ನವದೆಹಲಿ: ತಮಿಳುನಾಡಿಗೆ 15 ದಿನ ನಿತ್ಯ 12 ಸಾವಿರ ಕ್ಯುಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ(ಸಿಡಬ್ಲ್ಯುಎಂಎ) ನೀಡಿರುವ ನಿರ್ದೇಶನ ಪಾಲಿಸುವಂತೆ ಸುಪ್ರೀಂ ಕೋರ್ಟ್ ಕರ್ನಾಟಕಕ್ಕೆ ನಿರ್ದೇಶನ ನೀಡಿದೆ. ಇದರೊಂದಿಗೆ ಬರಗಾಲದ ಪರಿಸ್ಥಿತಿ ಎದುರಿಸುತ್ತಿರುವ ಕರ್ನಾಟಕಕ್ಕೆ ಕಾವೇರಿ ಸಂಕಟ ಇನ್ನಷ್ಟು ದಿನ ಮುಂದುವರಿಯುವುದು ಖಚಿತವಾಗಿದೆ.
ಈ ನಡುವೆ ಇತ್ತೀಚಿನ ಸಿಡಬ್ಲ್ಯುಆರ್‌ಸಿ ಮತ್ತು ಸಿಡಬ್ಲ್ಯುಎಂಎ ಆದೇಶ ಪಾಲನೆ ನಿಟ್ಟಿನಲ್ಲಿ ಕಬಿನಿ ಮತ್ತು ಕೆಆರ್‌ಎಸ್ ಆಣೆಕಟ್ಟೆಯಿಂದ ಹೆಚ್ಚುವರಿ ನೀರು ಬಿಡುತ್ತಿಲ್ಲ ಎಂಬ ಕರ್ನಾಟಕದ ಅಧಿಕಾರಿಗಳ ವಾದ ಸುಳ್ಳು ಎಂದು ಸೋಮವಾರ ನ್ಯಾಯಾಲಯದಲ್ಲಿ ಸಾಬೀತಾಗಿದೆ. ಕಾರಣ, ತ.ನಾಡಿಗೆ ನಿತ್ಯ 12000 ಕ್ಯುಸೆಕ್ ನೀರು ಹರಿಸಲಾಗುತ್ತಿದೆ ಎಂದು ಸ್ವತಃ ಕರ್ನಾಟಕ ಸರ್ಕಾರವೇ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದೆ.ತ.ನಾಡು ಕ್ಯಾತೆ:
ಜೂನ್, ಜುಲೈ ತಿಂಗಳ ಬಾಕಿ ನೀರು ಬಿಡುಗಡೆ ಕೋರಿ ತಮಿಳುನಾಡು ಸರ್ಕಾರ ಇತ್ತೀಚೆಗೆ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಸೋಮವಾರ ಈ ಅರ್ಜಿ ವಿಚಾರಣೆ ವೇಳೆ, ‘ಕರ್ನಾಟಕದ ಡ್ಯಾಂಗಳಲ್ಲಿ ಶೇ.76ರಷ್ಟು ನೀರಿದೆ. ಆದರೂ ಕರ್ನಾಟಕ ನಮಗೆ ನೀರು ಹರಿಸುತ್ತಿಲ್ಲ. ಕರ್ನಾಟಕ ತನ್ನ ರೈತರಿಗೆ ನೀರು ಬಿಡುಗಡೆ ಆರಂಭಿಸಿದೆ. ಆದರೆ ನಮಗೆ ನೀರು ಹರಿಸುತ್ತಿಲ್ಲ. ಪರಿಣಾಮ ನಾವು ನಮ್ಮ ರೈತರಿಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ’ ಎಂದು ಆರೋಪಿಸಿತು.ತಿರುಗೇಟು:
ತ.ನಾಡಿನ ವಾದ ಆಲಿಸಿದ ನ್ಯಾಯಪೀಠ, ನೀವೇಕೆ ನೀರು ಬಿಡುತ್ತಿಲ್ಲ ಎಂದು ಕರ್ನಾಟಕ ಸರ್ಕಾರವನ್ನು ಪ್ರಶ್ನಿಸಿತು. ಈ ವೇಳೆ ತ.ನಾಡು ಸರ್ಕಾರದ ವಾದವನ್ನು ಸ್ಪಷ್ಟವಾಗಿ ಅಲ್ಲಗಳೆದ ಕರ್ನಾಟಕ ಸರ್ಕಾರದ ಪರ ಹಿರಿಯ ವಕೀಲ ಶ್ಯಾಮ್ ದಿವಾನ್, ‘ಮೊದಲಿಗೆ 15 ದಿನಗಳ ಕಾಲ ನಿತ್ಯ 3500 ಕ್ಯುಸೆಕ್ ಮತ್ತು ಬಳಿಕ 15 ದಿನಗಳ ಕಾಲ ನಿತ್ಯ 12000 ಕ್ಯುಸೆಕ್ ನೀರು ಹರಿಸುವಂತೆ ಆದೇಶಿಸಲಾಗಿತ್ತು. ಇಷ್ಟು ಪ್ರಮಾಣದ ನೀರು ಹರಿಸುವುದು ಕರ್ನಾಟಕದ ಪಾಲಿಗೆ ಅತ್ಯಂತ ಕಷ್ಟವಾದರೂ ಆ ಪ್ರಮಾಣವನ್ನು ಕಾಪಾಡುವಂತೆ ಸೂಚಿಸಲಾಗಿದೆ’ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಈ ಮೂಲಕ ಸದ್ಯ ತ.ನಾಡಿಗೆ ನಿತ್ಯ 12000 ಕ್ಯುಸೆಕ್ ನೀರು ಹರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಈ ಪ್ರತಿವಾದ ಆಲಿಸಿದ ನ್ಯಾಯಾಲಯ, ‘ವಿಚಾರಣೆಯನ್ನು ಒಂದು ವಾರಗಳ ಕಾಲ ಮುಂದೂಡೋಣ. ಅಷ್ಟರ ಹೊತ್ತಿಗೆ ನೀರು ಬಿಡುಗಡೆಯ ಮಾಹಿತಿಯನ್ನು ನಮ್ಮ ಮುಂದಿಡಿ. ಅಲ್ಲಿಯವರೆಗೂ ನೀರು ಬಿಡುಗಡೆ ಕುರಿತು ಸಿಡಬ್ಲ್ಯುಎಂಎ ಆದೇಶ ಪಾಲಿಸಿ’ ಎಂದು ಹೇಳಿ ವಿಚಾರಣೆಯನ್ನು ಆ.24ಕ್ಕೆ ಮುಂದೂಡಿತು. ಸುಪ್ರೀಂ ಆದೇಶ ಖಂಡಿಸಿ ಮಂಡ್ಯದಲ್ಲಿ ಪ್ರತಿಭಟನೆ:
15 ದಿನಗಳ ಕಾಲ ತಮಿಳುನಾಡಿಗೆ ನಿತ್ಯ 12 ಸಾವಿರ ಕ್ಯುಸೆಕ್ ನೀರು ಹರಿಸಬೇಕೆಂಬ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಪಾಲಿಸುವಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಕಾವೇರಿ ಕೊಳ್ಳದ ಜಿಲ್ಲೆಗಳಲ್ಲಿ ರೈತರ ಆಕ್ರೋಶ ಭುಗಿಲೆದ್ದಿದೆ. ಮಂಡ್ಯದ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಬಿಜೆಪಿಯವರು ಖಾಲಿ ಚೊಂಬು ಹಿಡಿದು ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ಟೈಯರ್‌ಗೆ ಬೆಂಕಿ ಹಾಕಲು ಯತ್ನಿಸಿದಾಗ ಪೊಲೀಸರು ತಡೆದಿದ್ದು, ಈ ವೇಳೆ, ಪಿಎಸ್ಐ ಮಣಿ ಅವರ ಕೈಗೆ ಗಾಯವಾಗಿದೆ. ಸಂಜಯ ವೃತ್ತದಲ್ಲಿ ರೈತರು, ಕನ್ನಡಪರ ಸಂಘಟನೆಗಳು ಬೆಂ-ಮೈ ಹೆದ್ದಾರಿ ತಡೆದು ಪ್ರತಿಭಟಿಸಿದರು. ಶ್ರೀರಂಗಪಟ್ಟಣದ ತಾಲೂಕು ಕಚೇರಿ ಎದುರು ರೈತರು ನೇಣು ಕುಣಿಕೆ ಹಿಡಿದು ಪ್ರತಿಭಟನೆ ನಡೆಸಿದರು. ಇದೇ ವೇಳೆ, ಮೈಸೂರು, ರಾಮನಗರ ಸೇರಿ ಇತರೆಡೆಯೂ ಪ್ರತಿಭಟನೆಗಳು ನಡೆದವು.