ಸಾರಾಂಶ
ಕೊಪ್ಪಳ ಬಳಿ ಬೃಹತ್ ಸ್ಟೀಲ್ ಕಾರ್ಖಾನೆ ಸ್ಥಾಪಿಸಲು ರಾಜ್ಯ ಸರ್ಕಾರ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಅನುಮತಿ ನೀಡಿದೆ. ಈಗಾಗಲೇ ಇರುವ ಕಾರ್ಖಾನೆಗಳಿಂದಾಗಿರುವ ದುಷ್ಪರಿಣಾಮ ಕುರಿತು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಫೆಬ್ರುವರಿ ತಿಂಗಳಲ್ಲಿ ಸರ್ಕಾರಕ್ಕೆ ಸಲ್ಲಿಸಿರುವ ಅಧ್ಯಯನ ವರದಿ ಮಾಹಿತಿ ಕನ್ನಡಪ್ರಭಕ್ಕೆ ದೊರಕಿದ್ದು ಇಂದಿನಿಂದ ಸರಣಿ ವರದಿ ಪ್ರಕಟಿಸುವ ಮೂಲಕ ಜನರಿಗೆ ತಲುಪಿಸಲಿದೆ.
ಸೋಮರಡ್ಡಿ ಅಳವಂಡಿ ಕೊಪ್ಪಳಈಗಾಗಲೇ ಕೊಪ್ಪಳ ಜಿಲ್ಲೆಯಲ್ಲಿರುವ ಕಾರ್ಖಾನೆಗಳಿಂದ ಸಾಕಷ್ಟು ತೊಂದರೆಯಾಗಿದ್ದು, ಜನರು ವಿವಿಧ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ, ಸದ್ಯ ಇರುವ ಕಾರ್ಖಾನೆಗಳಿಂದ ಆಗುವ ವಾಯುವಾಲಿನ್ಯ ತಡೆಯುವ ಮುನ್ನ ಹೊಸ ಸ್ಟೀಲ್ ಮತ್ತು ಸ್ಪಾಂಜ್ ಐರನ್ ಕಾರ್ಖಾನೆಗಳ ವಿಸ್ತರಣೆ ಮತ್ತು ಹೊಸ ಕಾರ್ಖಾನೆಗಳ ಸ್ಥಾಪನೆ ಸೂಕ್ತವಲ್ಲ.
ಇದು, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಕೊಪ್ಪಳ ತಾಲೂಕಿನ ಕಾರ್ಖಾನೆ ಬಾಧಿತ ಸ್ಥಳಗಳಲ್ಲಿ ಅಧ್ಯಯನ ಮಾಡಿ, ಸರ್ಕಾರಕ್ಕೆ ಶಿಫಾರಸು ಮಾಡಿದೆ.ಕೇಂದ್ರ ಸರ್ಕಾರದ ಸಚಿವಾಲಯ ವಿಜ್ಞಾನಿಗಳು, ಪರಿಸರ ತಜ್ಞರು ಸೇರಿದಂತೆ ತಜ್ಞರನ್ನೇ ಒಳಗೊಂಡಿರುವ ಸಮಿತಿ ಅಧ್ಯಯನ ಮಾಡಿ, ಫೆಬ್ರುವರಿ ತಿಂಗಳಲ್ಲಿ ವರದಿಯನ್ನು ಸಲ್ಲಿಕೆ ಮಾಡಿದೆ. ಇದರಲ್ಲಿ ಭಾರಿ ಅಘಾತಕಾರಿ ಅಂಶಗಳು ಇವೆ. ಅದರಲ್ಲೂ ಕೊಪ್ಪಳ ಬಳಿ ಇನ್ಮುಂದೆ ಸ್ಪಾಂಜ್ ಐರನ್ ಮತ್ತು ಉಕ್ಕು ಕಾರ್ಖಾನೆ ವಿಸ್ತರಣೆ ಮಾಡುವುದು ಮತ್ತು ಹೊಸದಾಗಿ ಸ್ಥಾಪಿಸುವುದು ಈಗಿರುವ ಸ್ಥಿತಿಯಲ್ಲಿ ಸರಿಯಲ್ಲ ಎಂದು ವರದಿಯಲ್ಲಿ ಸ್ಪಷ್ಟವಾಗಿ ಹೇಳಿದೆ.
ಸಚಿವಾಲಯದ ಅಧ್ಯಯನ ಸಮಿತಿ ಸುಮಾರು 48 ಪುಟಗಳ ಸುದೀರ್ಘ ವರದಿ ಸಲ್ಲಿಕೆ ಮಾಡಿ, 30ಕ್ಕೂ ಹೆಚ್ಚು ಶಿಫಾರಸು ಮಾಡಿದೆ. ಅದರಲ್ಲಿ ತುರ್ತಾಗಿ ಕ್ರಮವಹಿಸುವ ಶಿಫಾರಸುಗಳಲ್ಲಿ 10ನೇ ಕ್ರಮಾಂಕದಲ್ಲಿ ಈ ರೀತಿಯ ಶಿಫಾರಸು ಮಾಡಲಾಗಿದೆ. ಜನರ ಆರೋಗ್ಯ, ಕಾರ್ಖಾನೆಗಳು ಹೊಗೆ ಬಿಡುವ ಪದ್ಧತಿಯಲ್ಲಿ ಇರುವ ಅವೈಜ್ಞಾನಿಕತೆ ಸೇರಿದಂತೆ ಹಲವಾರು ರೀತಿಯಿಂದ ಅಧ್ಯಯನ ಸಮಿತಿ ಅಧ್ಯಯನ ಮಾಡಿದೆ.ಕೊಪ್ಪಳ ಪ್ರದೇಶದಲ್ಲಿ ಪರಿಸರ ಮಾನದಂಡ ಪೂರೈಸಲು ಗಮನಾರ್ಹ ಸುಧಾರಣೆ ಮಾಡುವವರೆಗೂ ಕ್ಲಸ್ಟರ್ ಪ್ರದೇಶದಲ್ಲಿ ಸ್ಪಾಂಜ್ ಐರನ್ ಘಟಕ, ಉಕ್ಕಿನ ಕೈಗಾರಿಕೆಗಳ ಸ್ಥಾಪನೆ ಅಥವಾ ವಿಸ್ತರಣೆ ನಿಷೇಧಿಸಬೇಕೆಂದು ಹೇಳಿದೆ. ಹೀಗೆ ಸುಮಾರು ಹತ್ತು ರೀತಿಯ ಶಿಫಾರಸುಗಳನ್ನು ನೀಡಲಾಗಿದೆ.
ಪಿಪಿಗಳ ಗ್ರೀನ್ ಬೆಲ್ಟ್ ಅಭಿವೃದ್ಧಿಯ ಮಾನದಂಡ ಕಡ್ಡಾಯವಾಗಿ ಅನುಸರಿಸಬೇಕು. ಹೊರಸೂಸುವಿಕೆಯನ್ನು ಬೈಪಾಸ್ ಮಾಡಿ, ಧೂಳು ಬಿಡುವುದನ್ನು ತಡೆಯಲು 6 ತಿಂಗಳೊಳಗಾಗಿ ಸ್ವಯಂಚಾಲಿತ ಇಂಟರ್‌ಲಾಕ್ ಅಳವಡಿಸಬೇಕು. ಚಿಮಣಿಗಳಿಗೆ ಎದುರಾಗಿ ಸಿಸಿ ಕ್ಯಾಮೆರಾ ಅಳವಡಿಸಬೇಕು, ಈ ಕ್ಯಾಮೆರಾಗಳು ನೇರವಾಗಿ ಜಿಲ್ಲಾ ಪ್ರಾಧಿಕಾರ ಮತ್ತು ಕೆಎಸ್‌ಪಿಸಿಬಿ ಕಚೇರಿಗೆ ಸಂಪರ್ಕ ಹೊಂದಿರಬೇಕು. ಧೂಳು ನಿಯಂತ್ರಣಕ್ಕೆ ಅಂತರ್ಜಲ ಬಳಕೆ ಮಾಡುತ್ತಿದ್ದು, ಇದರಿಂದ ಅಲ್ಲಿಯ ನೀರು ಕಲುಷಿತವಾಗುತ್ತಿದೆ. ಇದು ಅಂತರ್ಜಲ ಕುಸಿಯಲು ಕಾರಣವಾಗುತ್ತಿದೆ. ಮರುಬಳಕೆಯ ಪದ್ಧತಿ ಮತ್ತು ಮಳೆ ಕೊಯ್ಲು ಅಳವಡಿಸಿಕೊಳ್ಳಬೇಕು ಮತ್ತು ನೀರು ಭೂಮಿಗೆ ಹಿಂಗದಂತೆ ನೋಡಿಕೊಳ್ಳಬೇಕು. ಕಚ್ಚಾವಸ್ತು ಸಂಗ್ರಹ ಸುತ್ತಮುತ್ತಲು ಅಂತರ್ಜಲವನ್ನು 6 ತಿಂಗಳಿಗೊಮ್ಮೆ ತಪಾಸಣೆ ಮಾಡಿಸಬೇಕು ಮತ್ತು ಈ ವರದಿಯನ್ನು ಕೆಎಸ್‌ಪಿಸಿಬಿ ಕಳುಹಿಕೊಡಬೇಕು ಮತ್ತು ಇದರ ಮೇಲೆ ನಿಗಾ ಇರಿಸಬೇಕು.ಹೀಗೆ ಸಾಲು ಸಾಲು ಶಿಫಾರಸುಗಳನ್ನು ಸಚಿವಾಲಯ ನೀಡಿದೆ. ಅಲ್ಲದೆ ಇದಲ್ಲದೆ ಇನ್ನು ಅಧ್ಯಯನ ವರದಿ, ವೈಜ್ಞಾನಿಕ ಕ್ರಮದ ಅಗತ್ಯತೆಯನ್ನು ಸಮಿತಿ ಒತ್ತಿ ಹೇಳಿದೆ.
ಯಾರ್ಯಾರು ಇದ್ದಾರೆ: ಸಿಪಿಸಿಬಿಆರ್‌ಡಿ ವಿಜ್ಞಾನಿ ಕೆ. ವಿವೇಕ, ಇಎಂಪಿಆರ್‌ಐ ಸಂಶೋಧಕ ಹಾಗೂ ನಿರ್ದೇಶಕ ಟಿ. ಮಹೇಶ, ಬೆಂಗಳೂರಿನ ಪ್ರಾದೇಶಿಕ ಕಚೇರಿಯ ವಿಜ್ಞಾನಿ ಡಾ. ಡೋಲಾ ಭಟ್ಟಾಚಾರ್ಯ, ವಿಜಯನಗರದ ಕೆಎಸ್‌ಪಿಸಿಬಿ ವಲಯದ ಇಒ ಮುರುಳೀಧರನ, ಜಿಲ್ಲಾ ಕೈಗಾರಿಕಾ ಕೇಂದ್ರ ಉಪ ನಿರ್ದೇಶಕ ಶೇಕು ಮಧು ಚವ್ಹಾಣ ತಂಡದಲ್ಲಿ ಇದ್ದರು.