಎಂದು ಅದಿತಿ ಗ್ಯಾಲರಿಯ ಆಡಳಿತ ವಿಶ್ವಸ್ಥರಾದ ಡಾ. ಕಿರಣ್ ಆಚಾರ್ಯ ಪ್ರಸ್ತಾವನೆಯಲ್ಲಿ ತಿಳಿಸಿದರು.ವಿಶ್ವಸ್ಥರಾದ ವಿದುಷಿ ಪ್ರತಿಮಾ ಆಚಾರ್ಯ, ಶ್ರೀನಿವಾಸ್, ಪ್ರಸನ್ನ ಶ್ರೀನಿವಾಸ್, ವಿದುಷಿ ಪ್ರವೀಣಾ ಮೋಹನ್ ಉಪಸ್ಥಿತರಿದ್ದರು.
ಕಲಾ ಪ್ರದರ್ಶನವು ಮೇ 19ರ ವರೆಗೆ ಬೆಳಗ್ಗೆ 11ರಿಂದ ಸಂಜೆ 7ರ ವರೆಗೆ ವೀಕ್ಷಣೆಗೆ ಲಭ್ಯವಾಗುವಂತೆ ಮಾಡಲಾಗಿದೆ.