ಸಾರಾಂಶ
ಜಾನಪದ ಸಾಹಿತ್ಯದಲ್ಲಿ ವರ್ತಮಾನದ ಸ್ಪಂದನೆಯಿತ್ತು, ಉಳಿದ ಸಾಹಿತ್ಯ ಪ್ರಕಾರಗಳಿಗಿಂತ ಭಿನ್ನವಾಗಿ ಅಕ್ಷರರಹಿತ ವರ್ಗದ ಅನುಭವದ ಮೇಲೆ ಬೆಳಕು ಚೆಲ್ಲಿತ್ತು. ಶಿಕ್ಷಣದಿಂದ ವಂಚಿತರಾದ ಮಹಿಳೆಯರನ್ನು, ಶೋಷಿತರನ್ನು ಉದ್ದೇಶಿಸಿ ಹಿಂದಿನ ಅಕ್ಷರವಂತರು ಸಾಹಿತ್ಯ ರೂಪಿಸಿರಲಿಲ್ಲ. ಹೀಗಾಗಿಯೇ ಜಾನಪದ ಸಾಹಿತ್ಯ ಭಿನ್ನವಾಗಿ ನಿಲ್ಲುತ್ತದೆ. ವಾಸ್ತವವನ್ನು ತಿಳಿಸುತ್ತದೆ.
ಕನ್ನಡಪ್ರಭ ವಾರ್ತೆ ಮೈಸೂರು
ಸಾಹಿತ್ಯದ ಓದು ನಮ್ಮನ್ನು ಎಚ್ಚರವಾಗಿರುಸುತ್ತದೆ. ಸಹಬಾಳ್ವೆಯ ಬದುಕಿಗೆ ಪ್ರೇರೇಪಿಸುತ್ತದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿವಿ ಅಕ್ಕಮಹಾದೇವಿ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ನಿರ್ದೇಶಕಿ ಪ್ರೊ. ಕವಿತಾ ರೈ ತಿಳಿಸಿದರು.ನಗರದ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಜಯಲಕ್ಷ್ಮಮ್ಮಣ್ಣಿ ಸಭಾಂಗಣದಲ್ಲಿ ಕನ್ನಡ ವಿಭಾಗ, ಕನ್ನಡ ಸಂಘ ಹಾಗೂ ಆಂತರಿಕ ಗುಣಮಟ್ಟ ಭರವಸಾ ಕೋಶದ (ಐಕ್ಯೂಎಸಿ) ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಸಾಹಿತ್ಯ ಮತ್ತು ರಂಗಭೂಮಿ ವರ್ತಮಾನದ ಸ್ಪಂದನೆ ಕುರಿತ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.
ಜಾನಪದ ಸಾಹಿತ್ಯದಲ್ಲಿ ವರ್ತಮಾನದ ಸ್ಪಂದನೆಯಿತ್ತು, ಉಳಿದ ಸಾಹಿತ್ಯ ಪ್ರಕಾರಗಳಿಗಿಂತ ಭಿನ್ನವಾಗಿ ಅಕ್ಷರರಹಿತ ವರ್ಗದ ಅನುಭವದ ಮೇಲೆ ಬೆಳಕು ಚೆಲ್ಲಿತ್ತು. ಶಿಕ್ಷಣದಿಂದ ವಂಚಿತರಾದ ಮಹಿಳೆಯರನ್ನು, ಶೋಷಿತರನ್ನು ಉದ್ದೇಶಿಸಿ ಹಿಂದಿನ ಅಕ್ಷರವಂತರು ಸಾಹಿತ್ಯ ರೂಪಿಸಿರಲಿಲ್ಲ. ಹೀಗಾಗಿಯೇ ಜಾನಪದ ಸಾಹಿತ್ಯ ಭಿನ್ನವಾಗಿ ನಿಲ್ಲುತ್ತದೆ. ವಾಸ್ತವವನ್ನು ತಿಳಿಸುತ್ತದೆ ಎಂದರು.ಹೆಣ್ಣಿನ ಬದುಕನ್ನು ಅರಿತುಕೊಳ್ಳಲು, ಪಿತೃಸತ್ತೆಯು ಆಕೆಯ ಮೇಲೆ ಹೇರಿದ್ದ ನಿಯಮಗಳ ಮಾಹಿತಿಯು ಜಾನಪದ, ಗಾದೆ, ಹಲವು ಕಾದಂಬರಿಗಳ ಪಾತ್ರಗಳಿಂದ ತಿಳಿಸುತ್ತದೆ. ಮಹಿಳೆಯ ಮನದೊಳಗೆ ರೂಢಿಗತ ಭಾವನೆಯನ್ನು ಹೇಗೆ ತುಂಬಲಾಗುತ್ತಿತ್ತು ಎಂಬುದನ್ನು ವಿವರಿಸುತ್ತದೆ ಎಂದರು.
ಅಸಮಾನತೆಯ ಎಲ್ಲಾ ಪ್ರಭಾವದಿಂದ ಮುಕ್ತಳಾದ ಅಕ್ಕಮಹಾದೇವಿಯು ವರ್ತಮಾನಕ್ಕೆ ಸ್ಪಂದಿಸುವುದನ್ನು ಆಕೆಯ ಪ್ರತಿರೋಧದ ವಚನಗಳಲ್ಲಿ ಕಾಣಬಹುದು. ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ ಎಂಬ ಕುವೆಂಪು ಅವರ ವಾಕ್ಯವೂ ನಮ್ನನ್ನು ಸದಾ ಎಚ್ಚರಿಸಬೇಕು. ಗಂಡು ಹೆಣ್ಣು ಎಂದಿಗೂ ಸಮಾನರು ಎಂದು ಅವರು ಹೇಳಿದರು.ರಂಗ ನಿರ್ದೇಶಕಿ ಗೀತಾ ಮೋಂಟಡ್ಕ ಮಾತನಾಡಿ, ರಂಗಭೂಮಿ ಸಮೂಹ ಶಕ್ತಿಯಿಂದ ನಡೆಯುತ್ತದೆ. ಹೀಗಾಗಿ, ಅಲ್ಲಿ ಸಮಾನತೆ ಬಗ್ಗೆ ಚರ್ಚೆ ಸಾಧ್ಯವಾಗುತ್ತದೆ. ಎಲ್ಲರೂ ಒಟ್ಟಾಗಿ ಕಾರ್ಯ ನಿರ್ವಹಿಸುವುದೇ ಅಲ್ಲಿನ ಚಾಲಕ ಶಕ್ತಿ. ಸಾಹಿತ್ಯದ ಅಧ್ಯಯನದಿಂದ ನಾಟಕದ ಬಗ್ಗೆ ಹೆಚ್ಚು ಅರಿವು ಮೂಡುತ್ತದೆ ಎಂದರು.
ಮಹಾರಾಣಿ ಮಹಿಳಾ ಕಲಾ ಕಾಲೇಜು ಪ್ರಾಂಶುಪಾಲೆ ಪ್ರೊ.ಎಂ. ವಿಜಯಮ್ಮ, ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಎಂ. ದೇವಮ್ಮಣ್ಣಿ, ಸ್ನಾತಕೋತ್ತರ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಡಿ. ಸುಂದರಿ, ಐಕ್ಯೂಎಸಿ ಸಂಚಾಲಕ ಡಾ.ಎನ್. ಪ್ರಕಾಶ್ ಇದ್ದರು.