ವಿಶೇಷ ಅನುದಾನ ಬಿಡುಗಡೆಗೊಳಿಸಿ ರೈತರಿಗೆ ನ್ಯಾಯ ಒದಗಿಸಿ-ಬಳ್ಳಾರಿ

| Published : Oct 01 2024, 01:36 AM IST

ವಿಶೇಷ ಅನುದಾನ ಬಿಡುಗಡೆಗೊಳಿಸಿ ರೈತರಿಗೆ ನ್ಯಾಯ ಒದಗಿಸಿ-ಬಳ್ಳಾರಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರೀಯ ಬ್ಯಾಂಕ್‌ ಹಾಗೂ ಸಹಕಾರಿ ಸಂಘಗಳ ಕಾಯ್ದೆಗಳಿಂದ ಪಿಎಲ್‌ಡಿ ಬ್ಯಾಂಕ್ ಪ್ರತ್ಯೇಕವಾಗಿದ್ದು, ಆರ್ಥಿಕವಾಗಿ ಅಭಿವೃದ್ಧಿಗೊಳ್ಳಲು ಸಂಪೂರ್ಣ ಸಾಲಮನ್ನಾ ಮತ್ತು ವಿಶೇಷ ಅನುದಾನ ಬಿಡುಗಡೆಗೊಳಿಸಿ ಸಂಕಷ್ಟದಲ್ಲಿರುವ ರೈತ ಸಮುದಾಯಕ್ಕೆ ನ್ಯಾಯ ಒದಗಿಸುವಂತೆ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಆಗ್ರಹಿಸಿದರು.

ಬ್ಯಾಡಗಿ: ರಾಷ್ಟ್ರೀಯ ಬ್ಯಾಂಕ್‌ ಹಾಗೂ ಸಹಕಾರಿ ಸಂಘಗಳ ಕಾಯ್ದೆಗಳಿಂದ ಪಿಎಲ್‌ಡಿ ಬ್ಯಾಂಕ್ ಪ್ರತ್ಯೇಕವಾಗಿದ್ದು, ಆರ್ಥಿಕವಾಗಿ ಅಭಿವೃದ್ಧಿಗೊಳ್ಳಲು ಸಂಪೂರ್ಣ ಸಾಲಮನ್ನಾ ಮತ್ತು ವಿಶೇಷ ಅನುದಾನ ಬಿಡುಗಡೆಗೊಳಿಸಿ ಸಂಕಷ್ಟದಲ್ಲಿರುವ ರೈತ ಸಮುದಾಯಕ್ಕೆ ನ್ಯಾಯ ಒದಗಿಸುವಂತೆ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಆಗ್ರಹಿಸಿದರು.

ಪಟ್ಟಣದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಬ್ಯಾಂಕಿನ ವಾರ್ಷಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಈ ಹಿಂದೆ 2 ಬಾರಿ ಸಾಲಮನ್ನಾ ಘೋಷಣೆ ವೇಳೆ ರಾಷ್ಟ್ರೀಯ ಹಾಗೂ ಸಹಕಾರಿ ಸಂಘಗಳ ರೈತರಿಗೆ ಮಾತ್ರ ಪ್ರಯೋಜನ ದೊರೆತಿದ್ದು, ಪಿಎಲ್‌ಡಿ ಬ್ಯಾಂಕಿನಲ್ಲಿ ಸಾಲ ಪಡೆದ ರೈತ ಸಮುದಾಯಕ್ಕೆ ಇದರ ಲಾಭ ಸಿಗಲಿಲ್ಲ, ಪರಿಣಾಮ ಬ್ಯಾಂಕ್ ಅಭಿವೃದ್ಧಿಗೆ ಹಿನ್ನಡೆ ಉಂಟಾಗಿದ್ದು, ರೈತರಿಗೆ ದೊಡ್ಡ ಮಟ್ಟದ ಸಾಲ ಸಿಗದಂತಾಗಿದೆ. ಕಳೆದ ಎರಡು ವರ್ಷದಿಂದ ಅತೀವೃಷ್ಟಿ, ಅನಾವೃಷ್ಟಿ ವಿವಿಧ ಸಂಕಷ್ಟಗಳಲ್ಲಿ ರೈತರು ಸಿಲುಕಿದ್ದು ಅವರ ನೆರವಿಗೆ ಸರ್ಕಾರ ಮುಂದಾಗಬೇಕು. ಸುಸ್ತಿಸಾಲ ಸೇರಿದಂತೆ ಎಲ್ಲ ಸಾಲಗಾರರಿಗೆ ಅನುಕೂಲವಾಗಲು ಆರ್ಥಿಕ ನೆರವು ಒದಗಿಸುವಂತೆ ಆಗ್ರಹಿಸಿದರು.

ಕಳೆದ 2023-24ರಲ್ಲಿ ₹ 1 ಕೋಟಿ ಹಾಗೂ 2024-25ರಲ್ಲಿ ಕೇವಲ ₹ 75 ಲಕ್ಷ ಸಾಲದ ಹಣ ಮಂಜೂರಾಗಿದೆ, ಪ್ರಸ್ತುತ 6 ಸಾವಿರಕ್ಕೂ ಹೆಚ್ಚು ಖಾತೆದಾರರಿದ್ದು, ಪ್ರತಿ ಖಾತೆಗೂ ₹ 2 ಸಾವಿರ ದೊರೆಯುವುದಿಲ್ಲ, ಕಾಗದ ಪತ್ರಗಳಿಗೆ 4 ಸಾವಿರ ಖರ್ಚಾಗಲಿದ್ದು, ಬ್ಯಾಂಕಿನಿಂದ ರೈತರಿಗೆ ನ್ಯಾಯ ಒದಗಿಸಲು ಸಾಧ್ಯವೇ? ವಾರ್ಷಿಕವಾಗಿ ಆಡಳಿತ ವೆಚ್ಚ ಸೇರಿದಂತೆ ವಿವಿಧ ವೆಚ್ಚಗಳು 10 ಲಕ್ಷ ದಾಟಲಿದ್ದು, ಇಂತಹ ಸಂದರ್ಭದಲ್ಲಿ ಬ್ಯಾಂಕ್‌ ಲಾಭದ ಹೆಜ್ಜೆ ಹಾಕುವುದು ಹೇಗೆ? ಎಂದು ಪ್ರಶ್ನಿಸಿದರು.

ಕಾಸ್ಕಾರ್ಡ್‌ ಬ್ಯಾಂಕ್ ನಿರ್ದೇಶಕ ಸುರೇಶ ಯತ್ನಳ್ಳಿ ಮಾತನಾಡಿ, ರೈತರು ಮಳೆ ಬೆಳೆಯಿಲ್ಲದೆ ಆತಂಕ ಎದುರಿಸುತ್ತಿದ್ದಾರೆ. ಬ್ಯಾಂಕಿಗೆ ಸಾಲ ಸರಿಯಾಗಿ ಮರಳುತ್ತಿಲ್ಲ, ಅನಿವಾರ್ಯವಾಗಿ ಆರ್ಥಿಕ ವ್ಯವಸ್ಥೆ ಹದಗೆಡಲಿದೆ. ಆದಾಯ ಬರುವ ನಿಟ್ಟಿನಲ್ಲಿ ಹೊಸ ಚಿಂತನೆ ನಡೆಸಬೇಕಿದೆ ಎಂದ ಅವರು, ಶೇರು ಹಣವನ್ನು ₹ 500ರಿಂದ ₹ 1 ಸಾವಿರಕ್ಕೆ ಏರಿಕೆ ಮಾಡಲು ರಾಜ್ಯ ಪಿಕಾರ್ಡ್‌ ಬ್ಯಾಂಕ್ ನಿರ್ದೇಶನವಿದೆ ಎಂದರು.

ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಜಯಪ್ಪ ಎಲಿ, ನಿರ್ದೇಶಕರಾದ ಮರಡೆಪ್ಪ ಹೆಡಿಯಾಲ, ಮಹದೇವಪ್ಪ ಶಿಡೇನೂರ, ಶಿವಯೋಗಿ ಉಕ್ಕುಂದ, ಅರುಣಕುಮಾರ ಕರಡೇರ, ಸಂಕೇತಗೌಡ ಪಾಟೀಲ, ಹನುಮಗೌಡ್ರ ಪಾಟೀಲ, ಲತಾ ಸಂಕಣ್ಣನವರ, ಪ್ರಶಾಂತ ಮುದಕಮ್ಮನವರ, ಮಾರ್ತಾಂಡಪ್ಪ ಮಾದರ, ಉಮೇಶ ಚೌದರಿ, ಗಂಗಣ್ಣ ಎಲಿ, ಪುಷ್ಟಾ ಪಾಟೀಲ, ರೇಣುಕವ್ವ ಕರಿಯಮ್ಮನವರ, ಮಹದೇವಪ್ಪ ಓಲೇಕಾರ, ಮುರಿಗೆಪ್ಪ ಶೆಟ್ಟರ, ಜಯಣ್ಣ ಮಲ್ಲಿಗಾರ, ಶಂಕ್ರಪ್ಪ ಮಾತನವರ, ಚಂದ್ರಪ್ಪ ಮುಚ್ಚಟ್ಟಿ, ವ್ಯವಸ್ಥಾಪಕಿ ರೇಖಾ ಭಜಂತ್ರಿ, ಮರಡೆಪ್ಪ ಹಿಂದಿನಮನಿ, ವಿನಯ ಕುಲಕರ್ಣಿ ಇನ್ನಿತರರಿದ್ದರು.