ಸಾರಾಂಶ
ಹದಿನಾರು ವರ್ಷ ಶಿಗ್ಗಾಂವಿ-ಸವಣೂರು ಮತಕ್ಷೇತ್ರದ ಶಾಸಕರಾಗಿದ್ದ ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಈ ಕ್ಷೇತ್ರದ ಅಭಿವೃದ್ಧಿಗೆ ಏನೇನೂ ಮಾಡಿಲ್ಲ. ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದ ಕ್ಷೇತ್ರಗಳಲ್ಲಿ ಇದೂ ಒಂದು. ಬಿಜೆಪಿ ಮತ್ತು ಕಾಂಗ್ರೆಸಿಗರ ಭ್ರಷ್ಟ ಮತ್ತು ಅನೀತಿಯುತ ರಾಜಕೀಯ ಹೊಂದಾಣಿಕೆಯಿಂದಾಗಿ ಅವರು ನಿರಂತರವಾಗಿ ಗೆದ್ದರೇ ಹೊರತು ತಾವು ಮಾಡಿದ ಅಭಿವೃದ್ಧಿ ಕೆಲಸಗಳಿಂದಲ್ಲ ಎಂದು ಕೆಆರ್‌ಎಸ್ ಪಕ್ಷದ ಅಭ್ಯರ್ಥಿ ರವಿ ಕೃಷ್ಣರೆಡ್ಡಿ ಆರೋಪಿಸಿದರು.
ಶಿಗ್ಗಾಂವಿ: ಹದಿನಾರು ವರ್ಷ ಶಿಗ್ಗಾಂವಿ-ಸವಣೂರು ಮತಕ್ಷೇತ್ರದ ಶಾಸಕರಾಗಿದ್ದ ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಈ ಕ್ಷೇತ್ರದ ಅಭಿವೃದ್ಧಿಗೆ ಏನೇನೂ ಮಾಡಿಲ್ಲ. ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದ ಕ್ಷೇತ್ರಗಳಲ್ಲಿ ಇದೂ ಒಂದು. ಬಿಜೆಪಿ ಮತ್ತು ಕಾಂಗ್ರೆಸಿಗರ ಭ್ರಷ್ಟ ಮತ್ತು ಅನೀತಿಯುತ ರಾಜಕೀಯ ಹೊಂದಾಣಿಕೆಯಿಂದಾಗಿ ಅವರು ನಿರಂತರವಾಗಿ ಗೆದ್ದರೇ ಹೊರತು ತಾವು ಮಾಡಿದ ಅಭಿವೃದ್ಧಿ ಕೆಲಸಗಳಿಂದಲ್ಲ ಎಂದು ಕೆಆರ್‌ಎಸ್ ಪಕ್ಷದ ಅಭ್ಯರ್ಥಿ ರವಿ ಕೃಷ್ಣರೆಡ್ಡಿ ಆರೋಪಿಸಿದರು.
ಕ್ಷೇತ್ರದ ಹೋತನಹಳ್ಳಿ, ಬಂಕಾಪುರ, ಶಿಡ್ಲಾಪುರ, ಗುಡ್ಡಾದಚನ್ನಾಪುರ, ಹುಲಿಕಟ್ಟೆಯಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು, ಬೊಮ್ಮಾಯಿ ಅವರು ಮಾಡಿರುವ ನೀರಾವರಿ ಯೋಜನೆಗಳು ವಿಫಲವಾಗಿವೆ. ಸುಮಾರು ಎರಡು ಸಾವಿರ ಕೋಟಿ ರುಪಾಯಿ ಖರ್ಚು ಮಾಡಿರುವ ಈ ಯೋಜನೆಗಳ ವೈಶಿಷ್ಟ್ಯವೇನೆಂದರೆ ಮಳೆಗಾಲದಲ್ಲಿ ಬೇಡವೆಂದರೂ ಪೈಪ್‌ಗಳಲ್ಲಿ ನೀರು ಬರುತ್ತದೆ, ಬೇಸಿಗೆಯಲ್ಲಿ ನೀರು ಬೇಕೆಂದಾಗ ಗಾಳಿ ಬರುತ್ತದೆ ಎಂದು ಜನರು ವ್ಯಂಗ್ಯವಾಡುತ್ತಾರೆ. ಬೊಮ್ಮಾಯಿ ಅವರ ನೀರಾವರಿ ಯೋಜನೆಗಳು ಕ್ಷೇತ್ರದಲ್ಲಿ ನಗೆಪಾಟಲಿನ ಸರಕು. ಇಂತಹ ಅವೈಜ್ಞಾನಿಕ ಮತ್ತು ಅವೈಚಾರಿಕ ಯೋಜನೆಗಳನ್ನು ಕೊಟ್ಟವರನ್ನು ತಿರಸ್ಕರಿಸಬೇಕು ಎಂದು ಹೇಳಿದರು.ಶಿಗ್ಗಾಂವಿ-ಸವಣೂರು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಅತಿವೃಷ್ಟಿಯಾಗಿ ರೈತರ ಬೆಳೆ ಹಾನಿಯಾಗಿದ್ದಾಗ ಅವರ ಪರವಾಗಿ ಬಿಜೆಪಿಯ ಮಾಜಿ ಶಾಸಕ ಬೊಮ್ಮಾಯಿಯಾಗಲಿ, ಈಗ ಅಭ್ಯರ್ಥಿಯಾಗಿರುವ ಅವರ ಮಗನಾಗಲಿ ಒಮ್ಮೆಯೂ ಧ್ವನಿಯೆತ್ತಲಿಲ್ಲ. ಅಪ್ಪ-ಮಗನಿಗೆ ರೈತರ ಕುರಿತು ಯಾವುದೇ ಕಾಳಜಿ ಇಲ್ಲ. ಅದೇ ರೀತಿ ತಮ್ಮದೇ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದರೂ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ರೈತರ ಪರ ಮಾತನಾಡಿದ ಉದಾಹರಣೆಯೇ ಇಲ್ಲ. ಇಂತಹ ರೈತ ವಿರೋಧಿಗಳನ್ನು ಜನ ತಿರಸ್ಕರಿಸಬೇಕು ಎಂದು ಕರೆ ನೀಡಿದರು.ಬೆಳೆಹಾನಿ ಪರಿಹಾರಕ್ಕೆ ಆಗ್ರಹಿಸಿ ನೂರಾರು ರೈತರೊಂದಿಗೆ ನಾವು ಶಿಗ್ಗಾಂವಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಸರ್ಕಾರವನ್ನು ಒತ್ತಾಯಿಸಿದ್ದೆವು. ರೈತನ ಮಗನಾದ ನನಗೆ ರೈತರ ಸಮಸ್ಯೆಗಳು ತಿಳಿದಿವೆ. ನೀವು ನನ್ನನ್ನು ಬೆಂಬಲಿಸಿ ಗೆಲ್ಲಿಸಿದರೆ ವೈಜ್ಞಾನಿಕ ಬೆಳೆ ಮತ್ತು ಬೆಲೆ ಪದ್ಧತಿ ಜಾರಿ ಮಾಡುತ್ತೇನೆ, ನಿಮ್ಮ ಆದಾಯ ಮತ್ತು ಉಳಿತಾಯ ಹೆಚ್ಚಿಸುತ್ತೇನೆ ಎಂದು ತಿಳಿಸಿದರು.
ಆರೋಗ್ಯ ಸ್ವಾಮಿ, ಮಲ್ಲಿಕಾರ್ಜುನ ಬಂಕಾಪುರ, ಧರ್ಮ ರಾಜ್ , ಈರಣ್ಣ ಮುಂತಾದವರು ಇದ್ದರು.