ಸಾರಾಂಶ
ಪರಮಾಣು ಶಕ್ತಿಯ ಯೋಗ್ಯ ಬಳಕೆಯಿಂದ ಭಾರತದ ಪರಮಾಣು ಶಕ್ತಿ ಕ್ಷೇತ್ರವು ವಾರ್ಷಿಕವಾಗಿ 41 ಮಿಲಿಯನ್ ಟನ್ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ಕಡಿಮೆಗೊಳಿಸಿದೆ. 2070ರ ವೇಳೆಗೆ ಭಾರತದಲ್ಲಿ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ ಪ್ರಮಾಣ ಶೂನ್ಯ ಗುರಿಯನ್ನು ಸಾಧಿಸಲು ಭಾರತ ಬದ್ಧವಾಗಿದೆ. ಇಂಧನ ಭದ್ರತೆ ಮತ್ತು ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಪೂರೈಸಲು ಭಾರತೀಯ ಪರಮಾಣು ಶಕ್ತಿ ಕಾರ್ಯಕ್ರಮದ ಬೆಳವಣಿಗೆ ಮಹತ್ವ ಪಡೆದಿದೆ ಎಂದು ಬಿ. ವಿನೋದ್ ಕುಮಾರ್ ಹೇಳಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ವೈದ್ಯಕೀಯ ಕ್ಷೇತ್ರದಲ್ಲಿ ವಿಕಿರಣ ಮಾನ್ಯತೆಗಾಗಿ ರಾಷ್ಟ್ರೀಯ ನೋಂದಣಿಯನ್ನು ಅಭಿವೃದ್ಧಿಪಡಿಸುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಪರಮಾಣು ಶಕ್ತಿ ನಿಯಂತ್ರಣ ಮಂಡಳಿ (ಎಇಆರ್‌ಬಿ) ಅಧ್ಯಕ್ಷ ಡಿ. ಕೆ. ಶುಕ್ಲಾ ಹೇಳಿದರು.ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಇಂಡಿಯನ್ ಅಸೋಸಿಯೇಷನ್ ಫಾರ್ ರೇಡಿಯೇಷನ್ ಪ್ರೊಟೆಕ್ಷನ್ (ಐಎಆರ್‌ಪಿ) ಸಹಯೋಗದಲ್ಲಿ ಬುಧವಾರ ಆಯೋಜಿಸಿದ ಸುಸ್ಥಿರ ಪರಮಾಣು ಶಕ್ತಿಗಾಗಿ ವಿಕಿರಣ ರಕ್ಷಣೆ: ಹವಾಮಾನ ಮತ್ತು ತಾಂತ್ರಿಕ ಬದಲಾವಣೆಗಳಿಗೆ ಹೊಂದಿಕೊಳ್ಳುವ ಕುರಿತು 35 ನೇ ಐಎಆರ್‌ಪಿ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದರು.ವೈದ್ಯಕೀಯ ಕ್ಷೇತ್ರದ ಎಕ್ಸ್ ರೇ, ಸಿಟಿ ಸ್ಕ್ಯಾನ್‌ನಲ್ಲಿನಲ್ಲಿ ವಿಕಿರಣಕ್ಕೆ ಒಡ್ಡಿಕೊಳ್ಳುವ ಸಮಸ್ಯೆ ಇದೆ. ಇದನ್ನು ನಿಯಂತ್ರಿಸುವ ಹಾಗೂ ಸಂಯೋಜಿಸುವ ವ್ಯವಸ್ಥೆ ಇಲ್ಲ. ಒಬ್ಬ ರೋಗಿಯು ವೈದ್ಯರನ್ನು ಸಂಪರ್ಕಿಸಿದಾಗ ಸ್ಕ್ಯಾನ್‌ಗಳ ಮೂಲಕ ಈಗಾಗಲೇ ಪಡೆದ ವಿಕಿರಣದ ಪ್ರಮಾಣ ಎಷ್ಟು ಎಂದು ವೈದ್ಯರು ಹೇಗೆ ತಿಳಿಯಬೇಕು?. ಈ ಬಗ್ಗೆ ಪರಮಾಣು ಶಕ್ತಿ ಇಲಾಖೆ ಮತ್ತು ಆರೋಗ್ಯ ಸಚಿವಾಲಯದ ಮೂಲಕ ಸರ್ಕಾರ ಯಾವ ರೀತಿಯ ಕಾನೂನು ಚೌಕಟ್ಟು ರಚಿಸಬಹುದೆಂಬುವುದನ್ನು ಈ ಸಮ್ಮೇಳನದಲ್ಲಿ ನಿರ್ಧರಿಸಬೇಕು ಎಂದರು.ಕೈಗಾ ಜನರೇಟಿಂಗ್ ಸ್ಟೇಷನ್ ಸೈಟ್ ನಿರ್ದೇಶಕ ಬಿ. ವಿನೋದ್ ಕುಮಾರ್ ಮಾತನಾಡಿ, ಅಭಿವೃದ್ದಿ ಹೊಂದಿದ ಭಾರತದಲ್ಲಿ 8,180 ಮೆಗಾವ್ಯಾಟ್ ಸಾಮರ್ಥ್ಯದ 24 ಪರಮಾಣು ರಿಯಾಕ್ಟರ್‌ಗಳು ಕಾರ್ಯನಿರ್ವಹಿಸುತ್ತಿದೆ. 8,700 ಮೆಗಾವ್ಯಾಟ್ ಸಾಮರ್ಥ್ಯದ ಹೆಚ್ಚುವರಿ 11 ರಿಯಾಕ್ಟರ್‌ಗಳು ನಿರ್ಮಾಣ ಹಂತದಲ್ಲಿದ್ದು, ಪರಮಾಣು ಶಕ್ತಿಯ ಮೂಲಕ ಜಾಗತಿಕ ತಾಪಮಾನದ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಇರಿಸಲು ಪ್ರಯತ್ನಿಸಲಾಗುತ್ತಿದೆ. ಜತೆಗೆ ಇಂತಹ ಯೋಜನೆಗಳು ಇಂಧನ ಸ್ಥಾವರಗಳಿಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿ ದೊಡ್ಡ ಪ್ರಮಾಣದ ಶಕ್ತಿ ಹಾಗೂ ವಿದ್ಯುತ್ ಉತ್ಪಾದನೆಗೆ ಸಹಾಯವಾಗಲಿದೆ. ಜಾಗತಿಕವಾಗಿ ನಡೆಯುವ ನೆಟ್ ಝೀರೋ ನ್ಯೂಕ್ಲಿಯರ್ (ಎನ್‌ಝಡ್‌ಎನ್) ಯೋಜನಾ ಉಪಕ್ರಮವು 2050ರ ವೇಳೆಗೆ ಜಾಗತಿಕ ಪರಮಾಣು ಶಕ್ತಿಯ ಸಾಮರ್ಥ್ಯವನ್ನು ಹೆಚ್ಚಿಸಲಿದೆ ಎಂದರು.ಮಂಗಳೂರು ವಿವಿ ಕುಲಸಚಿವ ರಾಜು ಮೊಗವೀರ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ವಿವಿ ಮಾಜಿ ಕುಲಪತಿ ಪ್ರೊ.ಕೆ.ಸಿದ್ದಪ್ಪ, ಯೇನೆಪೋಯ ವಿವಿ ಕುಲಪತಿ ಪ್ರೊ.ಎಂ.ವಿಜಯ್‌ಕುಮಾರ್ ಮತ್ತಿತರರು ಇದ್ದರು.2070ಕ್ಕೆ ಭಾರತ ಶೂನ್ಯ ಇಂಗಾಲ ಹೊರಸೂಸುವಿಕೆ ಗುರಿಪರಮಾಣು ಶಕ್ತಿಯ ಯೋಗ್ಯ ಬಳಕೆಯಿಂದ ಭಾರತದ ಪರಮಾಣು ಶಕ್ತಿ ಕ್ಷೇತ್ರವು ವಾರ್ಷಿಕವಾಗಿ 41 ಮಿಲಿಯನ್ ಟನ್ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ಕಡಿಮೆಗೊಳಿಸಿದೆ. 2070ರ ವೇಳೆಗೆ ಭಾರತದಲ್ಲಿ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ ಪ್ರಮಾಣ ಶೂನ್ಯ ಗುರಿಯನ್ನು ಸಾಧಿಸಲು ಭಾರತ ಬದ್ಧವಾಗಿದೆ. ಇಂಧನ ಭದ್ರತೆ ಮತ್ತು ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಪೂರೈಸಲು ಭಾರತೀಯ ಪರಮಾಣು ಶಕ್ತಿ ಕಾರ್ಯಕ್ರಮದ ಬೆಳವಣಿಗೆ ಮಹತ್ವ ಪಡೆದಿದೆ ಎಂದು ಬಿ. ವಿನೋದ್ ಕುಮಾರ್ ಹೇಳಿದರು.