ಜಿಲ್ಲೆಯಲ್ಲಿ 2025 ರ ಏಪ್ರಿಲ್‌ನಿಂದ ನವೆಂಬರ್‌ವರೆಗೆ 6 ತಾಯಿ ಮರಣ ಹಾಗೂ 176 ಶಿಶು ಮರಣ ಪ್ರಕರಣಗಳು ದಾಖಲಾಗಿದ್ದು, ಶಿಶು ಮರಣ ಪ್ರಮಾಣವನ್ನು ಶೂನ್ಯಕ್ಕಿಳಿಸಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೂಚಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರುಜಿಲ್ಲೆಯಲ್ಲಿ 2025 ರ ಏಪ್ರಿಲ್‌ನಿಂದ ನವೆಂಬರ್‌ವರೆಗೆ 6 ತಾಯಿ ಮರಣ ಹಾಗೂ 176 ಶಿಶು ಮರಣ ಪ್ರಕರಣಗಳು ದಾಖಲಾಗಿದ್ದು, ಶಿಶು ಮರಣ ಪ್ರಮಾಣವನ್ನು ಶೂನ್ಯಕ್ಕಿಳಿಸಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೂಚಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ತಾಯಿ ಮರಣ ಹಾಗೂ ಶಿಶು ಮರಣ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಉತ್ತಮ ಅನುಭವವುಳ್ಳ ವೈದ್ಯರು ಜಿಲ್ಲೆಯಲ್ಲಿ ಇದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಶಿಶು ಮರಣ ಪ್ರಕರಣಗಳು ಸಂಭವಿಸಿರುವುದು ಆತಂಕಕಾರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಜಿಲ್ಲೆಯಲ್ಲಿ ಸಿಸೇರಿಯನ್ ಪ್ರಕರಣಗಳ ಪ್ರಮಾಣ ಹೆಚ್ಚುತ್ತಿರುವುದನ್ನು ಗಮನಿಸಿ, ಶೇ. 40 ಕ್ಕಿಂತ ಹೆಚ್ಚು ಸಿಸೇರಿಯನ್ ಪ್ರಕರಣಗಳು ದಾಖಲಾದರೆ ಕೆಪಿಎಂಇ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ವೈದ್ಯಾಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ತುರ್ತು ಹೆರಿಗೆ ಸಂದರ್ಭದಲ್ಲಿ ತರಬೇತಿ ವೈದ್ಯರನ್ನು ಹೆರಿಗೆ ಮಾಡಲು ನಿಯೋಜಿಸದೆ ಅನುಭವವುಳ್ಳ ವೈದ್ಯರನ್ನು ನಿಯೋಜಿಸಬೇಕು ಎಂದು ಸೂಚಿಸಿದರು. ಅದೇ ರೀತಿ, ವೈದ್ಯರು ಹೆರಿಗೆ ಪ್ರಕರಣಗಳನ್ನು ಖಾಸಗಿ ಆಸ್ಪತ್ರೆಗೆ ಸೂಚಿಸದೆ, ಸರ್ಕಾರಿ ಆಸ್ಪತ್ರೆಗಳಲ್ಲೇ ಹೆರಿಗೆ ಮಾಡಬೇಕು ಎಂದು ಸೂಚಿಸಿದರು.ಜಿಲ್ಲೆಯ ೩ ಉಪವಿಭಾಗಗಳಲ್ಲಿ ಜಿಲ್ಲಾ ಮಟ್ಟದ ಆರೋಗ್ಯಾಧಿಕಾರಿಗಳು ಆಸ್ಪತ್ರೆಯ ಕಾರ್ಯ ವೈಖರಿಯನ್ನು ಪರಿಶೀಲಿಸಿ ಕಾಲ ಕಾಲಕ್ಕೆ ಕುಂದು ಕೊರತೆ ಸಭೆಗಳನ್ನು ಆಯೋಜಿಸಿ ಸಮಸ್ಯೆಗಳ ವಿಶ್ಲೇಷಣೆ ಮಾಡಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ ಡಾ. ಮೋಹನ್ ಸಿ.ಆರ್. ಮಾತನಾಡಿ, ಕಳೆದ ಏಪ್ರಿಲ್ 2024 ರಿಂದ ಮಾರ್ಚ್ 2025 ರವರೆಗೆ ಜಿಲ್ಲೆಯ ಚಿಕ್ಕನಾಯಕನಹಳ್ಳಿ, ಶಿರಾ ಹಾಗೂ ತಿಪಟೂರು ತಾಲ್ಲೂಕಿನಲ್ಲಿ ತಲಾ 2, ಮಧುಗಿರಿ ಹಾಗೂ ಪಾವಗಡ ತಲಾ 1, ತುಮಕೂರು ತಾಲೂಕಿನಲ್ಲಿ 11 ಸೇರಿ 19 ತಾಯಿ ಮರಣ ಸಂಭವಿಸಿದ್ದು, ಪ್ರಸಕ್ತ ವರ್ಷ ಗುಬ್ಬಿ, ಮಧುಗಿರಿ, ಶಿರಾ, ತಿಪಟೂರು ತಾಲ್ಲೂಕುಗಳಲ್ಲಿ ತಲಾ 1 ಹಾಗೂ ತುಮಕೂರಿನಲ್ಲಿ 2 ಸೇರಿ 6 ತಾಯಿ ಮರಣ ಸಂಭವಿಸಿದೆ ಎಂದು ಮಾಹಿತಿ ನೀಡಿದರು. ಅದೇ ರೀತಿ ಕಳೆದ ಏಪ್ರಿಲ್ 2024 ರಿಂದ ಮಾರ್ಚ್ 2025ರವರೆಗೆ ಒಟ್ಟು 292 ಶಿಶು ಮರಣ ಪ್ರಕರಣಗಳು ದಾಖಲಾಗಿದ್ದು, ಪ್ರಸಕ್ತ ಏಪ್ರಿಲ್ 2025 ರಿಂದ ನವೆಂಬರ್ 2025ರವರೆಗೆ ಚಿಕ್ಕನಾಯಕನಹಳ್ಳಿ ತಾಲೂಕು 12, ಗುಬ್ಬಿ ಹಾಗೂ ಮಧುಗಿರಿ ತಲಾ 7, ಕೊರಟಗೆರೆ 5, ಕುಣಿಗಲ್ 8, ಪಾವಗಡ 10, ಶಿರಾ 13, ತಿಪಟೂರು 15, ತುರುವೇಕೆರೆ 9 ಹಾಗೂ ತುಮಕೂರು 90 ಸೇರಿದಂತೆ ಒಟ್ಟು 176 ಶಿಶು ಮರಣ ಪ್ರಕರಣಗಳು ವರದಿಯಾಗಿವೆ ಎಂದು ತಿಳಿಸಿದ್ದಾರೆ. ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚಂದ್ರಶೇಖರ್, ಜಿಲ್ಲಾ ಶಸ್ತçಚಿಕಿತ್ಸಕ ಡಾ.ಅಸ್ಗರ್ ಬೇಗ್, ಮಹಾನಗರ ಪಾಲಿಕೆ ಆರೋಗ್ಯ ಅಧಿಕಾರಿ ಡಾ. ಯೋಗೀಶ್ ಸೇರಿದಂತೆ ಹಲವು ಆರೋಗ್ಯ ಅಧಿಕಾರಿಗಳು ಉಪಸ್ಥಿತರಿದ್ದರು.