ರಾಯಣ್ಣ ಕಂಚಿನ ಪುತ್ಥಳಿ, ಕಲ್ಲಿನ ಕೋಟೆ ಲೋಕಾರ್ಪಣೆ ಇಂದು

| Published : Aug 26 2024, 01:36 AM IST

ಸಾರಾಂಶ

ಅರಬಾವಿ ಮತಕ್ಷೇತ್ರದ ಕೌಜಲಗಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕಂಚಿನ ಪುತ್ಥಳಿ ಮತ್ತು ಕಲ್ಲಿನ ಕೋಟೆಯ ಉದ್ಘಾಟನೆ ಆ.26ರಂದು ಜರುಗಲಿದೆ.

ಮೂಡಲಗಿ: ಅರಬಾವಿ ಮತಕ್ಷೇತ್ರದ ಕೌಜಲಗಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕಂಚಿನ ಪುತ್ಥಳಿ ಮತ್ತು ಕಲ್ಲಿನ ಕೋಟೆಯ ಉದ್ಘಾಟನೆ ಆ.26ರಂದು ಜರುಗಲಿದೆ. ಕೌಜಲಗಿ ಪಟ್ಟಣದ ರಾಜ್ಯ ಹೆದ್ದಾರಿ ಗೋಡಚಿನಮಲ್ಕಿ-ಬಾದಾಮಿ ಮತ್ತು ಜಾಂಬೋಟಿ-ರಬಕವಿ ಸಂಗಮ ಸ್ಥಳವಾದ ಪಿಕೆಪಿಎಸ್ ಕಟ್ಟಡದ ಹತ್ತಿರ ಸುಮಾರು ₹ 70 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಭವ್ಯ ಮೂರ್ತಿ ಹಾಗೂ ಕಲ್ಲಿನಕೋಟೆ ನಿರ್ಮಿತ ವೃತ್ತವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಲಿದ್ದಾರೆ.

ರಾಯಣ್ಣನ ಕಂಚಿನ ಪುತ್ಥಳಿಯನ್ನು ಬಿಡದಿ-ರಾಮನಗರದ ಬಿ.ವಿಜಯಾಜಿ ತಯಾರಿಸಿದ್ದಾರೆ. ಪುತ್ಥಳಿಯ ಸುತ್ತಲೂ ಕಲ್ಲಿನ ಕೋಟೆಯನ್ನು ಉಪ್ಪಾರಟ್ಟಿಯ ಹನುಮಂತ ಆಡಿನ ನಿರ್ಮಿಸಿದ್ದಾರೆ. ಸುತ್ತಲೂ ಕಲ್ಲಿನ ಆವರಣವನ್ನು ಕೊಣ್ಣೂರದ ಯಲ್ಲಪ್ಪ ಗಾಡಿವಡ್ಡರ ಕಟ್ಟಿದ್ದಾರೆ. ಕಲ್ಲಿನ ಕೋಟೆಯ ಬುರ್ಜುಗಳಲ್ಲಿ ರಾಜಸ್ಥಾನದಿಂದ 2 ತೋಪು ಧರಿಸಿ ಸ್ಥಾಪಿಸಲಾಗಿದೆ. ಒಡಿಶಾದ ಶಿಲ್ಪಿ ಸಂತೋಷ ತಯಾರಿಸಿದ 2 ಆನೆ, 2 ಟಗರು ಮತ್ತು ಜಯ ವಿಜಯರೆಂಬ ಇಬ್ಬರ ದ್ವಾರಪಾಲಕರನ್ನು ಪ್ರತಿಷ್ಟಾಪಿಸಲಾಗಿದೆ. ಕಲ್ಲಿನ ಕೋಟೆಯ ಈಶಾನ್ಯ ಭಾಗದಲ್ಲಿ ಕಾರಂಜಿ ರೂಪಿಸಲಾಗಿದೆ. ಪುತ್ಥಳಿಯ ಹಿಂದೆ ರಾಯಣ್ಣ ವನ ನಿರ್ಮಿಸಲಾಗಿದ್ದು, ರಾಯಣ್ಣನ ಇತಿಹಾಸ ಸಾರುವ ಬರವಣಿಗೆ ಬರೆಸಲಾಗಿದೆ.

ಕರ್ನಾಟಕ ಪ್ರದೇಶ ಕುರುಬರ ಸಂಘದ ನಿಕಟ ಪೂರ್ವ ಅಧ್ಯಕ್ಷ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನ ಸಮಿತಿ ಅಧ್ಯಕ್ಷ ಡಾ. ರಾಜೇಂದ್ರ ಸಣ್ಣಕ್ಕಿ ಹಾಗೂ ಸಮಿತಿಯ ಸದಸ್ಯರ, ಮೊದಲಿಗೆ ಗ್ರಾಮಸ್ಥರ, ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಬಹು ವರ್ಷಗಳ ಕನಸಿನ ವೀರನ ಸ್ಮಾರಕದ ವೃತ್ತ ನಿರ್ಮಾಣವಾಗಿದೆ. ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾರ್ಗದರ್ಶನದಲ್ಲಿ ಕೌಜಲಗಿ ವಿಠ್ಠಲ ದೇವರ ದೇವಸ್ಥಾನದ ದೇವರ್ಷಿ ವಿಠ್ಠಲ ಅಜ್ಜನವರು ಹಾಗೂ ಬಾಗೋಜಿಕೊಪ್ಪದ ಡಾ.ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಾದದೊಂದಿಗೆ ನಿರ್ಮಾಣಗೊಂಡಿದೆ.

ಪಟ್ಟಣದಲ್ಲಿ ನಿರ್ಮಾಣವಾಗಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ವೃತ್ತ ಭವ್ಯ, ಮನೋಹರವಾಗಿದೆ. ಕೈಯಲ್ಲಿ ಖಡ್ಗ, ಡಾಲ್‌ ಹಿಡಿದಿರುವ ಕಂಚಿನ ರಾಯಣ್ಣನ ಮೂರ್ತಿ, ಮೊದಲ ನೋಟದಲ್ಲಿ ನೋಡುಗರ ಕಣ್ಮನ ಸೆಳೆಯುತ್ತದೆ. ರಾಯಣ್ಣನ ಮೂರ್ತಿ ಪಕ್ಕದಲ್ಲಿ ಮೈನವಿರೇಳಿಸುವ ಬಹುವರ್ಣರಂಜಿತ ನೀರಿನ ಕಾರಂಜಿ ನಿರ್ಮಿಸಲಾಗಿದೆ. ಕಾರಂಜಿಯ ಸೊಬಗು ಸಹೃದಯರನ್ನು ಅಕ್ಕರೆಯಿಂದ ತಮ್ಮತ್ತ ಸೆಳೆಯುತ್ತದೆ. ಈ ವೃತ್ತ ನೋಡಿದಾಕ್ಷಣ ರಾಯಣ್ಣನ ಕೆಚ್ಚದೆ, ಬ್ರಿಟಿಷರ ವಿರುದ್ಧ ಗುಡುಗಿದ ವೀರಧ್ವನಿ, ನಾಡಪ್ರೇಮ, ತ್ಯಾಗ, ಪರಧರ್ಮ ಸಹಿಷ್ಣುತೆ, ಸ್ವಾಮಿ ನಿಷ್ಠೆ ಮುಂತಾದ ಮಾನವೀಯ ಮೌಲ್ಯಧಾರಿತ ಗುಣಗಳು ನೋಡುಗರ ಮನಸ್ಸಿನಲ್ಲಿ ಅಚ್ಚೊತ್ತಿವಂತಿದೆ. ಇಂತಹ ಭವ್ಯ ವೃತ್ತ ಶ್ರಾವಣ ಸೋಮವಾರ ಲೋಕಾರ್ಪಣೆಗೊಳ್ಳುತ್ತಿರುವುದು ಕೌಜಲಗಿ ನಾಡಿನ ಜನರ ಸಂತಸಕ್ಕೆ ಕಾರಣವಾಗಿದೆ.ಕೌಜಲಗಿಯಲ್ಲಿ ಇಷ್ಟೊಂದು ಭವ್ಯವಾದ ರಾಯಣ್ಣನ ಕೋಟೆ, ಪುತ್ಥಳಿ ನಿರ್ಮಿಸುವ ಯೋಜನೆ ಇದ್ದಿರಲಿಲ್ಲ.ಆದರೆ, ಸಮಿತಿಯ ಎಲ್ಲ ಸದಸ್ಯರು, ಗ್ರಾಮಸ್ಥರು ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಈ ಶ್ರೇಷ್ಠವಾದ ರಾಯಣ್ಣನ ಕಲ್ಲಿನ ಕೋಟೆಯನ್ನು ತಯಾರಿಸಲಾಗಿದೆ.

-ಡಾ.ರಾಜೇಂದ್ರ ಸಣ್ಣಕ್ಕಿ, ಅಧ್ಯಕ್ಷರು,ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನ ಸಮಿತಿ, ಕೌಜಲಗಿ