ಸಾರಾಂಶ
ಜನವರಿಯಲ್ಲಿ 718.619 ಮೆಗಾ ಯೂನಿಟ್ ವಿದ್ಯುತ್ । ಈ ಮುನ್ನ 2021ರ ಡಿಸೆಂಬರ್‌ನಲ್ಲಿ 718.085 ಮೆಯೂ । ಸಮಸ್ಯೆಗಳ ನಡುವೆ ದಾಖಲೆ
ರಾಮಕೃಷ್ಣ ದಾಸರಿಕನ್ನಡಪ್ರಭ ವಾರ್ತೆ ರಾಯಚೂರು
ಇಲ್ಲಿನ ಯರಮರಸ್ ಅತ್ಯಾಧುನಿಕ ಶಾಖೋತ್ಪನ್ನ ವಿದ್ಯುತ್ ಸ್ಥಾವರದಿಂದ (ವೈಟಿಪಿಎಸ್) ದಾಖಲೆಯ ಕರೆಂಟ್ ಉತ್ಪಾದಿಸಲಾಗಿದೆ.ಒಟ್ಟು 1600 ಮೆಗಾ ವ್ಯಾಟ್ , ತಲಾ 800 ಮೆಗಾ ವ್ಯಾಟ್ ಸಾಮರ್ಥ್ಯದ 1 ಮತ್ತು 2 ನೇ ಘಟಕಗಳಿಂದ ವೈಟಿಪಿಎಸ್ ಕಳೆದ ಜನವರಿಯಲ್ಲಿ ಸತತವಾಗಿ ಕರೆಂಟ್ ಉತ್ಪಾದನೆ ಮಾಡಿ ಒಂದು ತಿಂಗಳಲ್ಲಿ ಅತ್ಯಂತ ಗರಿಷ್ಠ ಕರೆಂಟ್ ಉತ್ಪಾದಿಸಿ ದಾಖಲೆ ನಿರ್ಮಿಸಿರುವುದು ವಿಶೇಷವಾಗಿದೆ.
ಎಷ್ಟು ಉತ್ಪಾದನೆ:ಜನವರಿ 1 ರಿಂದ 31 ವರೆಗೆ ವೈಟಿಪಿಎಸ್‌ನ 1 ಮತ್ತು 2ನೇ ಘಟಕಗಳು 718.619 ಮೆಗಾ ಯೂನಿಟ್ ಕರೆಂಟ್ ಉತ್ಪಾದಿಸಿದೆ. ಇದು ವೈಟಿಪಿಎಸ್ ಆರಂಭದಿಂದಲೂ ಒಂದು ತಿಂಗಳಲ್ಲಿಯೇ ಅತೀ ಹೆಚ್ಚಿನ ಪ್ರಮಾಣದಲ್ಲಿ ಕರೆಂಟ್ ಉತ್ಪಾದಿಸಿದ ಗರಿಮೆಯಾಗಿದೆ. ಕಳೆದ 2021ರ ಡಿಸೆಂಬರ್‌ನಲ್ಲಿ 718.085 ಮೆಗಾ ಯುನಿಟ್ ಉತ್ಪಾದನೆ ಮಾಡಲಾಗಿತ್ತು. ಹೊಸ ವರ್ದ ಮೊದಲ ವಾರದಲ್ಲಿಯೇ ವೈಟಿಪಿಎಸ್ ಈ ಸಾಧನೆ ಮಾಡಿದ್ದು, ಒಂದೇ ಘಟಕದಿಂದ 35ಕ್ಕೂ ಹೆಚ್ಚು ದಿನಗಳ ಕಾಲ ನಿರಂತರ ಉತ್ಪಾದನೆ ಅದೇ ರೀತಿ ಎರಡನೇ ಘಟಕದಿಂದ 70 ದಿನಗಳ ಕಾಲ ನಿರಂತರ ಉತ್ಪಾದನೆಯಿಂದ ಈ ಸಾಧನೆ ಸಾಧ್ಯವಾಗಿದೆ.
ತಾಂತ್ರಿಕ ತೊಂದರೆ, ಕಳಪೆ ಗುಣಮಟ್ಟದ ಕಲ್ಲಿದ್ದಲು ಪೂರೈಕೆ, ಶಾಖೋತ್ಪನ್ನ ವಿದ್ಯುತ್ ಬೇಡಿಕೆ ಪ್ರಮಾಣ ಕಡಿಮೆ ಸೇರಿದಂತೆ ಇತರೆ ಸಮಸ್ಯೆಗಳ ನಡುವೆಯೂ ವೈಟಿಪಿಎಸ್ ದಾಖಲೆ ಕರೆಂಟ್ ಉತ್ಪಾದನೆ ಮಾಡುವುದರ ಮುಖಾಂತರ ಹಿರಿಮೆಯನ್ನು ಹೆಚ್ಚಿಸಿಕೊಂಡಿದೆ.ಸತತ ಪ್ರಯತ್ನದ ಫಲ:
ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ಸಂಚಾಲಿತ ವೈಟಿಪಿಎಸ್ ನ ನಿರ್ವಹಣೆಯನ್ನು ಪವರ್ ಮೆಕ್ ಕಂಪನಿಗೆ ನೀಡಿದ ಬಳಿಕ ಹೇಳಿಕೊಳ್ಳುವಷ್ಟು ಪ್ರಗತಿ ಸಾಧಿಸಿಲ್ಲ ಎನ್ನುವ ಕೊರಗಿತ್ತು. ಇದೀಗ ತಜ್ಞರ, ಅಧಿಕಾರಿಗಳ, ಎಂಜಿನಿಯರ್,ಕಾರ್ಮಿಕರ ಹಾಗೂ ಕಂಪನಿಯ ಸಮಿಷ್ಠಿ ಕೃಷಿ, ಸತತ ಪ್ರಯತ್ನದ ಫಲವಾಗಿ ತಿಂಗಳಲ್ಲಿಯೇ ಗರಿಷ್ಠ ಮಟ್ಟದ ಉತ್ಪಾದನೆಯಾಗಿರುವುದು ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡುವ ಹುಮ್ಮಸ್ಸು ನೀಡಿದೆ.ಶಾಖೋತ್ಪನ್ನ ಸ್ಥಾವರಗಳಿಂದ ವಿದ್ಯುತ್ ಉತ್ಪಾದನೆ:
ರಾಯಚೂರು ಬೃಹತ್ ಶಾಖೋತ್ಪನ್ನ ಸ್ಥಾವರ (ಆರ್‌ಟಿಪಿಎಸ್) ಹಾಗೂ ಯರಮರಸ್ ಅತ್ಯಾಧುನಿಕ ಶಾಖೋತ್ಪನ್ನ ಕೇಂದ್ರ (ವೈಟಿಪಿಎಸ್)ನಿಂದ ಬೇಡಿಕೆಗನುಸಾರ ಕರೆಂಟ್ ಉತ್ಪಾದನೆಯನ್ನು ಮಾಡಲಾಗುತ್ತಿದೆ. ಆರ್‌ಟಿಪಿಎಸ್‌ನ ಎಂಟು ಘಟಕಗಳ ಪೈಕಿ 1ನೇ ಘಟಕ ಸಂಪೂರ್ಣವಾಗಿ ಬಂದಾಗಿದ್ದು, ತಾಂತ್ರಿಕ ದೋಷ ಹಾಗೂ ವಿವಿಧ ಕಾರಣಗಳಿಂದಾಗಿ 4 ಮತ್ತು 8ನೇ ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ. ಉಳಿದಂತೆ 2,3,5,6 ಮತ್ತು 7ನೇ ಘಟಕಗಳಿಂದ ಸುಮಾರು 950 ಮೆಗಾ ವ್ಯಾಟ್ ಕರೆಂಟ್ ಉತ್ಪಾದಿಸಲಾಗುತ್ತಿದ್ದು, ವೈಟಿಪಿಎಸ್‌ನ ಎರಡೂ ಘಟಕಗಳಿಂದ 1030 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಪಕ್ಕದ ಬಳ್ಳಾರಿಯ ಬಿಟಿಪಿಎಸ್‌ನಿಂದ 856 ಮೆಗಾ ವ್ಯಾಟ್ ಕರೆಂಟ್ ಉತ್ಪಾದಿಸುತ್ತಿದೆ. ಹೀಗೆ ಈ ಭಾಗದ ಶಾಖೋತ್ಪನ್ನ ಸ್ಥಾವರಗಳಿಂದ ಸುಮಾರು 2,836 ಮೆಗಾ ವ್ಯಾಟ್ ಕರೆಂಟ್ ಉತ್ಪಾದಿಸಿ ರಾಜ್ಯ ಜಾಲಕ್ಕೆ ರವಾನಿಸಲಾಗುತ್ತಿದೆ.ವೈಟಿಪಿಎಸ್ ನ ಇತಿಹಾಸದಲ್ಲಿಯೇ ತಿಂಗಳಲ್ಲಿ ಗರಿಷ್ಠ ಪ್ರಮಾಣದ ಉತ್ಪಾದನೆಯನ್ನು ಜನವರಿಯಲ್ಲಿ ಮಾಡಲಾಗಿದೆ. ಗುಣಮಟ್ಟದ ಕಲ್ಲಿದ್ದಲು ಪೂರೈಕೆ ಜೊತೆಗೆ ಕಂಪನಿ, ಕೇಂದ್ರದ ಅಧಿಕಾರಿ, ತಜ್ಞರು, ಸಿಬ್ಬಂದಿ,ಕಾರ್ಮಿಕರ ನಿರಂತರ ಪರಿಶ್ರಮದಿಂದ ಈ ದಾಖಲೆಯನ್ನು ನಿರ್ಮಿಸಲು ಸಾಧ್ಯವಾಗಿದೆ.
ಎಂ.ಆರ್ ಗಂಗಾಧರ, ಕಾರ್ಯನಿರ್ವಾಹಕ ನಿರ್ದೇಶಕ, ವೈಟಿಪಿಎಸ್.