ಸಾರಾಂಶ
ಬೆಳೆಗಾರರು ಅಧಿಕ ಇಳುವರಿಗಾಗಿ ವಿಜ್ಞಾನಿಗಳ ಸಲಹೆ ಅನುಸರಿಸಿ: ಉಪಕುಲಪತಿ । ದಾಳಿಂಬೆ ಬೆಳೆಗಾರರಿಗೆ ತಾಂತ್ರಿಕ ಶಿಬಿರ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ ಅತಿ ಹೆಚ್ಚು ಆದಾಯ ತಂದು ಕೊಡುವ ಹಣ್ಣು ದಾಳಿಂಬೆ ಬೆಳೆಯ ಬೆಳವಣಿಗೆಗೆ ಉತ್ಪಾದನಾ ವೆಚ್ಚ ಕಡಿಮೆಗೊಳಿಸಿ ಇಳುವರಿ ಹೆಚ್ಚಿಸುವುದು ಹೇಗೆ ಎಂಬುದನ್ನು ಆಗಾಗ ದಾಳಿಂಬೆ ಸಂಶೋದನಾ ಕೇಂದ್ರ ಹಾಗೂ ತೋಟಗಾರಿಕಾ ಇಲಾಖೆ ವಿಜ್ಞಾನಿಗಳು ತಿಳಿಸುತ್ತಾ ಬರುತ್ತಿದ್ದಾರೆ, ಬೆಳೆಗಾರರು ಸಲಹೆ ಸೂಚನೆಗಳನ್ನು ಅನುಸರಿಸಬೇಕು ಎಂದು ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ವಿಷ್ಣುವರ್ದನ್ ಹೇಳಿದರು.ನಗರದ ಹರ್ಷೋದಯ ಕಲ್ಯಾಣ ಮಂಟಪದಲ್ಲಿ ರಾಷ್ಟ್ರೀಯ ದಾಳಿಂಬೆ ಸಂಶೋಧನಾ ಕೇಂದ್ರ ಸೊಲ್ಲಾಪುರ, ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯ ಬಾಗಲಕೋಟೆ, ಇಪ್ಕೋ ಹಾಗೂ ಕಾಪ್ಸ್ ಬರ್ ಅಗ್ರಿಸೈನ್ಸ್ ಸಂಯುಕ್ತಾಶ್ರಯದಲ್ಲಿ ದಾಳಿಂಬೆ ಬೆಳೆಗಾರರಿಗೆ ಏರ್ಪಡಿಸಲಾಗಿದ್ದ ರಾಜ್ಯ ಮಟ್ಟದ ತಾಂತ್ರಿಕ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿ, ದಾಳಿಂಬೆ ಹೆಚ್ಚು ಆದಾಯ ತಂದು ಕೊಡುವ ಬೆಳೆಯಾಗಿದ್ದು, ಅದರ ಉತ್ಪಾದನಾ ವೆಚ್ಚ ಕಡಿಮೆಗೊಳಿಸಿ ಇಳುವರಿ ಹೆಚ್ಚು ಮಾಡುವುದು ಹೇಗೆ ಎಂಬುದನ್ನು ತಿಳಿಸುವುದೇ ಈ ತಾಂತ್ರಿಕ ಶಿಬಿರದ ಉದ್ದೇಶವಾಗಿದೆ. ಹಿರಿಯ ವಿಜ್ಞಾನಿ ಡಾ.ಎನ್. ಮಂಜುನಾಥ್ ತಿಳಿಸಿದಂತೆ ದಾಳಿಂಬೆ ಗಿಡ ಮತ್ತು ಅದರ ಹೂವಿಗೆ ರೋಗ ತಗುಲದಂತೆ ಎಚ್ಚರಿಕೆ ವಹಿಸಬೇಕು. ಹೆಚ್ಚು ಔಷಧಿಗಳ ಸಿಂಪಡಣೆ ಮಾಡಬಾರದು. ಪ್ರೂನಿಂಗ್ ಮಾಡುವ ಕಾಲ ಮತ್ತು ವಾತಾವರಣ ಗಮನಿಸಬೇಕು ಎಂದು ಹೇಳಿದರು.
ಇನ್ನು ದಾಳಿಂಬೆಯನ್ನು ಹೊರದೇಶಗಳಿಗೆ ರಪ್ತು ಮಾಡುವಾಗಲೂ ಅದರ ಗುಣಮಟ್ಟವನ್ನು ಗಮನಿಸಿ ಮಾರಾಟ ಮಾಡಲಾಗುತ್ತದೆ. ಇತ್ತೀಚೆಗೆ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ದಾಳಿಂಬೆ ಬೆಳೆಗೆ ರೈತರು ಹೆಚ್ಚು ಒತ್ತು ನೀಡುತ್ತಿದ್ದು, ಬೇಸಿಗೆ ಮತ್ತು ಚಳಿಗಾಲದಲ್ಲಿ ಈ ಬೆಳೆ ಬೆಳೆಯಲು ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ವಿಜ್ಞಾನಿಗಳು ನೀಡುವ ಸಲಹೆ ಹಾಗೂ ಸೂಚನೆಗಳನ್ನು ಪಾಲಿಸಬೇಕು ಎಂದರು.ಇಪ್ಕೊ ರಾಜ್ಯ ಮಾರುಕಟ್ಟೆ ವ್ಯವಸ್ಥಾಪಕ ಡಾ.ಸಿ.ನಾರಾಯಣಸ್ವಾಮಿ ಮಾತನಾಡಿ, ಅಡ್ಡ ಪರಿಣಾಮಗಳಿಂದ ಮಣ್ಣಿನ ಫಲವತ್ತತೆಯ ಮೇಲೆ ಹೊಡೆತ ಬೀಳುತ್ತಿದ್ದು, ಅದನ್ನು ಸರಿಪಡಿಸಲು ಮೊದಲು ಬೆಳೆಗಳಿಗೆ ಕೆಮಿಕಲ್ ಫರ್ಟಿಲೈಸರ್ ಗಳ ಉಪಯೋಗ ಕಡಿಮೆ ಮಾಡಬೇಕು, ಇಫ್ಕೋ ಸಂಸ್ಥೆ ರೈತರ ಸಂಸ್ಥೆಯಾಗಿದ್ದು, ಮಣ್ಣಿನ ಫಲವತ್ತತೆಯ ಮೇಲೆ ಬೀಳುತ್ತಿರುವ ಹೊಡೆತ ನೀಗಿಸಲು ಇಫ್ಕೋ ನ್ಯಾನೋ ಯೂರಿಯಾ ಪ್ಲಸ್, ನ್ಯಾನೋ ಡಿಎಪಿ, ನ್ಯಾನೋ ಎನ್ ಪಿ ಕೆ ಪರಿಚಯಿಸಿದ್ದು ರೈತರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಟಿ ಕಾರ್ಯದರ್ಶಿ ಡಾ.ನರೇಶ್ ಬಾಬು ಮಾತನಾಡಿ, ಇಂದಿನ ಕಾರ್ಯಾಗಾರಕ್ಕೆ ಆಗಮಿಸಿರುವ ರೈತರು ಬೆಳೆಗಳ ಬಗ್ಗೆ ತಮಗಿರುವ ಸಮಸ್ಯೆಗಳನ್ನು ತಂತ್ರಜ್ಞರ, ವಿಜ್ಞಾನಿಗಳ ಜೊತೆ ಹಂಚಿಕೊಂಡು ಪರಿಹಾರದ ಕ್ರಮ ತಿಳಿದುಕೊಳ್ಳುವ ಜತೆಗೆ, ದಾಳಿಂಬೆ ಬೆಳೆಯನ್ನು ಸುಸ್ಥಿರವಾಗಿ ಹೇಗೆ ಬೆಳೆಯಬೇಕು. ಅಧಿಕ ಲಾಭ ಪಡೆಯಲು ಯಾವ ಕ್ರಮಗಳನ್ನು ಅನುಸರಿಸಬೇಕು. ಪ್ರಮುಖವಾಗಿ ಮಣ್ಣಿನ ಫಲವತ್ತತೆಯ ಮೇಲೆ ಕೆಟ್ಟ ಪರಿಣಾಮ ಬೀಳದಿರಲು ಅನುಸರಿಸಬೇಕಾದ ವಿಧಾನಗಳು ಮತ್ತು ಮುಂದಿನ ಪೀಳಿಗೆಗೆ ಉಪಯೋಗವಾಗುವಂತೆ ಹೇಗೆ ದಾಳಿಂಬೆ ಬೆಳೆ ಬೆಳೆಯಬೇಕು ಎಂಬುದರ ಬಗ್ಗೆ ಮಾಹಿತಿ ಪಡೆದಿದ್ದು, ಕೋಲಾರ- ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಪ್ರಗತಿ ಪರ ರೈತರಿಗೆ ತಂತ್ರಜ್ಞಾನದ ಕೊರತೆ ನೀಗಿಸಲು ಇಂದಿನ ಕಾರ್ಯಾಗಾರ ಆಯೋಜಿಸಿರುವುದಾಗಿ ತಿಳಿಸಿದರು.ಡಾ. ಎನ್. ಮಂಜುನಾಥ್ ತಾಂತ್ರಿಕ ಉಪನ್ಯಾಸ ನೀಡಿದರು.
ಶಿಬಿರದ ಮುಂಭಾಗದಲ್ಲಿ ನ್ಯಾನೋ ಡಿಎಪಿ ಮತ್ತು ಯೂರಿಯಾ ಕಂಪನಿ ಹಾಗೂ ನರ್ಸರಿ ಗಾರ್ಡನ್ ಬಗ್ಗೆಯೂ ಪ್ರಾತ್ಯಕ್ಷಿಕೆ ಹಾಗೂ ಮಾರಾಟ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.ಕಾರ್ಯಾಗಾರದಲ್ಲಿ ಹಿರಿಯ ವಿಜ್ಞಾನಿ ಡಾ. ಜೋಸ್ನಾ ಶರ್ಮ, ಕರ್ನಾಟಕ ದಾಳಿಂಬೆ ಬೆಳೆಗಾರರ ಸಂಘದ ಅಧ್ಯಕ್ಷ ಜೆ.ಸಿ.ಮುನೇಗೌಡ, ಜಿ.ಗುಣವಂತ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕಿ ಗಾಯಿತ್ರಿ, ಪಾಪಿರೆಡ್ಡಿ, ಎಂ.ಫಕ್ರುದೀನ್, ರಾಜಶೇಖರ್ ರೆಡ್ಡಿ ಮತ್ತಿತರರು ಇದ್ದರು.