ಸಾರಾಂಶ
ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆಗೆ ಸರ್ಕಾರ ನೀಡಬೇಕಾದ ₹250 ಕೋಟಿ ಬಾಕಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಶಾಸಕ ಮಹೇಶ ಟೆಂಗಿನಕಾಯಿ ಆಗ್ರಹಿಸಿದರು.
ಬೆಂಗಳೂರು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ ಅವರು ಈ ವಿಷಯ ಪ್ರಸ್ತಾಪಿಸಿದರು.ಹುಬ್ಬಳ್ಳಿ- ಧಾರವಾಡದ ರಸ್ತೆಗಳ ಪರಿಸ್ಥಿತಿ ಅಯೋಮಯವಾಗಿದೆ. ಎಲ್ಲವೂ ತಗ್ಗು ಗುಂಡಿಗಳಿಂದ ಕೂಡಿದೆ. ತಗ್ಗುಗಳಲ್ಲಿ ರಸ್ತೆಗಳನ್ನು ಹುಡುಕುವ ಪರಿಸ್ಥಿತಿ ಎದುರಾಗಿದೆ. ಇದರಿಂದ ಸಾರ್ವಜನಿಕರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ ಎಂದು ಹುಬ್ಬಳ್ಳಿ ರಸ್ತೆಗಳ ಫೋಟೋ ಸಮೇತವಾಗಿ ಸದನದಲ್ಲಿ ಪ್ರದರ್ಶಿಸಿ ವಿವರಿಸಿದರು.
ರಾಜ್ಯ ಸರ್ಕಾರದಿಂದ ಹುಬ್ಬಳ್ಳಿ- ಧಾರವಾಡ ನಗರಕ್ಕೆ ಈವರೆಗೆ ಯಾವುದೇ ದೊಡ್ಡ ಅನುದಾನ ಬಂದಿಲ್ಲ ಎಂದು ಆರೋಪಿಸಿದರು.ಹುಬ್ಬಳ್ಳಿ- ಧಾರವಾಡ ಮಹಾನಗರದಲ್ಲಿ ಕೆರೆ ಮತ್ತು ಉದ್ಯಾನವನ ಅಭಿವೃದ್ಧಿಯು ಕಳೆದ ಮೂರು ವರ್ಷಗಳಿಂದ ಅನುದಾನದ ಕೊರತೆಯಿಂದ ಬಾಕಿ ಉಳಿದಿದೆ. ಅದನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಶಾಸಕ ಟೆಂಗಿನಕಾಯಿ ಆಗ್ರಹಿಸಿದರು.
ಉದ್ಯಾನ ಮತ್ತು ಕೆರೆಗಳ ಅಭಿವೃದ್ಧಿಗೆ ಒಂದು ಏಜೆನ್ಸಿ ಬದಲಿಗೆ ನಾಲ್ಕೈದು ಕನ್ಸಲ್ಟಿಂಗ್ ಏಜೆನ್ಸಿಗಳಿಗೆ ಸಂಪರ್ಕ ಮಾಡಿದರೆ ಒಳ್ಳೆಯದು ಎಂದು ಸಲಹೆ ನೀಡಿದರುಆಶ್ರಯ ಯೋಜನೆ: ಪ್ರತಿನಿತ್ಯ ನನ್ನ ಕ್ಷೇತ್ರದಲ್ಲಿ ಬಡ ಜನರ ಸೂರಿನ ಸಲುವಾಗಿ ಅಲೆದಾಡುತ್ತಾರೆ. ಅವರಿಗೆ ಆಶ್ರಯ ಯೋಜನೆ ಮಾಡಲು ನಮ್ಮ ಕ್ಷೇತ್ರದಲ್ಲಿ ಲ್ಯಾಂಡ್ ಬ್ಯಾಂಕ್ ಇಲ್ಲ ಆದ್ದರಿಂದ ಸರ್ಕಾರವು 10 ಎಕರೆ ಭೂಮಿಯನ್ನು ಸೂರಿಗಾಗಿ ಕೂಡಲೇ ಮಂಜೂರು ಮಾಡಬೇಕೆಂದು ಒತ್ತಾಯಿಸಿದರು.
ಹುಬ್ಬಳ್ಳಿ- ಧಾರವಾಡಕ್ಕೆ ಐವತ್ತು ಕೋಟಿ ರುಪಾಯಿ ವಿಶೇಷ ಪ್ಯಾಕೇಜ್ ಅನ್ನು ರಸ್ತೆ ಯುಜಿಡಿ ಮಾಡಲು ತಕ್ಷಣ ಬಿಡುಗಡೆ ಮಾಡುವಂತೆ ಸದನದಲ್ಲಿ ಆಗ್ರಹಿಸಿದರು.