ಸಾರಾಂಶ
ಬೆಂಗಳೂರು : ಹಾಸನ ಜಿಲ್ಲೆಯಲ್ಲಿ ಹಠಾತ್ ಹೃದಯಾಘಾತ ಪ್ರಕರಣ ಹೆಚ್ಚಾಗಿ ಆತಂಕ ಸೃಷ್ಟಿಯಾಗಿದ್ದ ಬಗ್ಗೆ ಡಾ। ಕೆ.ಎಸ್. ರವೀಂದ್ರನಾಥ್ ನೇತೃತ್ವದ ತಜ್ಞರ ಸಮಿತಿ ಗುರುವಾರ ಪರಿಶೋಧನಾ ವರದಿ ಸಲ್ಲಿಸಿದೆ. ಮೇ ಮತ್ತು ಜೂನ್ ತಿಂಗಳಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ 24 ಸಾವು ಪ್ರಕರಣಗಳಲ್ಲಿ 20 ಮಂದಿಗೆ ಮಾತ್ರ ಹೃದಯ ಸಂಬಂಧಿ ಕಾಯಿಲೆ ಕಾರಣ. ಹಿಂದಿನ ಪ್ರಕರಣಗಳಿಗೆ ಹೋಲಿಸಿದರೆ ಹಾಸನ ಹಾಗೂ ರಾಜ್ಯಮಟ್ಟದಲ್ಲೆಲ್ಲೂ ಹೃದಯಾಘಾತದಿಂದ ಸಾವು ಹೆಚ್ಚಾಗಿಲ್ಲ ಎಂದು ವರದಿ ಸ್ಪಷ್ಟಪಡಿಸಿದೆ.
ಇದಲ್ಲದೆ ಹಾಸನದ 20 ಸಾವುಗಳಲ್ಲಿ 10 ಸಾವು ಮಾತ್ರ ಹೃದಯಾಘಾತದಿಂದ ಆದ ಸಾವು ಎಂದು ದೃಢಪಟ್ಟಿದೆ. ಇನ್ನು 10 ಸಾವುಗಳ ಕಾರಣಕ್ಕೆ ಹೃದಯ ಸಂಬಂಧಿ ಸಮಸ್ಯೆ ಕಾರಣ ಎಂಬ ಸುಳಿವು ಮಾತ್ರ ಇದೆ ಎನ್ನಲಾಗುತ್ತಿದ್ದರೂ ನಿಖರ ಕಾರಣ ಗೊತ್ತಾಗುತ್ತಿಲ್ಲ ಎಂದಿದೆ.
ಆದರೆ, 19, 21, 23, 32, 37, 38 ವರ್ಷದ ಕಿರಿ ವಯಸ್ಸಿನವರು ಹೃದಯಾಘಾತಕ್ಕೆ ಬಲಿಯಾಗಿರುವುದು ಆತಂಕದ ವಿಷಯ. ಇವರಲ್ಲಿ ಬಹುತೇಕರಿಗೆ ಹೃದಯ ಸಂಬಂದಿ ಕಾಯಿಲೆಯ ಪೂರ್ವ ಪರೀಕ್ಷೆ ನಡೆಸಿಲ್ಲ. ಇದರಲ್ಲಿ ಕೆಲವರು ನಿದ್ರೆಯಲ್ಲಿದ್ದಾಗಲೇ ಹಾಗೂ ಕೆಲವರು ಚಿಕ್ಕ ಪುಟ್ಟ ರೋಗಲಕ್ಷಣ ಬೆನ್ನಲ್ಲೇ ಹಠಾತ್ ಹೃದಯಾಘಾತ ಆಗಿ ಮೃತಪಟ್ಟಿದ್ದಾರೆ. ಹೀಗಾಗಿ ಈ ಬಗ್ಗೆ ಗಂಭೀರ ಮುನ್ನೆಚ್ಚರಿಕೆ ವಹಿಸಬೇಕಿದೆ ಎಂದು ಎಚ್ಚರಿಕೆ ನೀಡಲಾಗಿದೆ.
ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಗುರುವಾರ ತಜ್ಞರ ಸಮಿತಿ ಮುಖ್ಯಸ್ಥ ಹಾಗೂ ಜಯದೇವ ಆಸ್ಪತ್ರೆ ನಿರ್ದೇಶಕ ರವೀಂದ್ರನಾಥ್ ಅವರು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ವರದಿ ಸಲ್ಲಿಸಿದರು.
ವರದಿಯಲ್ಲೇನಿದೆ?:
ಹಾಸನದ 20 ಹೃದಯಾಘಾತದ ಸಾವು ಪ್ರಕರಣಗಳಲ್ಲೂ 10 ಸಾವು ಮಾತ್ರ ಖಚಿತ ಹೃದಯಾಘಾತದಿಂದ ಉಂಟಾಗಿದೆ. ಉಳಿದ 10 ಸಾವು ಪ್ರಕರಣಗಳಿಗೆ ಹೃದಯಸಂಬಂಧಿ ಸಮಸ್ಯೆ ಕಾರಣವಾಗಿರಬಹುದು ಎಂಬ ಸುಳಿವು ಮಾತ್ರ ಇದೆ. ಒಟ್ಟು ಸಾವಿನಲ್ಲಿ ಶೇ.75 ಕ್ಕಿಂತ ಹೆಚ್ಚು ಮಂದಿಗೆ ಧೂಮಪಾನ, ಮದ್ಯಪಾನ, ಬೊಜ್ಜು, ಮಧುಮೇಹ, ಅಧಿಕ ರಕ್ತದೊತ್ತಡದಂತಹ ಹೈರಿಸ್ಕ್ ಫ್ಯಾಕ್ಟರ್ ಇತ್ತು. ಹೀಗಾಗಿ ಹೆಚ್ಚು ಆತಂಕಪಡುವ ಅಗತ್ಯವಿಲ್ಲ. ಆದರೆ ಕಡಿಮೆ ವಯಸ್ಸಿನವರಲ್ಲಿ ಹೃದ್ರೋಗ ಹೆಚ್ಚಳ ಆಗಿರುವ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸಬೇಕಿದೆ ಎಂದು ಸ್ಪಷ್ಟಪಡಿಸಿದೆ.
ಹಾಸದನ ಒಟ್ಟು 20 ಸಾವುಗಳಲ್ಲಿ, 10 ಸಾವು ಖಚಿತ ಹೃದಯ ಸಂಬಂಧಿ ಸಾವುಗಳು. ಇವರಲ್ಲಿ 3 ಮಂದಿಗೆ ಈಗಾಗಲೇ ಹೃದಯ ಕಾಯಿಲೆ ಇತ್ತು. ಒಬ್ಬರು ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು, ಒಬ್ಬರು ಆಂಜಿಯೋಪ್ಲ್ಯಾಸ್ಟಿ, ಮತ್ತೊಬ್ಬರು ಡೈಲೇಟೆಡ್ ಕಾರ್ಡಿಯೊಮಯೋಪತಿ (ಹೃದಯ ವೈಫಲ್ಯ) ಹೊಂದಿದ್ದರು. 7 ಹೃದಯ ಸಂಬಂಧಿ ಸಾವುಗಳಲ್ಲಿ 4 ಮರಣೋತ್ತರ ಪರೀಕ್ಷೆಗಳಿಂದ ದೃಢಪಟ್ಟಿವೆ ಮತ್ತು 3 ಇಸಿಜಿ ಆಧಾರಿತವಾಗಿವೆ. ಇನ್ನುಳಿದ 10 ಸಾವುಗಳು ‘ಸಂಭವನೀಯ ಹೃದಯ ಸಂಬಂಧಿ ಸಾವುಗಳು’ ಎಂದು ಪರಿಗಣಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಹೃದಯಾಘಾತ ಪ್ರಕರಣ ಹೆಚ್ಚಳ ಆಗಿಲ್ಲ:
ಕಳೆದೆರಡು ವರ್ಷಗಳಿಗೆ ಹೋಲಿಸಿದರೆ ಮೇ ಮತ್ತು ಜೂನ್ ತಿಂಗಳಲ್ಲಿ 2024ರಲ್ಲಿ 315 ಮಂದಿ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದು, 19 ಮಂದಿ ಮೃತಪಟ್ಟಿದ್ದಾರೆ. 2025ರಲ್ಲಿ ಇದೇ ಅವಧಿಯಲ್ಲಿ 20 ಮಂದಿ ಮೃತಪಟ್ಟಿದ್ದಾರೆ. ಹೀಗಾಗಿ ಆಸ್ಪತ್ರೆಗೆ ದಾಖಲಾದ ಪ್ರಕರಣಗಳಲ್ಲಿ ಸಾವಿಗೀಡಾದ ಪ್ರಮಾಣ ಕಳೆದ ವರ್ಷಕ್ಕಿಂತ (ಶೇ.6.03) ಈ ವರ್ಷ ಕಡಿಮೆ (ಶೇ.5.60) ಆಗಿದೆ ಎಂದು ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ಈ ವರ್ಷ ಜನವರಿಯಲ್ಲಿ 11 ಮಂದಿ, ಫೆಬ್ರವರಿಯಲ್ಲಿ 10, ಮಾರ್ಚ್ 10, ಏಪ್ರಿಲ್ 9, ಮೇ 9, ಜೂನ್ 11 ಮಂದಿ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. ಹೀಗಾಗಿ ಪ್ರಕರಣ ಹೆಚ್ಚಳ ಆಗಿಲ್ಲ. ಜತೆಗೆ ಮೈಸೂರು, ಕಲಬುರಗಿ ಹಾಗೂ ಬೆಂಗಳೂರು ಜಯದೇವ ಆಸ್ಪತ್ರೆಗಳಲ್ಲೂ ಕಳೆದ ಆರು ತಿಂಗಳಲ್ಲಿ ಹೃದಯಾಘಾತ ಪ್ರಕರಣಗಳಲ್ಲಿ ಹೆಚ್ಚಳ ಕಂಡಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.
ಆಸ್ಪತ್ರೆಗೆ ಬರುವ ಮೊದಲೇ ಸಾವು:
ಅಧ್ಯಯನ ನಡೆಸಿರುವ ಹೃದಯಾಘಾತ ಪ್ರಕರಣಗಳಲ್ಲಿ ನಾಲ್ಕು ಮಂದಿ ನಿದ್ರೆಯಲ್ಲಿ ಹಾಗೂ ಯಾವುದೇ ರೋಗಲಕ್ಷಣ ಇಲ್ಲದೆ ಏಕಾಏಕಿ ಮೃತಪಟ್ಟಿದ್ದಾರೆ. ಉಳಿದ ಪ್ರಕರಣಗಳಲ್ಲಿ ಸಾವಿಗೂ ಮುನ್ನ ಯಾವುದೇ ಚಿಕಿತ್ಸಾ ಸೌಲಭ್ಯಕ್ಕೆ ಕರೆತರಲಾಗಿಲ್ಲ. ಆಸ್ಪತ್ರೆಗಳಲ್ಲಿ 'ಮೃತಪಟ್ಟವರು' ' ಎಂದು ಘೋಷಿಸಿದವರಲ್ಲಿಯೂ ಔಪಚಾರಿಕ ಮರಣೋತ್ತರ ಪರೀಕ್ಷೆಗಳನ್ನು ನಡೆಸಿಲ್ಲ. ಮರಣೋತ್ತರ ದತ್ತಾಂಶದ ಕೊರತೆ, ಅಗತ್ಯ ಕ್ಲಿನಿಕಲ್ ತನಿಖೆಗಳ ಅಲಭ್ಯತೆ (ಇಸಿಜಿಗಳು, ಕಾರ್ಡಿಯಾಕ್ ಎಂಜೈಮ್‌ಗಳು), ಮತ್ತು ಕುಟುಂಬ ಸದಸ್ಯರಿಂದ ಸೀಮಿತ ಸಹಕಾರವು ಸಾವಿನ ನಿರ್ದಿಷ್ಟ ಕಾರಣ ತಿಳಿಯಲು ಕಷ್ಟಕರವಾಗಿದೆ ಎಂದು ವರದಿ ಹೇಳಿದ್ದು, ಇನ್ನು ಮುಂದೆ ಮಾಹಿತಿ ಬಗ್ಗೆ ಮುನ್ನೆಚ್ಚರಿಕೆ ಅಗತ್ಯ ಎಂದು ಹೇಳಲಾಗಿದೆ.
ಬೆಂಗಳೂರಲ್ಲಿ 6 ತಿಂಗಳಲ್ಲಿ 512 ಮಂದಿ ಹೃದಯಾಘಾತಕ್ಕೆ ಬಲಿ
ಬೆಂಗಳೂರು, ಮೈಸೂರು ಹಾಗೂ ಕಲಬುರಗಿ ಹೃದ್ರೋಗ ಆಸ್ಪತ್ರೆ ವ್ಯಾಪ್ತಿಯಲ್ಲಿನ ಕಳೆದ ಆರು ತಿಂಗಳ (ಜನವರಿ-ಜೂನ್) ಪ್ರಕರಣಗಳ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಿದ್ದು, ಆರು ತಿಂಗಳಲ್ಲಿ ಬೆಂಗಳೂರಿನಲ್ಲಿ 512 ಮಂದಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಜನವರಿಯಲ್ಲಿ 2,165 ಹೃದ್ರೋಗ ಪ್ರಕರಣಗಳಲ್ಲಿ 97, ಫೆಬ್ರವರಿಯಲ್ಲಿ 1,931 ಪ್ರಕರಣಗಳಲ್ಲಿ 80, ಮಾರ್ಚ್‌ನಲ್ಲಿ 2047ರಲ್ಲಿ 96, ಏಪ್ರಿಲ್‌ನಲ್ಲಿ 2026 ಪ್ರಕರಣಗಳಲ್ಲಿ 84 ಮಂದಿ, ಮೇ ತಿಂಗಳಲ್ಲಿ 1971ರಲ್ಲಿ 78 ಮಂದಿ ಹಾಗೂ ಜೂನ್‌ನಲ್ಲಿ 1917 ಹೃದಯಾಘಾತ ಪ್ರಕರಣಗಳಲ್ಲಿ 77 ಮಂದಿ ಸಾವಿಗೀಡಾಗಿದ್ದಾರೆ.
ಮೈಸೂರಿನಲ್ಲಿ ಜನವರಿಯಲ್ಲಿ 83, ಫೆಬ್ರವರಿ 69, ಮಾರ್ಚ್ 52, ಏಪ್ರಿಲ್ 60, ಮೇ 62, ಜೂನ್‌ನಲ್ಲಿ 49 ಮಂದಿ ಸಾವಾಗಿದೆ. ಕಲಬುರಗಿಯಲ್ಲಿ ಜನವರಿಯಲ್ಲಿ 11, ಫೆಬ್ರವರಿಯಲ್ಲಿ 19, ಮಾರ್ಚ್, ಏಪ್ರಿಲ್‌ನಲ್ಲಿ ತಲಾ 21, ಮೇ 23, ಜೂನ್‌ನಲ್ಲಿ 28 ಸಾವು ಸಂಭವಿಸಿದೆ.
* ಶಿಫಾರಸುಗಳೇನು?
- ಆಟೋ ಹಾಗೂ ಕ್ಯಾಬ್ ಚಾಲಕರಿಗೆ ಹೃದಯ ತಪಾಸಣೆ ನಡೆಸಬೇಕು.
- ಚಿಕ್ಕ ವಯಸ್ಸಿನವರಲ್ಲಿ ಹೃದ್ರೋಗ ಸಮಸ್ಯೆ ಹೆಚ್ಚಳ ಆತಂಕಕಾರಿ
- ಆರೋಗ್ಯ ಶಿಕ್ಷಣ, ಶಾಲಾ ಹಂತದಲ್ಲೇ ಮಕ್ಕಳಿಗೆ ಹೃದಯ ತಪಾಸಣೆ ಅಗತ್ಯ
- ಹೃದಯಾಘಾತ/ಹಠಾತ್ ಸಾವು ಆದರೆ ಪೋಸ್ಟ್‌ಮಾರ್ಟಂ ಕಡ್ಡಾಯ ಮಾಡಿ
- ಹಠಾತ್ ಹೃದಯಾಘಾತದ ಸಾವಿನ ಕಾರಣ ತಿಳಿಯಲು ಅಟಾಪ್ಸಿ ಆಗಬೇಕು.
- ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಹೃದಯ ಕಾಯಿಲೆ ಚಿಕಿತ್ಸೆ ಸೌಲಭ್ಯ ಅಗತ್ಯ
- ಇಜಿ ಮೆಷಿನ್ ಹಾಗೂ ತುರ್ತು ಔಷಧಿಗಳಾದ ಇಕೊಸ್ಪ್ರಿನ್ ಇತ್ಯಾದಿ ಇರಬೇಕು
- ಕ್ಲೊಪಿಡೋಗ್ರೆಲ್, ಅಟೊರ್ವಸ್ಟಾಟಿನ್, ಹೆಪರಿನ್ ಔಷಧಗಳ ಲಭ್ಯತೆ ಅಗತ್ಯ
- ವಿದ್ಯಾರ್ಥಿಗಳು, ಶಿಕ್ಷಕರು, ದೈಹಿಕ ಶಿಕ್ಷಕರಿಗೆ ಸಿಪಿಆರ್ ತರಬೇತಿ ನೀಡಬೇಕು
- ಸರ್ಕಾರಕ್ಕೆ ನೀಡಿದ ವರದಿಯಲ್ಲೇನಿದೆ?
- - ಹಾಸನದಲ್ಲಿ ಹೃದಯಾಘಾತ ಹೆಚ್ಚಳ ಕಾರಣ ಅಧ್ಯಯನ ನಡೆದಿತ್ತು
- - 2 ತಿಂಗಳಲ್ಲಾಗಿದ್ದ 24 ಸಾವುಗಳ ಪರಿಶೀಲಿಸಿದ್ದ ತಜ್ಞರ ಸಮಿತಿ
- - ಇದರಲ್ಲಿ 20 ಮಂದಿಗಷ್ಟೇ ಹೃದಯ ಕಾಯಿಲೆ ಎಂಬುದು ದೃಢ
- - ಈ 20ರಲ್ಲಿ ಖಚಿತ ಹೃದಯಾಘಾತದಿಂದ ಸಂಭವಿಸಿದ ಸಾವು 10
- - ಉಳಿದ 10 ಸಾವಿಗೆ ನಿಖರ ಕಾರಣವಿಲ್ಲ, ಹೃದಯ ಕಾಯಿಲೆ ಶಂಕೆ