ಪಟ್ಟೆದಂಚು ಸೀರೆಗಳಿಗೆ ಮಾನ್ಯತೆ-ನೇಕಾರಿಕೆಗೆ ಬಲ?

| Published : Apr 13 2025, 02:08 AM IST

ಸಾರಾಂಶ

ತಲೆತಲಾಂತರದಿಂದ (ಸ್ವಾತಂತ್ರ್ಯ ಪೂರ್ವ-೧೯೪೪) ದಿಂದಲೂ ನೇಕಾರಿಕೆ ಉಸಿರಾಗಿಸಿಕೊಂಡು ಸಹಕಾರಿ ವಲಯದಲ್ಲಿ ವಿಶಿಷ್ಟ ಚಾಪು ಮೂಡಿಸುತ್ತಾ ಕೈಮಗ್ಗ ನೇಕಾರಿಕೆ ಮಾಡಿಕೊಂಡು ಬಂದ ಗಜೇಂದ್ರಗಡ ನೇಕಾರರ ಸಹಕಾರಿ ಉತ್ಪಾದಕ ಸಂಘ ತಯಾರಿಸಿದ ಪಟ್ಟೆದಂಚು ಸೀರೆಗೆ ಭೌಗೋಳಿಕ ಗುರುತು (ಜಿಐ) ಟ್ಯಾಗ್ ಸಿಕ್ಕಿದ್ದು, ಪಟ್ಟಣದ ಹಿರಿಮೆಯನ್ನು ರಾಷ್ಟ್ರಮಟ್ಟಕ್ಕೆ ತಲುಪಿಸಿದೆ.

ಎಸ್.ಎಂ. ಸೈಯದ್ಕನ್ನಡಪ್ರಭ ವಾರ್ತೆ ಗಜೇಂದ್ರಗಡ

ತಲೆತಲಾಂತರದಿಂದ (ಸ್ವಾತಂತ್ರ್ಯ ಪೂರ್ವ-೧೯೪೪) ದಿಂದಲೂ ನೇಕಾರಿಕೆ ಉಸಿರಾಗಿಸಿಕೊಂಡು ಸಹಕಾರಿ ವಲಯದಲ್ಲಿ ವಿಶಿಷ್ಟ ಚಾಪು ಮೂಡಿಸುತ್ತಾ ಕೈಮಗ್ಗ ನೇಕಾರಿಕೆ ಮಾಡಿಕೊಂಡು ಬಂದ ಗಜೇಂದ್ರಗಡ ನೇಕಾರರ ಸಹಕಾರಿ ಉತ್ಪಾದಕ ಸಂಘ ತಯಾರಿಸಿದ ಪಟ್ಟೆದಂಚು ಸೀರೆಗೆ ಭೌಗೋಳಿಕ ಗುರುತು (ಜಿಐ) ಟ್ಯಾಗ್ ಸಿಕ್ಕಿದ್ದು, ಪಟ್ಟಣದ ಹಿರಿಮೆಯನ್ನು ರಾಷ್ಟ್ರಮಟ್ಟಕ್ಕೆ ತಲುಪಿಸಿದೆ.ರಾಜ್ಯದ ೨ನೇ ದೊಡ್ಡ ಸೊಸೈಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಗಜೇಂದ್ರಗಡದ ನೇಕಾರರ ಸಹಕಾರಿ ಉತ್ಪಾದಕ ಸಂಘ ತಯಾರಿಸುವ ಸೀರೆಗಳು ಮಾರುಕಟ್ಟೆಯಲ್ಲಿ ಲಭ್ಯವಿರುವ ಸೀರೆಗಳಿಗೆ ಸವಾಲೊಡ್ಡುತ್ತವೆ. ವ್ಯಾಪಾರ ಕ್ಷೇತ್ರದಲ್ಲಿ ಪಟ್ಟೆದಂಚು ಸೀರೆ ಪ್ರಭಾವ ಗಟ್ಟಿಯಾಗಿದ್ದು, ದೇಶದ ಮಹಿಳೆಯರ ಗಮನ ಸೆಳೆದಿದೆ. ಈಗ ಪಟ್ಟೆದಂಚು ಸೀರೆಗಳಿಗೆ ಜಿಐ ಟ್ಯಾಗ್ ಸಿಕ್ಕಿದ್ದು, ನೇಕಾರ ಸಮೂಹದ ಖುಷಿಯನ್ನು ಇಮ್ಮಡಿಗೊಳಿಸಿದೆ.ಗಜೇಂದ್ರಗಡದಲ್ಲಿ ತಯಾರಾಗುವ ಸೀರೆಗಳು ರಾಷ್ಟ್ರದಾದ್ಯಂತ ಮಾರಾಟವಾಗುತ್ತಿವೆ. ೧೯೪೪ರಿಂದಲೂ ಅರ್ಥಾತ್ ಬ್ರಿಟಿಷರ ಕಾಲದಿಂದಲೂ ಗಜೇಂದ್ರಗಡದಲ್ಲಿ ೨೦೦೦ರ ವರೆಗೆ ಸುಮಾರು ೫,೯೭೦ ಸಂಖ್ಯೆಯಲ್ಲಿ ಕೈಮಗ್ಗಗಳಿದ್ದವು. ಆದರೆ ಆಧುನಿಕತೆಯ ಭರಾಟೆಯಿಂದ ಈಘ ೨೫೦ರ ಆಸುಪಾಸಿದೆ. ಈ ಭಾಗದಲ್ಲಿ ಕೈಮಗ್ಗ ನೇಕಾರಿಕೆ ಕ್ಷೀಣಿಸುತ್ತಿದೆ ಎಂಬುದಕ್ಕೆ ಇದು ಸಾಕ್ಷಿ. ಈ ನಡುವೆ ಈಗ ಜಿಐ ಟ್ಯಾಗ್‌ನಿಂದಾಗಿ ಮತ್ತೆ ನೇಕಾರಿಕೆ ಗತವೈಭವ ಮರುಕಳಿಸುವ ಆಸೆ ಚಿಗುರೊಡದಿದೆ.ಆರಂಭದಿಂದಲೂ ಇಲ್ಲಿಯ ನೇಕಾರಿಕೆ ಸದೃಢವಾಗಿ ನಿಲ್ಲುವ ಎಲ್ಲ ಪ್ರಯತ್ನ ಮಾಡುತ್ತಿದೆ. ಆದರೆ ಹೊಸ ಕೃತಕ, ವಿನ್ಯಾಸದ ಬಟ್ಟೆಗಳು ಜನರನ್ನು ಆಕರ್ಷಿಸುತ್ತಿವೆ. ಶುದ್ಧ ಖಾದಿ ಸೀರೆಗಳು, ಬಟ್ಟೆಗಳು ನೈಸರ್ಗಿಕ ಬಣ್ಣ ಬಳಕೆಯಿಂದ ತನ್ನ ಅಸ್ತಿತ್ವ ಉಳಿಸಿಕೊಂಡಿವೆ. ಅದಕ್ಕೆ ಇಲ್ಲಿಯ ಪಟ್ಟೆದಂಚು ಸೀರೆಗಳೇ ಸಾಕ್ಷಿ.

ಪಟ್ಟಣದಲ್ಲಿ ಈ ಹಿಂದೆ ನೇಕಾರಿಕೆ ಶೇ.೯೦ರಷ್ಟು ಕುಟುಂಬಗಳಲ್ಲಿತ್ತು. ಆದರೆ ಈಗ ಶೇ. ೩೦ರಷ್ಟು ಜನರು ತಮ್ಮ ಕುಲಕಸುಬನ್ನು ಬಿಟ್ಟಿದ್ದಾರೆ. ಕೆಲವರು ನೇಕಾರಿಕೆಯನ್ನು ಉಪಕಸುಬನ್ನಾಗಿ ಮಾಡಿಕೊಂಡಿದ್ದಾರೆ. ಮನೆಯಲ್ಲಿಯೇ ನೇಕಾರಿಕೆ ಜೀವಂತವಾಗಿರಿಸಿಕೊಂಡು, ತಲೆತಲಾಂತರದಿಂದ ಬಂದಿರುವ ಕಲೆ ಉಳಿಸುವ ಪ್ರಯತ್ನದಲ್ಲಿದ್ದಾರೆ. ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಖಣಗಳನ್ನು ತಯಾರಿಸುವಲ್ಲಿ ಇಲ್ಲಿನ ನೇಕಾರರು ಹಿಂದೆ ಬಿದ್ದಿಲ್ಲ ಎಂಬುದು ವಿಶೇಷ.ವಿದ್ಯುತ್‌ ಮಗ್ಗ:ವಿದ್ಯುತ್ ಮಗ್ಗಗಳಲ್ಲಿ ಬಟ್ಟೆ ತಯಾರಿಕೆ ಸ್ಥಗಿತಗೊಂಡರೆ ಕೈ ಮಗ್ಗ ನೇಕಾರಿಕೆಗೆ ಬೆಲೆ ತಾನಾಗಿಯೇ ಬರುತ್ತದೆ. ವಿದ್ಯುತ್ ಮಗ್ಗಗಳಲ್ಲಿ ಯಾಂತ್ರೀಕರಣದಿಂದಾಗಿ ಕೈ ಮಗ್ಗ ಕ್ಷೇತ್ರವೂ ದಿನದಿಂದ ದಿನಕ್ಕೆ ನಶಿಸುತ್ತಿದೆ. ಕೈಮಗ್ಗ ನೇಕಾರಿಕೆ ಉಳಿಯಬೇಕು ಎಂಬ ಕಾರಣಕ್ಕೆ ಈ ಹಿಂದೆ ಹೆಗ್ಗೋಡು ಕೈಮಗ್ಗ ಮತ್ತು ಚರಕ ದೇಶಿ ಸಂಸ್ಥೆಯ ಸಂಸ್ಥಾಪಕ ಪ್ರಸನ್ನ ಸತ್ಯಾಗ್ರಹ ನಡೆಸಿದ್ದರು. ಪಟ್ಟಣದ ಗವಿಮಠದಿಂದ ೨೦೦ ಕಿಮೀ ಪಾದಯಾತ್ರೆ ನಡೆಸಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿದ್ದ ಮುಖ್ಯಮಂತ್ರಿ ಚಂದ್ರು, ಕೈಮಗ್ಗ ನೇಕಾರರು, ಸಾಮಾಜಿಕ ಕಾರ್ಯಕರ್ತರು, ಪರಿಸರವಾದಿಗಳು, ಲೇಖಕರು, ಕಲಾವಿದರು ಭಾಗವಹಿಸಿದ್ದರು.ಪಟ್ಟಿಯ ಅಂಚನ್ನು ಹೊಂದಿರುವ ಸೀರೆಗೆ ಪಟ್ಟೆದಂಚು ಎನ್ನುವ ಹೆಸರು ಬಂದಿದೆ. ಗಜೇಂದ್ರಗಡದ ನೇಕಾರ ಸಹಕಾರಿ ಉತ್ಪಾದಕರ ಸಂಘದಲ್ಲಿ ೧೩೦ ನೇಕಾರರು ಕೆಲಸ ಮಾಡುತ್ತಿದ್ದಾರೆ. ಇಲ್ಲಿಗೆ ಬಟ್ಟೆಗೆ ಬಳಸುವ ನೈಸರ್ಗಿಕ ಬಣ್ಣಗಳನ್ನು ಉತ್ಪಾದಿಸಲಾಗುತ್ತಿದೆ.

ನೇಕಾರರ ಸಹಕಾರಿ ಸಂಘ ಉಳಿಸಿಕೊಂಡು ಬಂದ ಹಿರಿಮೆ ಇಲ್ಲಿಯ ಜನರಿದೆ.ಸುಮಾರ ೪೦೦ ವರ್ಷಗಳ ಇತಿಹಾಸವಿರುವ ಪಟ್ಟೇದ ಅಂಚು ಸೀರೆಗಳಿಗೆ ಭೌಗೋಳಿಕ ಮಾನ್ಯತೆ ಸಿಕ್ಕಿದ್ದು ಸಂತಸ ತಂದಿದೆ. ೪೩ ಬಣ್ಣಗಳ ಮಾದರಿಯಲ್ಲಿ ತಯಾರಾಗುತ್ತಿರುವ ಪಟ್ಟೇದ ಅಂಚು ಸೀರೆಗಳಿಗೆ ಜಿಐ ಮಾನ್ಯತೆಯಿಂದಾಗಿ ಮಾರುಕಟ್ಟೆಯಲ್ಲಿ ಸೀರೆಗಳಿಗೆ ದರ ಹೆಚ್ಚಾದಲ್ಲಿ ನೇಕಾರರಿಗೂ ಅದರ ಲಾಭ ನೀಡುತ್ತೇವೆ.ಗಜೇಂದ್ರಗಡ ನೇಕಾರರ ಸಹಕಾರಿ ಉತ್ಪಾದಕ ಸಂಘ ಸಂಘದ ಕಾರ್ಯದರ್ಶಿ ಮಾರುತಿ ಶಾಬಾದಿ ಹೇಳುತ್ತಾರೆ.

ಗಜೇಂದ್ರಗಡ ನೇಕಾರರ ಸಹಕಾರಿ ಉತ್ಪಾದಕ ಸಂಘದ ಪಟ್ಟೇದ ಅಂಚು ಸೀರೆಗೆ ಭೌಗೋಳಿಕ ಮಾನ್ಯತೆಯಿಂದ ರಾಷ್ಟ್ರ ಮತ್ತು ಅಂತಾರಾಷ್ಟ್ರಿಯ ಮಟ್ಟದಲ್ಲಿ ಹೆಚ್ಚಿನ ಮಾರುಕಟ್ಟೆ ವಿಸ್ತರಿಸಲು ಸಹಕಾರಿಯಾಗಲಿದೆ. ಹೀಗಾಗಿ ನಮ್ಮ ಸೀರೆಗಳ ನಕಲಿಗೆ ಇನ್ನೂ ಕಡಿವಾಣ ಬಿದ್ದಂತಾಗಿದೆ ಎಂದು ಗಜೇಂದ್ರಗಡ ನೇಕಾರರ ಸಹಕಾರಿ ಉತ್ಪಾದಕ ಸಂಘದ ಅಧ್ಯಕ್ಷ ಅಶೋಕ ವನ್ನಾಲ ಹೇಳುತ್ತಾರೆ.