ಸಾರಾಂಶ
ಕಾರವಾರ: ಜಿಲ್ಲೆಯಲ್ಲಿ ಸೋಮವಾರ ಮಳೆಯ ಅಬ್ಬರ ಕಡಿಮೆಯಾಗಿದೆ. ಕಾರವಾರ ಬಳಿ ಹಾದುಹೋದ ರಾಹೆ ೬೬ರ ಸುರಂಗದ ಬಳಿ ಕಲ್ಲು ರಸ್ತೆಗೆ ಉರುಳಿದೆ. ಇದರಿಂದ ಸಂಚಾರಕ್ಕೆ ಆತಂಕ ಉಂಟಾಗಿದೆ.
ಕಳೆದ ಎರಡು ದಿನಗಳ ಹಿಂದೆ ಬಹುತೇಕ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ಅದರಲ್ಲೂ ಕರಾವಳಿಯಲ್ಲಿ ಭಾರಿ ಮಳೆಯಾಗಿ ಜನಜೀವನ ಅಸ್ತವ್ಯಸ್ತವಾಗಿತ್ತು. ಸೋಮವಾರ ಬಹುತೇಕ ತಾಲೂಕಿನಲ್ಲಿ ಮಳೆ ಕಡಿಮೆಯಾಗಿದ್ದು, ಕೆಲವು ತಾಲೂಕಿನಲ್ಲಿ ತುಸು ಬಿಸಿಲ ವಾತಾವರಣವಿತ್ತು. ಪ್ರಸಕ್ತ ವರ್ಷ ಮುಂಗಾರು ಆರಂಭದಲ್ಲಿಯೇ ಭಟ್ಕಳದಲ್ಲಿ ಹೆಚ್ಚು ಮಳೆ ಸುರಿದಿದೆ. ಸತತ ಮಳೆ ಸುರಿದ ಕಾರಣ ವಾತಾವರಣ ತಂಪಾಗಿದ್ದು, ಸೆಕೆಯಿಂದ ಬಳಲಿದ್ದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.ಕಾರವಾರದ ಬಳಿ ಹಾದುಹೋದ ರಾಷ್ಟ್ರೀಯ ಹೆದ್ದಾರಿ ೬೬ರ ಸುರಂಗದ ಬಳಿ ಮಣ್ಣು ಸಡಿಲಗೊಂಡು ಕಲ್ಲುಗಳು ನೆಲಕ್ಕುರುಳಿದೆ. ಸತತ ಮಳೆ ಸುರಿದ ಕಾರಣ ಸುರಂಗ ಮೇಲ್ಭಾಗದಲ್ಲಿ ಮಣ್ಣು ಸಡಿಲಗೊಂಡಿದ್ದು, ಕಾರವಾರದಿಂದ ಅಂಕೋಲಾ, ಅಂಕೋಲಾ ಕಡೆಯಿಂದ ಕಾರವಾರ ಎರಡೂ ಸುರಂಗ ಸಮೀಪ ಕಲ್ಲುಗಳು ಬಿದ್ದಿವೆ. ಅದೃಷ್ಟವಶಾತ್ ವಾಹನ ಸವಾರರಿಗೆ ಅಪಾಯವಾಗಿಲ್ಲ. ಕಳೆದ ಬಾರಿ ಮಳೆಗಾಲದಲ್ಲಿ ಕೂಡಾ ಮಣ್ಣು, ಕಲ್ಲು ಕುಸಿತವಾಗಿತ್ತು. ಆದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಥವಾ ಐಆರ್‌ಬಿ ಕಲ್ಲು ಉರುಳದಂತೆ ಮಾಡಲು ಯಾವುದೇ ಕ್ರಮವಹಿಸಿಲ್ಲ. ಸುರಂಗದ ಮೂಲಕ ವಾಹನಗಳನ್ನು ತೆಗೆದುಕೊಂಡು ಹೋಗಲು ಭಯಪಡುವಂತಾಗಿದೆ. ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ನಿರ್ಮಿಸಲಾದ ಫ್ಲೈ ಒವರ್ ಕೆಳಗೆ ನೀರು ನಿಂತು ಕೆರೆಯಂತಾಗಿದೆ. ಮಳೆಯ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡದ ಕಾರಣ ನೀರೆಲ್ಲಾ ಫ್ಲೈ ಒವರ್ ಕೆಳಗಿನ ಖಾಲಿ ಜಾಗದಲ್ಲಿ ನಿಂತಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಗುತ್ತಿಗೆ ಪಡೆದ ಐಆರ್‌ಬಿ ಕಂಪನಿ ನಿರ್ಲಕ್ಷ್ಯದಿಂದ ಮಳೆಯಾದರೆ ಹೆದ್ದಾರಿ ಉದ್ದಕ್ಕೂ ನೀರು ನಿಲ್ಲುವುದು, ಮಣ್ಣು, ಕಲ್ಲು ಕುಸಿತ ಉಂಟಾಗುವ ಆತಂಕ ಎದುರಾಗಿದೆ.
ದಾಂಡೇಲಿಯ ಟೌನ್‌ಶಿಪ್‌ನ ಶ್ರೀ ರಾಘವೇಂದ್ರ ಮಠದ ಹತ್ತಿರದಲ್ಲಿ ರಸ್ತೆಯ ಬದಿಯಲ್ಲಿ ನಿಲ್ಲಿಸಿಟ್ಟಿದ್ದ ದ್ವಿಚಕ್ರ ವಾಹನದ ಮೇಲೆ ವಿದ್ಯುತ್ ಕಂಬ ಒಂದು ಮುರಿದು ಬಿದ್ದಿದೆ. ಉಸ್ಮಾನ್ ಹೈದರ್ ಶೇಖ್ ಎಂಬವರು ತಮ್ಮ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಹೋದ ಕೆಲವೇ ಕ್ಷಣದಲ್ಲಿ ವಿದ್ಯುತ್ ಕಂಬ ಉರುಳಿ ಬಿದ್ದಿದ್ದು, ಸಂಜೆಯ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಇದೆ ಸ್ಥಳದಲ್ಲಿ ನಿತ್ಯವೂ ಆಟವಾಡುತ್ತಿದ್ದರು. ಆ ವೇಳೆ ಕಂಬ ಉರುಳಿದ್ದರೆ ಭಾರಿ ಅನಾಹುತ ಉಂಟಾಗುತ್ತಿತ್ತು. ಶೇಖ್ ಅವರ ಬೈಕ್ ಮುಂಭಾಗ ಜಖಂಗೊಂಡಿದೆ.