ಸಾರಾಂಶ
ಕುಮಟಾ: ಪರಿಸರದ ಉಳಿವಿಗಾಗಿ ನಾವೆಲ್ಲರೂ ಪಣತೊಟ್ಟು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು. ಹಸಿ ಕಸ, ಒಣ ಕಸ ವಿಂಗಡನೆ ಮಾಡಿ, ಪರಿಸರಕ್ಕೆ ಪೂರಕವಾಗಿ ಬದುಕಬೇಕು ಮತ್ತು ಜಾಗೃತರಾಗಬೇಕು ಎಂದು ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ಸರಸ್ವತಿ ವಿದ್ಯಾಕೇಂದ್ರದ ೭ನೇ ತರಗತಿ ವಿದ್ಯಾರ್ಥಿಗಳು ಬುಧವಾರದ ಸಂತೆ ಮಾರುಕಟ್ಟೆಯಲ್ಲಿ ಜಾಗೃತಿ ಜಾಥಾ ಮೂಲಕ ಸಾರಿದರು.
ವಿಶ್ವ ಪರಿಸರ ದಿನದ ವಿಶೇಷವಾಗಿ ಬುಧವಾರ ಸಂತೆಯಲ್ಲಿ ಪುರಸಭೆ ಸಹಯೋಗದಲ್ಲಿ ಪರಿಸರ ಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದರು.ಪುರಸಭೆಯ ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ ಮಾತನಾಡಿ, ಪರಿಸರದ ಕುರಿತಾಗಿ ಜಾಗೃತರಾಗುವ ಜತೆಗೆ ಇತರರನ್ನೂ ಜಾಗೃತಗೊಳಿಸಬೇಕು. ಪ್ಲಾಸ್ಟಿಕ್ ಈಗಿನ ಅತಿದೊಡ್ಡ ಸಮಸ್ಯೆಯಾಗಿದ್ದು, ಪ್ಲಾಸ್ಟಿಕ್ ನಿಷೇಧವಿದ್ದರೂ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸರಸ್ವತಿ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳು ಕೈಗೊಂಡಿರುವ ಈ ಕಾರ್ಯಕ್ರಮ ಅರ್ಥಪೂರ್ಣವಾದದ್ದು, ವಿದ್ಯಾರ್ಥಿಗಳು ಜಾಗೃತರಾದರೆ ಸಮಾಜವೇ ಜಾಗೃತಿಯೆಡೆಗೆ ಸಾಗಲಿದೆ ಎಂದರು.
ವಿದ್ಯಾರ್ಥಿನಿ ವೈಷ್ಣವಿ ಗುನಗಾ ಮಾತನಾಡಿ, ಪರಿಸರ ಉಳಿದರೆ ಮಾತ್ರವೇ ನಮ್ಮೆಲ್ಲರ ಬದುಕು ಹಸನಾಗಲು ಸಾಧ್ಯ. ಆದರೆ ಫ್ಯಾಷನ್ ಹೆಸರಿನಲ್ಲಿ ಪ್ಲಾಸ್ಟಿಕ್ ಅನ್ನು ಯಥೇಚ್ಛವಾಗಿ ಬಳಸುತ್ತಿದ್ದು, ಅದರ ವಿಲೇವಾರಿ ಹಾಗೂ ಮರುಬಳಕೆಯ ಬಗ್ಗೆ ಚಿಂತನೆ ಮಾಡುತ್ತಿಲ್ಲ. ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ತಡೆಯುವುದೇ ಮುಖ್ಯ ಧ್ಯೇಯವಾಗಿದೆ. ಇದಕ್ಕೆ ಎಲ್ಲರೂ ಕೈಜೋಡಿಸಬೇಕಿದೆ. ಹಸಿ ಕಸ, ಒಣ ಕಸವನ್ನು ವಿಂಗಡಿಸುವುದರ ಮೂಲಕ ಪುರಸಭೆ, ಗ್ರಾಮ ಪಂಚಾಯಿತಿಗಳು ನಡೆಸುವ ಕಸ ವಿಲೇವಾರಿಗೆ ಸಹಕರಿಸಬೇಕು. ಪರಿಸರ ರಕ್ಷಣೆ ಸದಾ ಹೊಣೆಯಾಗಿರಬೇಕು ಎಂದರು.ವಿದ್ಯಾರ್ಥಿಗಳು ಪರಿಸರ ಗೀತೆ ಹಾಡಿದರು. ಪ್ಲಾಸ್ಟಿಕ್ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಕುರಿತಾಗಿ ಬೀದಿನಾಟಕವನ್ನು ಪ್ರದರ್ಶಿಸಿದರು. ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ವಿಶ್ವಸ್ಥ ರಮೇಶ ಪ್ರಭು, ವ್ಯವಸ್ಥಾಪಕಿ ವಿಜಯಾ ಶೆಟ್ಟಿ, ಪುರಸಭೆಯ ಸಿಬ್ಬಂದಿ ಇದ್ದರು. ಶಿಕ್ಷಕ ಗಣೇಶ ಜೋಶಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಸುಮಂಗಲಾ ನಾಯ್ಕ, ಪ್ರಜ್ಞಾ ನಾಯ್ಕ, ತನುಜಾ ನಾಯ್ಕ, ಹರ್ಷಿತಾ ಭಂಡಾರಿ, ಶಿಕ್ಷಕ ನಾಗರಾಜ ಶಿರೋಡ್ಕರ್ ಇತರರು ಇದ್ದರು.
ವಿದ್ಯಾರ್ಥಿಗಳು ಪರಿಸರ ಜಾಗೃತಿ ಘೋಷಣೆಗಳನ್ನು ಕೂಗುತ್ತಾ, ಪ್ಲಾಸ್ಟಿಕ್ ಬಳಕೆ ನಿಷೇಧದ ಕುರಿತು ಕರಪತ್ರಗಳನ್ನು ಸಂತೆಯ ತುಂಬಾ ಹಂಚಿದರು.