ದ.ಕ.ದಲ್ಲಿ ದಾಖಲೆ ಬರೆದ ಕನಿಷ್ಠ ತಾಪಮಾನ

| Published : May 03 2024, 01:03 AM IST

ಸಾರಾಂಶ

ಮೇ 4 ರಿಂದ 6 ರ ವರೆಗೆ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಏ. 7ರಂದು ಮೋಡ ಚದುರಿದ ವಾತಾವರಣ ಇರಲಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ದ.ಕ.ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಮುಂದುವರಿದಿದ್ದು, ಗುರುವಾರ ಕನಿಷ್ಠ 28 ಡಿಗ್ರಿಯಿಂದ, ಗರಿಷ್ಠ 33.9 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಕಳೆದ 20 ವರ್ಷದಲ್ಲಿ ಇದೇ ಮೊದಲ ಬಾರಿಗೆ ಕನಿಷ್ಠ ತಾಪಮಾನ ಕೂಡ 28 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿರುವುದು ಇದೇ ಮೊದಲು.2004ರ ಮೇ 1 ರಂದು ಗರಿಷ್ಠ 36.9 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 27.1 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಈ ವರೆಗಿನ ಕನಿಷ್ಠ ತಾಪಮಾನದ ಗರಿಷ್ಠ ಏರಿಕೆಯಾಗಿತ್ತು. ಸಾಮಾನ್ಯವಾಗಿ ಕನಿಷ್ಠ ಹಾಗೂ ಗರಿಷ್ಠ ತಾಪಮಾನ ನಡುವೆ 10 ರಿಂದ 12 ಡಿಗ್ರಿ ಸೆಲ್ಸಿಯಸ್‌ ವರೆಗೆ ಅಂತರ ಇರುತ್ತದೆ. ಆದರೆ ಗುರುವಾರ ಈ ಅಂತರ ಕೇವಲ 5 ಡಿಗ್ರಿ ಸೆಲ್ಸಿಯಸ್‌ ವರೆಗೆ ಸಮೀಪದಲ್ಲಿದೆ. ಅಂದರೆ ಕನಿಷ್ಠ ತಾಪಮಾನದಲ್ಲೂ ಏರಿಕೆಯಾಗಿದ್ದು, ರಾತ್ರಿ ಕೂಡ ಸೆಖೆ ಹೆಚ್ಚಳದ ಅನುಭವ ನೀಡಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

ಮೇ 4 ರಿಂದ 6 ರ ವರೆಗೆ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಏ. 7ರಂದು ಮೋಡ ಚದುರಿದ ವಾತಾವರಣ ಇರಲಿದೆ.

ಕರಾವಳಿಯಲ್ಲಿ ಕಳೆದ ಮೂರು ದಿನಗಳಿಂದ ನಾನಾ ಭಾಗದಲ್ಲಿ 40 ಡಿಗ್ರಿ ಸೆಲ್ಸಿಯಸ್‌ಗೂ ತಲುಪಿದೆ. ಉಷ್ಣತೆ ಏರಿಕೆಯಾದಂತೆ ತೇವಾಂಶದಲ್ಲೂ ನಿರಂತರವಾಗಿ ಏರಿಕೆಯಾಗುತ್ತಿದೆ. ಮುಂದಿನ ಎರಡ್ಮೂರು ದಿನ ಕರಾವಳಿ ಜಿಲ್ಲೆಯ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ನೀಡಲಾಗಿದೆ. ಮಂಗಳೂರು: ನೀರು ರೇಷನಿಂಗ್‌ ಬಗ್ಗೆ ಇಂದು ತೀರ್ಮಾನ?

ಮಂಗಳೂರು ಮಹಾನಗರಕ್ಕೆ ಇನ್ನು ಎರಡು ದಿನಕ್ಕೊಮ್ಮೆ ನೀರು ಪೂರೈಕೆ ಸಾಧ್ಯತೆ ಕುರಿತು ಹೇಳಲಾಗಿದೆ.

ತುಂಬೆ ಡ್ಯಾಂನಲ್ಲಿ ನೀರು ಸಂಗ್ರಹ ಕುಸಿಯುತ್ತಲೇ ಇದ್ದು, ಮಳೆಯೂ ದೂರವಾಗಿದೆ. ಈ ಹಿನ್ನೆಲೆಯಲ್ಲಿ ಮಳೆಗಾಲ ವರೆಗೆ ಮಹಾನಗರಕ್ಕೆ ಕುಡಿಯುವ ನೀರು ಪೂರೈಕೆಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಮೇ 3ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುವ ನೀರು ಪೂರೈಕೆ ಕುರಿತ ಸಭೆಯಲ್ಲಿ ಮಂಗಳೂರಿಗೆ ನೀರು ರೇಷನಿಂಗ್‌ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಬಗ್ಗೆ ಹೇಳಲಾಗಿದೆ. ಈಗ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಮೇಯರ್‌ ಬದಲು ಜಿಲ್ಲಾಧಿಕಾರಿಗಳೇ ನೀರು ಪೂರೈಕೆ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನೀರು ಪೂರೈಸುವ ತುಂಬೆ ಡ್ಯಾಂನಲ್ಲಿ ಗುರುವಾರ ನೀರಿನ ಮಟ್ಟ 4.28 ಮೀಟರ್‌ಗೆ ಇಳಿಕೆಯಾಗಿದೆ. ಬುಧವಾರ ನೀರಿನ ಮಟ್ಟ 4.38 ಮೀಟರ್‌ ಇತ್ತು. ಎಎಂಆರ್‌ ಡ್ಯಾಂನ ನೀರಿನ ಮಟ್ಟ ಕೂಡ 15.96 ಮೀಟರ್‌ ಇದ್ದುದು 15.89 ಮೀಟರ್‌ಗೆ ಕುಸಿದಿದೆ. ಹರೇಕಳ ಡ್ಯಾಂನಿಂದ ತುಂಬೆ ಡ್ಯಾಂಗೆ ಈಗ ನಾಲ್ಕು ಪಂಪ್‌ಗಳಲ್ಲಿ ನೀರು ಪಂಪಿಂಗ್‌ ಮುಂದುವರಿದಿದೆ. ಇನ್ನು ಒಂದು ವಾರದಲ್ಲಿ 10 ಪಂಪ್‌ ಅಳವಡಿಸುವ ಸಾಧ್ಯತೆ ಇದೆ.

ತುಂಬೆ ಡ್ಯಾಂನಲ್ಲಿ ವೇಗವಾಗಿ ನೀರು ಇಳಿಕೆಯಾಗಿದೆ. ಮಹಾನಗರ ನೀರು ಪೂರೈಕೆಗೆ ಸಂಬಂಧಿಸಿ ಸಭೆ ನಡೆಸಬೇಕಾಗಿದೆ. ನೀರಿನ ಸಮಸ್ಯೆ ಹೋಗಲಾಡಿಸುವ ಬಗ್ಗೆಯೂ ತೀರ್ಮಾನ ಕೈಗೊಳ್ಳಬೇಕಾಗಿದೆ. ಆದರೆ ನೀತಿಸಂಹಿತೆ ಕಾರಣಕ್ಕೆ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳ ಜತೆ ಚರ್ಚಿಸಲಾಗುವುದು ಎಂದು ಪಾಲಿಕೆ ಮೇಯರ್ ಸುಧೀರ್‌ ಶೆಟ್ಟಿ ಕಣ್ಣೂರು ತಿಳಿಸಿದ್ದಾರೆ.

-------------

ಮಂಗಳೂರು ವಿವಿ ವ್ಯಾಪ್ತಿಯ ಕಾಲೇಜುಗಳಿಗೆ ರಜೆ ಘೋಷಣೆಗೆ ಆಗ್ರಹ

ಮಂಗಳೂರು: ಕರಾವಳಿಯಲ್ಲೂ ಬಿಸಿಲಿನ ಶಾಖಾಘಾತ ಹೆಚ್ಚುವ ಸಾಧ್ಯತೆಯನ್ನು ತಜ್ಞರು ನೀಡಿರುವ ಬೆನ್ನಲ್ಲೇ ಬಿಸಿಲಿನ ಝಳದಿಂದ ವಿದ್ಯಾರ್ಥಿಗಳನ್ನು ಪಾರು ಮಾಡಲು ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳಿಗೆ ವಾರದ ಅವಧಿಯ ರಜೆ ಘೋಷಿಸಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.

ಈ ಬಾರಿ ಜಿಲ್ಲೆಯಲ್ಲಿ ಗರಿಷ್ಟ ತಾಪಮಾನ ದಾಖಲಾಗುತ್ತಿದ್ದು, ಕೋವಿಡ್ ಪೂರ್ವದಲ್ಲಿ ಕಾಲೇಜುಗಳಿಗೆ ಏಪ್ರಿಲ್ ತಿಂಗಳು ಪರೀಕ್ಷೆ ಮತ್ತು ಆ ಬಳಿಕ ಬೇಸಗೆ ರಜೆ ಇರುತ್ತಿತ್ತು. ಕಳೆದ ಎರಡು ವರ್ಷಗಳಿಂದ ಸೆಮಿಸ್ಟರ್ ಕಾಲಾವಧಿ ಹೊಂದಾಣಿಕೆ ಮಾಡುವುದಕ್ಕಾಗಿ ಕಾಲೇಜುಗಳ ವೇಳಾ ಪಟ್ಟಿಯನ್ನು ಬದಲಿಸಲಾಯಿತು. ಇದರಿಂದಾಗಿ ಮೇ ತಿಂಗಳಲ್ಲಿಯೂ ತರಗತಿಗಳು ನಡೆಯುತ್ತಿವೆ. ಈ ಬಾರಿ ಹವಾಮಾನ ವೈಪರಿತ್ಯದ ಪರಿಣಾಮ ಗಂಭೀರ ರೀತಿಯಲ್ಲಿದ್ದು ಕಾಲೇಜು ವಿದ್ಯಾರ್ಥಿಗಳು ಇದರಿಂದ ಬಹಳ ತೊಂದರೆಗೀಡಾಗಿದ್ದಾರೆ.ಕೆಲವು ಕಾಲೇಜುಗಳಲ್ಲಿ ನೀರಿನ ಕೊರತೆ ಒಂದೆಡೆಯಾದರೆ, ಆಗಾಗ ವಿದ್ಯುತ್ ಕೈಕೊಡುತ್ತಿರುವುದರಿಂದ ಪ್ರಾಯೋಗಿಕ ತರಗತಿಗಳಲ್ಲಿ ಬಹಳ ತೊಂದರೆಯಾಗುತ್ತಿದೆ. ಕೆಲವೊಮ್ಮೆ ಇಡೀ ಪ್ರಯೋಗವನ್ನು ರಿಪೀಟ್ ಮಾಡಬೇಕಾದ ಸ್ಥಿತಿ ಬರುತ್ತದೆ ಎನ್ನುವುದು ವಿದ್ಯಾರ್ಥಿಗಳ ಅಳಲು.

ಮಂಗಳೂರು ವಿಶ್ವವಿದ್ಯಾಲಯಕ್ಕೆ ಹೊಸ ಕುಲಪತಿಗಳಾಗಿ ಬಂದಿರುವ ಧರ್ಮ ಅವರು ವಿದ್ಯಾರ್ಥಿಗಳ ಈ ದಯನೀಯ ಪರಿಸ್ಥಿತಿಯನ್ನು ನೋಡಿಯಾದರೂ ವಾರ ಕಾಲ ಕಾಲೇಜುಗಳಿಗೆ ರಜೆ ನೀಡಲಿ. ಬಾಕಿ ಯಾಗುವ ಪಾಠ ಪ್ರವಚನಗಳನ್ನು ಪೂರೈಸಲು ಶೈಕ್ಷಣಿಕ ವೇಳಾ ಪಟ್ಟಿಯನ್ನು ವಾರ ಕಾಲ ವಿಸ್ತರಿಸಲಿ ಎನ್ನುತ್ತಾರೆ ಪೋಷಕರೊಬ್ಬರು.

ಜಿಲ್ಲೆಯ ಬಹುತೇಕ ಗ್ರಾಮಾಂತರ ಕಾಲೇಜುಗಳೂ ಕೂಡಾ ಈಗ ನೀರಿನ ಕೊರತೆಯನ್ನು ಎದುರಿಸುತ್ತಿವೆ. ವಿದ್ಯುತ್ ಕೈಕೊಡುತ್ತಿರುವುದರಿಂದ ತರಗತಿ ಕೊಠಡಿಗಳಲ್ಲೂ ಬೆವರುವಂತಾಗಿದೆ. ಬಿಸಿಲ ಝಳದಿಂದ ವಿದ್ಯಾರ್ಥಿಗಳನ್ನು ರಕ್ಷಿಸಲು ರಜೆ ಅನಿವಾರ್ಯ ಎಂದು ಆಗ್ರಹಿಸುತ್ತಿದ್ದಾರೆ.

ಪಿಲಿಕುಳ ನಿಸರ್ಗಧಾಮಕ್ಕೆ ಟ್ಯಾಂಕರ್‌ ನೀರುಮಂಗಳೂರು: ಪಿಲಿಕುಳದಲ್ಲಿರುವ ನಿಸರ್ಗ ಧಾಮದ ಪ್ರಾಣಿಗಳು ಬಿಸಿಲಿನ ಝಳದಿದ ಬಳಲುತ್ತಿವೆ. ನೀರಿನ ಕೊರತೆ ನಿವಾರಿಸಲು ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.ಸುಮಾರು 150 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಪಿಲಿಕುಳ ನಿಸರ್ಗಧಾಮ ಅಪರೂಪದ ವನ್ಯಜೀವಿಗಳನ್ನು ಹೊಂದಿದೆ. ಅವುಗಳ ನೈಸರ್ಗಿಕ ಪರಿಸರಕ್ಕೆ ಹೊಂದುವಂತಹ ಆವರಣಗಳನ್ನು ರೂಪಿಸಿ ಪ್ರಾಣಿಗಳನ್ನು ಇರಿಸಲಾಗಿದೆ. ಕೇಂದ್ರೀಯ ಮೃಗಾಲಯ ಪ್ರಾಧಿಕಾರ ಪಿಲಿಕುಳವನ್ನು ಪ್ರಮುಖ ಮೃಗಾಲಯ ಎಂದು ಪರಿಗಣಿಸಿದೆ.ಈ ಮೃಗಾಲಯಕ್ಕೂ ಈಗ ಹವಾಮಾನ ವೈಪರಿತ್ಯದ ಪರಿಣಾಮವಾಗಿರುವ ಬಿಸಿ ಹವೆ ಮತ್ತು ನೀರಿನ ಕೊರತೆ ಎದುರಾಗಿದೆ. ನೈಸರ್ಗಿಕ ಪರಿಸರದಲ್ಲಿದ್ದರೂ ದೊಡ್ಡ ಪ್ರಾಣಿಗಳು ಬಿಸಿ ಹವೆಯ ಶಾಖವನ್ನು ಎದುರಿಸುವಲ್ಲಿ ಹೈರಾಣಾಗುತ್ತಿವೆ.ದಿನಕ್ಕೊಂಡು ಬಾರಿ ಟ್ಯಾಂಕರ್ ಮೂಲಕ ಪ್ರಾಣಿಗಳ ಆವರಣದಲ್ಲಿರುವ ನೀರಿನ ಟ್ಯಾಂಕ್‌ಗಳನ್ನು ತುಂಬಿಸಲಾಗುತ್ತಿದೆ. ಪ್ರತ್ಯೇಕ ನೆರಳಿನ ವ್ಯವಸ್ಥೆ ಮಾಡಲಾಗಿದ್ದು, ಬಿಸಿಲಿನ ನೇರ ಪರಿಣಾಮ ಕಡಿಮೆ ಮಾಡಲು ಬಿಳಿ ಬಣ್ಣವನ್ನು ಬಳಿಯಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.