ಸಾರಾಂಶ
ಅಜ್ಜರಕಾಡುವಿನ ವಿದ್ಯಾವಾಚಸ್ಪತಿ ಡಾ.ಬನ್ನಂಜೆ ಗೋವಿಂದಾಚಾರ್ಯ ಸ್ಮಾರಕ ಗ್ರಂಥಾಲಯದ ಸಭಾಂಗಣದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಯುವ ಪೀಳಿಗೆ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ಕಡಿಮೆ ಮಾಡಿ, ಪುಸ್ತಕಗಳನ್ನು ಓದುವ ಮೂಲಕ ಜ್ಞಾನಾರ್ಜನೆ ನಡೆಸಬೇಕು. ಗ್ರಂಥಾಲಯಗಳ ಸದುಪಯೋಗದಿಂದ ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಶಾಸಕ ಯಶ್ಪಾಲ್ ಎ. ಸುವರ್ಣ ಹೇಳಿದರು.ನಗರ ಕೇಂದ್ರ ಗ್ರಂಥಾಲಯದ ವತಿಯಿಂದ ಶುಕ್ರವಾರ ಅಜ್ಜರಕಾಡುವಿನ ವಿದ್ಯಾವಾಚಸ್ಪತಿ ಡಾ.ಬನ್ನಂಜೆ ಗೋವಿಂದಾಚಾರ್ಯ ಸ್ಮಾರಕ ಗ್ರಂಥಾಲಯದ ಸಭಾಂಗಣದಲ್ಲಿ ಆಯೋಜಿಸಲಾದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಗರಸಭೆಯ ಅಧ್ಯಕ್ಷ ಪ್ರಭಾಕರ ಪೂಜಾರಿ ಅಧ್ಯಕ್ಷತೆ ವಹಿಸಿ, ಗ್ರಂಥಾಲಯವು ಜ್ಞಾನ ದೇಗುಲ ಮಾತ್ರವಲ್ಲ, ಮನುಷ್ಯನ ಮನಸ್ಸನ್ನು ಸದೃಢ ಮಾಡುವ ಭಂಡಾರವಿದ್ದಂತೆ. ಮನಸ್ಸನ್ನು ಸಧೃಡ ಮಾಡಿಕೊಂಡಲ್ಲಿ ನಾವು ಗುರಿ ತಲುಪಲು ಸಾಧ್ಯ. ಇದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಈ ಕಾರ್ಯಕ್ರಮದಲ್ಲಿ ಗ್ರಂಥಪಾಲಕಿ ರಂಜಿತ ಸಿ., ಗ್ರಂಥಾಲಯ ಸಹಾಯಕಿ ಸುನೀತಾ ಬಿ.ಎಸ್., ಕೆ.ಎಂ.ಮಾರ್ಗ ಶಾಖೆಯ ಮೇಲ್ವಿಚಾರಕಿ ವಿದ್ಯಾ, ಪುತ್ತೂರು ಶಾಖೆಯ ಲಕ್ಷ್ಮೀ, ಅಜ್ಜರಕಾಡು ಶಾಖೆಯ ಹರ್ಷಿತಾ ರಾವ್ ಹಾಗೂ ಮೀನಾಕ್ಷಿ ಅವರಿಗೆ ಉತ್ತಮ ಸಿಬ್ಬಂದಿ ಸೇವಾ ಪುರಸ್ಕಾರ ಹಾಗೂ ಉತ್ತಮ ಓದುಗರಾಗಿ ಚಿತ್ತರಂಜನ್ ದಾಸ್ ಮಲ್ಯ, ಬಾಲಕೃಷ್ಣ ಶಿರ್ವ, ಯು. ರೇವತಿ, ಮಾ. ಮಹಿತ್ ಅವರನ್ನು ಸನ್ಮಾನಿಸಲಾಯಿತು.ಅಜ್ಜರಕಾಡು ಗ್ರಂಥಾಲಯ, ಮಕ್ಕಳ ಸಮುದಾಯ ಕೇಂದ್ರ ಗ್ರಂಥಾಲಯ ಮತ್ತು ಕೆ.ಎಂ.ಮಾರ್ಗ ಶಾಖಾ ಗ್ರಂಥಾಲಯದಲ್ಲಿ ಶಾಲಾ - ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಧರ್ ಪ್ರಸಾದ್, ಸಹಾಯಕ ಪ್ರಾಧ್ಯಾಪಕಿ ಡಾ. ನಿಕೇತನ, ನಿವೃತ್ತ ಪ್ರಾಂಶುಪಾಲೆ ಹಾಗೂ ಹಿರಿಯ ಸಾಹಿತಿ ಮಾಧವಿ ಭಂಡಾರಿ, ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಜಯಶ್ರೀ ಎಂ. ಮತ್ತಿತರರು ಉಪಸ್ಥಿತರಿದ್ದರು.ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ನಳಿನಿ ಜಿ.ಐ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಗ್ರಂಥಪಾಲಕಿ ರಂಜಿತ ಸಿ. ನಿರೂಪಿಸಿದರು. ಗ್ರಂಥಾಲಯ ಸಹಾಯಕಿ ಸುನೀತಾ ಬಿ.ಎಸ್. ವಂದಿಸಿದರು.