ಸಾರಾಂಶ
ಸಾಹಿತ್ಯ ಕೃತಿಗಳನ್ನು ಟೀಕೆ ಮಾಡುವುದು, ಅದರಲ್ಲಿರುವ ಕೊರತೆಗಳನ್ನು ಸೂಚಿಸುವುದು ಬಹಳ ಸುಲಭ ಎಂದು ಬೆನೆಡಿಕ್ಡ್ ಸಾಲ್ಡಾನ್ಹಾ ಹೇಳಿದರು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ವಿರಾಜಪೇಟೆ ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಆನಂದ ಕಾರ್ಲ ಅವರು ರಚಿಸಿದ ಪ್ರೇಮ ಪ್ರವಾಹ ಎಂಬ ಕವನ ಸಂಕಲನದ ಬಿಡುಗಡೆ ಕಾರ್ಯಕ್ರಮ ಕಾವೇರಿ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.ಕಾಲೇಜಿನ ಉಪ ಪ್ರಾಂಶುಪಾಲ ಬೆನೆಡಿಕ್ಟ್ ಸಾಲ್ಡಾನ್ಹಾ ಹಾಗೂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಎಂ. ನಾಣಯ್ಯ ಪುಸ್ತಕ ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಬೆನೆಡಿಕ್ಟ್ ಸಾಲ್ಡಾನ್ಹಾ ಅವರು, ಸಾಹಿತ್ಯ ಕೃತಿಗಳನ್ನು ಟೀಕೆ ಮಾಡುವುದು ಮತ್ತು ಅದರಲ್ಲಿರುವ ಕೊರತೆಗಳನ್ನು ಸೂಚಿಸುವುದು ಬಹಳ ಸುಲಭ. ಆದರೆ ಬರಹಗಾರನ ಬರಹದ ಹಿಂದಿರುವ ಪರಿಶ್ರಮವನ್ನು ಮೆಚ್ಚುವಂತಹ ಕೆಲಸವನ್ನು ಎಲ್ಲರೂ ಮಾಡಬೇಕು ಎಂದರು.ಪಿಯು ಕಾಲೇಜು ಪ್ರಾಂಶುಪಾಲ ಎನ್.ಎಂ. ನಾಣಯ್ಯ ಬರಹಗಾರರಿಗೆ ಶುಭ ಕೋರಿದರು.
ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಬಿ.ಬಿ. ಸುನಿಲ್ ಕುಮಾರ್ ಕವನ ಸಂಕಲನದ ಪರಿಚಯ ಮಾಡಿಕೊಟ್ಟರು. ಪುಸ್ತಕದ ಬರಹಗಾರ ಮತ್ತು ಪ್ರಾಂಶುಪಾಲ ಡಾ. ಆನಂದ್ ಕಾರ್ಲ ಮಾತನಾಡಿ, ದಿನನಿತ್ಯದ ಜೀವನದಲ್ಲಿ ಕಾಣುವಂತ ವಸ್ತು ವಿಷಯಗಳನ್ನು ಕೇಂದ್ರೀಕರಿಸಿ ನನ್ನ ಜೀವನದ ಅನುಭವಗಳೊಂದಿಗೆ ಸೇರಿಸಿ ಈ ಕವನ ಸಂಕಲನದ ರಚನೆ ಮಾಡಿದ್ದಾಗಿ ವಿವರಿಸಿದರು.ಕಾಲೇಜಿನ ಐಕ್ಯೂಎಸಿ ಸಂಚಾಲಕಿ ವೀಣಾ, ವಿದ್ಯಾರ್ಥಿ ಕ್ಷೇಮ ಪಾಲನಾ ಸಂಚಾಲಕಿ ಅಂಬಿಕಾ ಬಿ.ಯು, ಉಪನ್ಯಾಸಕಿ ವೀಣಾ ಇದ್ದರು.