ಸಾರಾಂಶ
ಕೊಪ್ಪಳ: ಪಂಚಮಸಾಲಿ ಸಮಾಜದ ಹೋರಾಟಕ್ಕೆ ನ್ಯಾಯ ನೀಡಬೇಕಾದ ಸರ್ಕಾರ ಪ್ರತಿಭಟನಾ ನಿರತರ ಮೇಲೆ ಹಲ್ಲೆ ಮಾಡಿದ್ದು, ಕೂಡಲೇ ಕ್ಷಮೆ ಕೇಳಬೇಕು. ನಾವು ಹಲ್ಲೆಯಾದವರ ಮನೆ, ಮನೆಗೆ ಹೋಗಿ, ಧೈರ್ಯ ತುಂಬುತ್ತೇವೆ. ಈ ಸರ್ಕಾರದ ವಿರುದ್ಧ ಜಾಗೃತಿ ಮೂಡಿಸುತ್ತೇವೆ ಎಂದು ಕೂಡಲಸಂಗಮದ ಪಂಚಮಸಾಲಿ ಸಮಾಜದ ಶ್ರೀ ಬಸವಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಸರ್ಕಾರ 2ಎ ಮೀಸಲಾತಿ ಕೊಡಲು ಸಾಧ್ಯವೇ ಇಲ್ಲ ಎನ್ನುತ್ತಿದೆ. ಅಷ್ಟೇ ಅಲ್ಲ, ನಮ್ಮ ಪಂಚಮಸಾಲಿ ಸಮಾಜ ಸೇರಿದಂತೆ ಲಿಂಗಾಯತ ಸಮಾಜಕ್ಕೆ ದ್ರೋಹ ಬಗೆದಿದೆ. ಹೋರಾಟ ಮಾಡಿದವರ ಮೇಲೆ ಹಲ್ಲೆ ಮಾಡಿಸಿ, ದೊಡ್ಡ ತಪ್ಪು ಮಾಡಿದೆ ಎಂದರು.ನಾವು ಇಷ್ಟಕ್ಕೆ ಸುಮ್ಮನೇ ಬಿಡುವುದಿಲ್ಲ. ಈ ಸರ್ಕಾರದಿಂದ ನಾವು ಮೀಸಲಾತಿ ನಿರೀಕ್ಷೆ ಮಾಡುವುದಿಲ್ಲ. ಆದರೆ, ನಮಗೆ ಯಾವ ಸರ್ಕಾರ ಮೀಸಲಾತಿ ಕೊಡುತ್ತದೆಯೋ ಅವರನ್ನು ನಾವು ಬೆಂಬಲಿಸುವ ಕುರಿತು ಹಳ್ಳಿ, ಹಳ್ಳಿ ಸುತ್ತಿ ಜಾಗೃತಿ ಮೂಡಿಸುತ್ತೇವೆ ಎಂದರು.
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು ಮತ್ತು ಕೇಂದ್ರದಲ್ಲಿ ಲಿಂಗಾಯತ ಸಮುದಾಯಕ್ಕೆ ಓಬಿಸಿ ಸೌಲಭ್ಯ ನೀಡಬೇಕು ಎನ್ನುವುದು ನಮ್ಮ ಬೇಡಿಕೆಯಾಗಿದೆ. ಕನಿಷ್ಠ ಈಗಾಗಲೇ ನೀಡಿರುವ 2ಡಿ ಯನ್ನಾದರೂ ಕಾರ್ಯಗತ ಮಾಡಬೇಕು ಎನ್ನುವುದು ನಮ್ಮ ಬೇಡಿಕೆ ಎಂದರು.ನಾನು ಉತ್ತರಿಸಲ್ಲ:
ಶಾಸಕ ವಿಜಯಾನಂದ ಕಾಶಪ್ಪನವರು ಮಾಡಿರುವ ಆರೋಪಕ್ಕೆ ನಾನು ಉತ್ತರಿಸುವುದಿಲ್ಲ. ಪಂಚಮಸಾಲಿ ಸಮಾಜದವರು 1.30 ಕೋಟಿ ಜನರು ಇದ್ದಾರೆ ಎನ್ನುವುದಾದರೇ ಅದರಲ್ಲಿ 1.2999999 ಇದ್ದಾರೆ ಎಂದು ತಿಳಿದುಕೊಂಡು ಅವರ ಕುರಿತು ಮಾತನಾಡುವುದಿಲ್ಲ ಎಂದು ಪರೋಕ್ಷವಾಗಿ ವಿಜಯಾನಂದ ಕಾಶಪ್ಪನವರ ಕುರಿತು ಹೇಳಿದರು.ನಾನು ಬಿಜೆಪಿ ಸರ್ಕಾರ ಇದ್ದಾಗ ಕಾಂಗ್ರೆಸ್ ಪಕ್ಷದ ಪರವಾಗಿದ್ದಾರೆ, ಅದಕ್ಕಾಗಿ ಹೋರಾಟ ಮಾಡುತ್ತಾರೆ ಎಂದರು. ಈಗ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಮಾಡಿದರೇ ಬಿಜೆಪಿಯವರು ಎನ್ನುತ್ತಾರೆ. ಇದಕ್ಕೆಲ್ಲ ಉತ್ತರ ನೀಡುವ ಪ್ರಶ್ನೆಯೇ ಇಲ್ಲ ಎಂದರು.
ಎಲ್ಲ ಪಕ್ಷದ ಶಾಸಕರು ನಮ್ಮ ಜೊತೆಯಲ್ಲಿದ್ದಾರೆ. ಕೆಲವರು ಗಟ್ಟಿ ನಿಲುವು ತೆಗೆದುಕೊಂಡಿಲ್ಲ. ಇರಲಿ, ಈಗ ನಮ್ಮ ಮುಂದಿನ ಹೋರಾಟ ಮಾಡುವ ಕುರಿತು ಚಿಂತನೆ ಮಾಡುತ್ತಿದ್ದೇವೆ ಹೊರತು ಈ ಗೊಂದಲಗಳ ಬಗ್ಗೆ ಅಲ್ಲಾ ಎಂದರು.ನಾನು ಖಂಡಿಸುತ್ತೇನೆ:
ಸಚಿವೆ ಲಕ್ಷ್ಮೀ ಹೇಬ್ಬಾಳ್ಕರ್ ಅವರ ಬಗ್ಗೆ ಕೆಟ್ಟ ಪದ ಬಳಕೆ ಮಾಡಿರುವುದನ್ನು ನಾವು ಸಹಿಸುವದಿಲ್ಲ. ಇದನ್ನು ಖಂಡಿಸುತ್ತೇವೆ ಎಂದು ಸ್ವಾಮೀಜಿ ಹೇಳಿದರು.ನನಗೆ ಇರುವ ಮಾಹಿತಿಯ ಪ್ರಕಾರ ವಿಪ ಸದಸ್ಯ ಸಿ.ಟಿ. ರವಿ ಅವರು ಕೆಟ್ಟ ಪದ ಬಳಕೆ ಮಾಡಿದ್ದಾರೆ ಎಂದು. ಹೀಗಾಗಿ, ನಾನು ಅದನ್ನು ಖಂಡಿಸುತ್ತೇನೆ. ಭಾರತದಲ್ಲಿ ಯಾವುದೇ ಮಹಿಳೆಗೆ ಅಪಮಾನ ಮಾಡುವುದನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದರು.
;Resize=(128,128))
;Resize=(128,128))