ಕಾರ್ಮಿಕ ರಾಜೇಶ್ ಸಾವಿಗೆ ಕಾರ್ಖಾನೆ ಆಡಳಿತ ಮಂಡಳಿ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಕಾರ್ಖಾನೆ ದ್ವಾರದ ಮುಂದೆ ಮೃತ ಕಾರ್ಮಿಕನ ಶವವಿಟ್ಟು ಸಂಬಂಧಿಕರು ಪ್ರತಿಭಟನೆ ನಡೆಸಿ, ರಾಜೇಶ್ ಹೃದಯಘಾತದಿಂದ ಕುಸಿದು ಬಿದ್ದು ಒದ್ದಾಡುತ್ತಿದ್ದರೂ ತಕ್ಷಣ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸದೆ ನಿರ್ಲಕ್ಷ್ಯ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಆಡಳಿತ ಮಂಡಳಿ ನಿರ್ಲಕ್ಷ್ಯದಿಂದ ಕಾರ್ಮಿಕ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ಆರೋಪಿಸಿ ತಾಲೂಕಿನ ಕೋರಮಂಡಲ್ ಸಕ್ಕರೆ ಕಾರ್ಖಾನೆ ಎದುರು ಮೃತ ಕಾರ್ಮಿಕನ ಶವವಿಟ್ಟು ಸಂಬಂಧಿಕರು ಮಂಗಳವಾರ ಪ್ರತಿಭಟನೆ ನಡೆಸಿದರು.

ತಾಲೂಕಿನ ಮಾಕವಳ್ಳಿ ಲಕ್ಕೇಗೌಡರ ಪುತ್ರ ರಾಜೇಶ್ (45) ಮೃತಪಟ್ಟವರು. ಹೊರಗುತ್ತಿಗೆ ನೌಕರನಾಗಿ ರಾಜೇಶ್ ಕರ್ತವ್ಯ ನಿರ್ವಹಿಸುತ್ತಿದ್ದರು. ಸೋಮವಾರ ರಾತ್ರಿ ಪಾಳಿಯ ಕರ್ತವ್ಯಕ್ಕೆ ಹಾಜರಾಗಿ ಕೆಲಸ ಮಾಡುತ್ತಿದ್ದಾಗ ಮಂಗಳವಾರ ಬೆಳಗಿನ ಜಾವ 5.30ರ ವೇಳೆ ಹೃದಯಾಘಾತಕ್ಕೆ ಒಳಗಾಗಿ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾರೆ.

ನಂತರ ಕಾರ್ಮಿಕನನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

ಕಾರ್ಮಿಕ ರಾಜೇಶ್ ಸಾವಿಗೆ ಕಾರ್ಖಾನೆ ಆಡಳಿತ ಮಂಡಳಿ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಕಾರ್ಖಾನೆ ದ್ವಾರದ ಮುಂದೆ ಮೃತ ಕಾರ್ಮಿಕನ ಶವವಿಟ್ಟು ಸಂಬಂಧಿಕರು ಪ್ರತಿಭಟನೆ ನಡೆಸಿದರು. ರಾಜೇಶ್ ಹೃದಯಘಾತದಿಂದ ಕುಸಿದು ಬಿದ್ದು ಒದ್ದಾಡುತ್ತಿದ್ದರೂ ತಕ್ಷಣ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸದೆ ನಿರ್ಲಕ್ಷ್ಯ ಮಾಡಲಾಗಿದೆ ಎಂದು ದೂರಿದರು.

ಗುತ್ತಿಗೆ ಕಾರ್ಮಿಕನಾಗಿದ್ದರಿಂದ ಸಮಯ ವ್ಯರ್ಥ ಮಾಡಿದ್ದು ಕಾರ್ಖಾನೆಯೊಳಗೆ ತಕ್ಷಣ ಚಿಕಿತ್ಸೆ ಸಿಗದ ಕಾರಣ ನೌಕರ ಮೃತಪಟ್ಟಿದ್ದಾನೆ. ಈತನಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಇದರಲ್ಲಿ ಒಬ್ಬ ಮಗ ಬುದ್ದಿಮಾಂದ್ಯ. ಇವರ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೌಕರನ ಸಾವಿನ ನೈತಿಕ ಜವಾಬ್ದಾರಿ ಹೊತ್ತು ಕಾರ್ಖಾನೆಯೇ ಮೃತನ ಕುಟುಂಬಕ್ಕೆ ಪರಿಹಾರ ನೀಡುವಂತೆ ಮೃತನ ಕುಟುಂಬಸ್ಥರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ, ತಾಲೂಕು ಅಧ್ಯಕ್ಷ ಪುಟ್ಟೇಗೌಡ, ಶಾಸಕರ ಸಹೋದರ ಎಚ್.ಟಿ.ಲೋಕೇಶ್, ಕರೋಟಿ ತಮ್ಮಯ್ಯ ಹಲವರು ಇದ್ದರು.

ಡಿ.ಮಹಾಲಿಂಗೇಗೌಡ ನಿಧನ

ಮಂಡ್ಯ:

ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ಡಿ.ಮಹಾಲಿಂಗೇಗೌಡ- ಮುದ್ದೇಗೌಡ (73) ಮಂಗಳವಾರ ಮುಂಜಾನೆ ನಿಧನರಾದರು.

ತಾಲೂಕಿನ ಚಿಕ್ಕಮಂಡ್ಯ ಗ್ರಾಮದ ದಿ.ದೊಳ್ಳೇಗೌಡರ ಪುತ್ರ ಡಿ.ಮಹಾಲಿಂಗೇಗೌಡರು ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಗ್ರಾಮ ಲೆಕ್ಕಾಧಿಕಾರಿಗಳಾಗಿ ಹನಗನಹಳ್ಳಿ, ಹೊಡಾಘಟ್ಟ, ಮುತ್ತೇಗೆರೆ ವ್ಯಾಪ್ತಿಯಲ್ಲಿ ಸುಮಾರು 35 ವರ್ಷಗಳ ಕಾಲ ಕಾರ್ಯನಿರ್ವಹಿಸಿ ಜನಮನ್ನಣೆ ಗಳಿಸಿದ್ದರು.

ಚಿಕ್ಕಮಂಡ್ಯ ಗ್ರಾಮದಲ್ಲಿ ಸುಮಾರು 20 ವರ್ಷಗಳ ಕಾಲ ಶ್ವೇತ ಮೆಡಿಕಲ್ಸ್ ಔಷಧಿ ಅಂಗಡಿಯನ್ನು ತೆರೆದು ಜನತೆಗೆ ಉತ್ತಮ ಸೇವೆ ಒದಗಿಸಿದ್ದರು. ಮೃತರು ಓರ್ವ ಪುತ್ರ, ಇಬ್ಬರು ಪುತ್ರಿಯರು, ಇಬ್ಬರು ಸಹೋದರಿದ್ದಾರೆ.

ಮೃತರ ಪುತ್ರಿ ಶ್ವೇತ ಲಂಡನ್‌ನಲ್ಲಿ ಉದ್ಯೋಗದಲ್ಲಿದ್ದು, ಅವರು ಬುಧವಾರ ಆಗಮಿಸುವ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆಯನ್ನು ಬುಧವಾರ ಮಧ್ಯಾಹ್ನ 12 ಗಂಟೆಗೆ ಸ್ವಗ್ರಾಮದಲ್ಲಿ ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.