ರಾಜ್ಯ ಸರ್ಕಾರ ಪಡಿತರ ವಿತರಕರಿಗೆ ಬಾಕಿಯಿರುವ ಕಮೀಷನ್ ಹಣವನ್ನು ಕೂಡಲೇ ಬಿಡುಗಡೆಗೊಳಿಸಬೇಕು. ಪಡಿತರ ವಿತರಣೆಯಲ್ಲಿ ಆಗುವ ಲೋಪದೋಷಗಳು ಮತ್ತು ಭ್ರಷ್ಟಾಚಾರ ತಡೆಯಲು ಪಡಿತರ ಸಾಗಾಟದ ಲಾರಿಗಳಿಗೆ ಜಿಪಿಎಸ್ ಅಳವಡಿಸಬೇಕು. ಎಲೆಕ್ಟ್ರಾನಿಕ್ ಸ್ಕೇಲ್‌ಗಳನ್ನು ಅಳವಡಿಸಿ, ಸಿಸಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿ ಪಾರದರ್ಶಕ ವ್ಯವಸ್ಥೆ ಮಾಡಬೇಕಿದ್ದು ಇದಕ್ಕೆ ಸರ್ಕಾರ ಮಂಜೂರು ಮಾಡಿದ್ದ 30 ಕೋಟಿ ರು. ಹಣವನ್ನು ಕೂಡಲೇ ಬಳಸಬೇಕು ಎಂದು ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಕೆ. ಕೃಷ್ಣಪ್ಪ ಆಗ್ರಹಿಸಿದರು.

ಶಿವಮೊಗ್ಗ: ರಾಜ್ಯ ಸರ್ಕಾರ ಪಡಿತರ ವಿತರಕರಿಗೆ ಬಾಕಿಯಿರುವ ಕಮೀಷನ್ ಹಣವನ್ನು ಕೂಡಲೇ ಬಿಡುಗಡೆಗೊಳಿಸಬೇಕು. ಪಡಿತರ ವಿತರಣೆಯಲ್ಲಿ ಆಗುವ ಲೋಪದೋಷಗಳು ಮತ್ತು ಭ್ರಷ್ಟಾಚಾರ ತಡೆಯಲು ಪಡಿತರ ಸಾಗಾಟದ ಲಾರಿಗಳಿಗೆ ಜಿಪಿಎಸ್ ಅಳವಡಿಸಬೇಕು. ಎಲೆಕ್ಟ್ರಾನಿಕ್ ಸ್ಕೇಲ್‌ಗಳನ್ನು ಅಳವಡಿಸಿ, ಸಿಸಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿ ಪಾರದರ್ಶಕ ವ್ಯವಸ್ಥೆ ಮಾಡಬೇಕಿದ್ದು ಇದಕ್ಕೆ ಸರ್ಕಾರ ಮಂಜೂರು ಮಾಡಿದ್ದ 30 ಕೋಟಿ ರು. ಹಣವನ್ನು ಕೂಡಲೇ ಬಳಸಬೇಕು ಎಂದು ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಕೆ. ಕೃಷ್ಣಪ್ಪ ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಕ್ಕೆ ಅನ್ನಭಾಗ್ಯದ ಯೋಜನೆಯ ಬಗ್ಗೆ ನಿಜವಾದ ಕಾಳಜಿ ಇದ್ದರೆ ಮೊದಲು ಪಡಿತರ ವ್ಯವಸ್ಥೆ ನಿರ್ವಹಿಸುವ ಕೆಳಮಟ್ಟದ ಅಧಿಕಾರಿಗಳನ್ನು ನಿಯಂತ್ರಿಸಬೇಕು. ಶೇ.೫ ಲೋಪ ಇದ್ದರೂ ಅದು ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಮಾತ್ರ ಬಯೋಮೆಟ್ರಿಕ್ ವ್ಯವಸ್ಥೆ ಇದೆ. ರಾಜ್ಯದ ೨೨ ಸಾವಿರ ಅಂಗಡಿಗಳಲ್ಲಿ ಎಲೆಕ್ಟ್ರಾನಿಕ್ ಸ್ಕೇಲ್, ಕಂಪ್ಯೂಟರ್ ಮತ್ತು ಪ್ರಿಂಟರ್ ಮೆಷಿನ್‌ನನ್ನು ಕೂಡ ಕಡ್ಡಾಯವಾಗಿ ಅಳವಡಿಸಲು ಇಲಾಖೆ ಸೂಚಿಸುತ್ತದೆ. ಆದರೆ ಸರಬರಾಜು ವ್ಯವಸ್ಥೆಯಲ್ಲಿನ ಪ್ರಮುಖ ಲೋಪದೋಷಗಳನ್ನು ಸರಿಪಡಿಸಲು ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ಹೇಳಿದರು.

ಪಡಿತರ ವಿತರಕರಿಗೆ ನಾಲ್ಕು ತಿಂಗಳು ಕೇಂದ್ರದ ಮತ್ತು ಮೂರು ತಿಂಗಳು ರಾಜ್ಯದ ಕಮೀಷನ್ ಬರಬೇಕಾಗಿದೆ. ಸರಕಾರ ಹಣ ಬಿಡುಗಡೆಯಾದ ಮೇಲೆ ಅಧಿಕಾರಿಗಳು ಪಡಿತರ ಅಂಗಡಿಗಳಿಂದ ಕಮೀಷನ್ ಲೆಕ್ಕವನ್ನು ಪಡೆಯುತ್ತಾರೆ. ಮೊದಲೇ ಅದನ್ನು ಅಪ್‌ಲೋಡ್ ಮಾಡಿ ಬಿಡುಗಡೆಯಾದ ಕೂಡಲೇ ಪ್ರತಿ ತಿಂಗಳ 5ನೇ ತಾರೀಖಿನೊಳಗೆ ಕಮೀಷನ್ ಹಣವನ್ನು ಪಡಿತರ ವಿತರಕರ ಖಾತೆಗೆ ಜಮಾಮಾಡಬೇಕು ಎಂದು ಒತ್ತಾಯಿಸಿದರು.ಪಡಿತರ ವಿತರಣೆಯಲ್ಲಿ ಗ್ರಾಹಕರಿಗೆ ಮತ್ತು ವಿತರಕರಿಗೆ ಇರುವ ಸಮಸ್ಯೆಗಳನ್ನು ಆಧರಿಸಿದ ಸರ್ಕಾರಿ ನ್ಯಾಯಬೆಲೆ ಅಂಗಡಿ ಎಂಬ ಚಿತ್ರವನ್ನು ಬರುವ ಸಂಕ್ರಾಂತಿಗೆ ಬಿಡುಗಡೆ ಮಾಡಲಿದ್ದು, ರಾಜ್ಯದ ಎಲ್ಲಾ ಕಾರ್ಡುದಾರರು ಇದನ್ನು ನೋಡಲೇಬೇಕು ಎಂದರು.ಕೇಂದ್ರದಿಂದ 2,15,000 ಮೆಟ್ರಿಕ್ ಟನ್ ಅಕ್ಕಿ ಬರುತ್ತದೆ. ರಾಜ್ಯ ಕೂಡ ಅಷ್ಟೇ ಅಕ್ಕಿಯನ್ನು ಕೆಜಿಗೆ 25 ರು.ಗಳಂತೆ ಪಡೆದು ಕಾರ್ಡುದಾರರಿಗೆ ವಿತರಿಸಬೇಕು. ಆದರೆ ಕೆಲವೊಂದು ತಿಂಗಳಲ್ಲಿ ರಾಜ್ಯ ಸರ್ಕಾರ ಖರೀದಿಯಲ್ಲಿ ವ್ಯತ್ಯಾಸ ಮಾಡುತ್ತದೆ. ಆಗ ವಿತರಣೆಯಲ್ಲೂ ವ್ಯತ್ಯಾಸವಾಗುತ್ತದೆ. ಪಡಿತರ ಅಂಗಡಿಗಳಿಗೆ ಇಕೆವೈಸಿ ಲಿಂಕ್‌ಮಾಡಿದ ಹಣವನ್ನು ಕೂಡ ಸರ್ಕಾರ ಇನ್ನೂ ಬಿಡುಗಡೆ ಮಾಡಿಲ್ಲ. ಸರ್ಕಾರ ಮೊದಲು ಪಡಿತರ ವ್ಯವಸ್ಥೆಯನ್ನು ಪಾರದರ್ಶಕವಾಗಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಮುಖರಾದ ಚನ್ನಕೇಶವಗೌಡ, ಲೋಕೇಶಪ್ಪ, ಸಿದ್ಧಲಿಂಗಪ್ಪ, ಮುರುಗೇಶ್, ನಾಗೇಶ್, ಶರತ್, ರಾಜೇಂದ್ರ, ಲಕ್ಷ್ಮೀಕಾಂತ್ ಮೊದಲಾದವರಿದ್ದರು.