ಕಾಂಗ್ರೆಸ್ ತಿರಸ್ಕರಿಸಿ: ಈಶಾನ್ಯ ಪದವೀಧರರಿಗೆ ಪ್ರಹ್ಲಾದ ಜೋಶಿ ಕರೆ

| Published : May 25 2024, 12:49 AM IST

ಕಾಂಗ್ರೆಸ್ ತಿರಸ್ಕರಿಸಿ: ಈಶಾನ್ಯ ಪದವೀಧರರಿಗೆ ಪ್ರಹ್ಲಾದ ಜೋಶಿ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ಜನಸಾಮಾನ್ಯರು ಈ ಲೋಕಸಭಾ ಚುನಾವಣೆಯಲ್ಲಿ ಅಂತಹ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು ಪದವೀಧರ ಕ್ಷೇತ್ರಗಳಲ್ಲೂ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ಸನ್ನು ತಿರಸ್ಕರಿಸಬೇಕಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಇಡೀ ದೇಶದಲ್ಲಿ ಕಾಂಗ್ರೆಸ್ ಈ ಬಾರಿ ಅಧಿಕೃತ ವಿರೋಧ ಪಕ್ಷ ಕೂಡ ಆಗುವುದಿಲ್ಲ. ಜನಸಾಮಾನ್ಯರು ಈ ಲೋಕಸಭಾ ಚುನಾವಣೆಯಲ್ಲಿ ಅಂತಹ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು ಪದವೀಧರ ಕ್ಷೇತ್ರಗಳಲ್ಲೂ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ಸನ್ನು ತಿರಸ್ಕರಿಸಬೇಕಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ನೂತನ ವಿದ್ಯಾಲಯ ಸಂಸ್ಥೆಯ ಸಂಗಮೇಶ್ವರ ಸಭಾಂಗಣದಲ್ಲಿ ಮೇ 23ರಂದು ಪದವೀಧರ ಮತದಾರರನ್ನುದ್ದೇಶಿಸಿ ಮಾತನಾಡಿ, ದೇಶದಲ್ಲಿ ಬಿಜೆಪಿ ಈ ಬಾರಿ 370 ಸ್ಥಾನಗಳನ್ನು ಗಳಿಸಿ ಮೂರನೇ ಬಾರಿಗೆ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಆಗಲಿದ್ದಾರೆ. ಜೊತೆಗೆ ಕರ್ನಾಟಕದಲ್ಲಿ 24 ಸ್ಥಾನಗಳನ್ನು ಬಿಜೆಪಿ- ಜೆಡಿಎಸ್ ಮೈತ್ರಿಕೂಟ ಗೆಲ್ಲುವುದು ಶತಸಿದ್ಧ. ಈ ಬಗ್ಗೆ ನಿಖರವಾದ ವರದಿ ಲಭ್ಯವಾಗಿದ್ದು ಅನುಮಾನವೇ ಬೇಡ ಎಂದರು.

ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಎಷ್ಟೇ ಭಾಷಣ ಮಾಡಲಿ ಎಷ್ಟೇ ಹಣ ಚೆಲ್ಲಿದ್ದರೂ ಬಿಜೆಪಿ ಮೈತ್ರಿಕೂಟದ ಗೆಲುವು ನಿಶ್ಚಿತವಾಗಿದ್ದು ಕಾಂಗ್ರೆಸ್ ಪಕ್ಷವನ್ನು ಇತಿಶ್ರೀ ಮಾಡಲು ಜನಸಾಮಾನ್ಯರು ನಿರ್ಧರಿಸಿದ್ದು ಜೂನ್ ಮೂರರಂದು ನಡೆಯುವ ಪದವೀಧರ ಮತಕ್ಷೇತ್ರಗಳ ಚುನಾವಣೆಯಲ್ಲಿ ಪ್ರಬುದ್ಧ ಮತದಾರರು ಕೂಡಾ ಕಾಂಗ್ರೆಸ್ಸನ್ನು ಸೋಲಿಸಲು ನಿರ್ಧಾರ ಕೈಗೊಳ್ಳಬೇಕು ಎಂದರು.

ಅಮರನಾಥ ಪಾಟೀಲ್ ಅವರು ಬಿಜೆಪಿ ಅಭ್ಯರ್ಥಿಯಾಗಿದ್ದು ಈ ಹಿಂದಿನ ಅವಧಿಯಲ್ಲಿ ಶಿಕ್ಷಣ ರಂಗದ ಹಾಗೂ ಪದವೀಧರರ ಸಮಸ್ಯೆಗಳಿಗೆ ಸ್ಪಂದಿಸಿ ಉತ್ತಮ ಕೆಲಸ ಮಾಡಿ ಹೆಸರು ಪಡೆದಿದ್ದರು. ಆದರೆ ಕಳೆದ ಬಾರಿ ಗೆದ್ದ ಕಾಂಗ್ರೆಸ್ಸಿನ ಡಾ. ಚಂದ್ರಶೇಖರ್ ಪಾಟೀಲ್ ವಿಧಾನ ಪರಿಷತ್ತಿನಲ್ಲಿ ತಮ್ಮ ಅವಧಿಯಲ್ಲಿ ಒಂದೇ ಒಂದು ಪ್ರಶ್ನೆ ಕೇಳದೆ ಯಾವುದೇ ಪತ್ರಿಕೆಗಳಲ್ಲಾಗಲಿ ವಿಡಿಯೋ ತುಣುಕುಗಳಾಗಲಿ ಇಲ್ಲದೆ ತುಟಿ ಬಿಚ್ಚದ ಸದಸ್ಯರಾಗಿದ್ದರು. ಪದವೀಧರರ ಸಮಸ್ಯೆಗಳಿಗೆ ಹಾಗೂ ಅಭಿವೃದ್ಧಿಗೆ ಅವರು ಸ್ಪಂದಿಸಲಿಲ್ಲ ಎಂದು ದೂರಿದರು.

ಕರ್ನಾಟಕ, ತೆಲಂಗಾಣ ಹಿಮಾಚಲ ಪ್ರದೇಶದಲ್ಲಿ ಮಾತ್ರ ಕಾಂಗ್ರೆಸ್ ಆಡಳಿತದಲ್ಲಿದ್ದು ಲೋಕಸಭಾ ಚುನಾವಣಾ ಫಲಿತಾಂಶ ಘೋಷಣೆಯ ನಂತರ ಹಿಮಾಚಲ ಪ್ರದೇಶದಲ್ಲಿ ನಡೆದ 5 ವಿಧಾನಸಭಾ ಕ್ಷೇತ್ರಗಳ ಮರು ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಲಿದ್ದು ಅಲ್ಲಿಯೂ ಈಗಿನ ಸರಕಾರ ಪತನ ಹೊಂದಿ ಕಾಂಗ್ರೆಸ್ ಪಕ್ಷ ಮೂಲೆಗುಂಪಾಗಲಿದೆ ಎಂದರು.

ಶ್ವೇತ ಪತ್ರ ಬಿಡುಗಡೆಗೆ ಆಗ್ರಹ: ರವಿಕುಮಾರ್

ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಪರಿಸ್ಥಿತಿ ತೀರ ಕೆಳಮಟ್ಟದಲ್ಲಿದ್ದು ಎಸ್ಎಸ್ಎಲ್ಸಿ ಫಲಿತಾಂಶ ಇದಕ್ಕೆ ನಿದರ್ಶನವಾಗಿದೆ. ಉಡುಪಿ ದಕ್ಷಿಣ ಕನ್ನಡ ಜಿಲ್ಲೆ 94 ಶೇಕಡಾ ಫಲಿತಾಂಶ ಬಂದಿದ್ದು ಯಾದಗಿರಿ ಶೇಕಡ 50ರಷ್ಟು ಇದ್ದು ಇನ್ನೆಷ್ಟು ವರ್ಷಗಳಲ್ಲಿ ಆ ಜಿಲ್ಲೆಗಳಂತೆ ಆಗಲು ಶ್ರಮಿಸಬೇಕಾಗಿದೆ ಎಂದು ಪ್ರಶ್ನಿಸಿದರು. ಈ ಏಳು ಜಿಲ್ಲೆಗಳ ಶೈಕ್ಷಣಿಕ ಅಧ್ಯಯನ ಮಾಡಲು ಮಾತ್ರವಲ್ಲ ಔದ್ಯೋಗಿಕ ಪರಿಸ್ಥಿತಿಯ ಕುರಿತು ಸರ್ವೇಕ್ಷಣೆ ನಡೆಸಲು ಹಾಗೂ 371 ಜೆ ಕಲಂ ಪ್ರಕಾರ ಬೇಡಿಕೆ ಈಡೇರಿಸಿದ್ದರ ಬಗ್ಗೆ ಕೂಡಲೆ ಶ್ವೇತ ಪತ್ರ ಬಿಡುಗಡೆ ಮಾಡುವಂತೆ ವಿಧಾನಪರಿಷತ್ ಸದಸ್ಯರಾದ ರವಿಕುಮಾರ್ ಒತ್ತಾಯಿಸಿದರು.

ಅಭ್ಯರ್ಥಿ ಅಮರನಾಥ ಪಾಟೀಲ್, ಮುಖಂಡ ಸುರೇಶ್ ಸಜ್ಜನ್ ಮಾತನಾಡಿದರು. ನೂತನ ವಿದ್ಯಾಲಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಗೌತಮ್ ಜಾಗೀರದಾರ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಬಸವರಾಜ್ ಮತ್ತಿಮೂಡು, ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ್, ಸುಭಾಷ್ ಗುತ್ತೇದಾರ್ ಜೆಡಿಎಸ್ ನ ಕಾರ್ಯಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದ್ದೆವಾಡಗಿ, ಈಶ್ವರ್ ಸಿಂಗ್ ಠಾಕೂರ್, ರವೀಂದ್ರ ಟೆಂಗಳಿ ವಿದ್ಯಾಸಾಗರ ಕುಲಕರ್ಣಿ, ಮಾಜಿ ಸಚಿವರಾದ ಬಾಬುರಾವ್ ಚೌಹಾಣ್ ಇದ್ದರು.